ಬಾಯಿ ಬಾರದ ಮಗಳ ಜೊತೆ, ಬಿಸಿಲಲ್ಲಿ ಅಡಿಗೆ ಮಾಡುತ್ತಿದ್ದೇನೆ! ಒಡೆದು ಹಾಕಿದ ಮನೆ ಪುನಃ ಕಟ್ಟಿಕೊಡಿ! ಶಿವಮೊಗ್ಗದ ಬಡಮಹಿಳೆಯ ಅನಾಗರಿಕ ಬದುಕಿಗೆ ನ್ಯಾಯ ಒದಗಿಸಬೇಕಿದೆ ಜಿಲ್ಲಾಡಳಿತ

 ಬದುಕಿಗೊಂದು ಸೂರು, ಜೀವನಕ್ಕೊಂದು ಆಧಾರಕ್ಕಾಗಿ ಪ್ರತಿಯೊಬ್ಬರು ಹೋರಾಡುತ್ತಿರುತ್ತಾರೆ. ಆದರೆ, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೋಡೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕುಸುಗುಂಡಿ ಗ್ರಾಮದಲ್ಲಿ ವೃದ್ಧೆಯೊಬ್ಬರು ತನ್ನ ಮನೆಯನ್ನು ಕಳೆದುಕೊಂಡು, ಈಗ ಸಿಕ್ಕಸಿಕ್ಕವರ ಬಳಿ ಅರ್ಜಿ ಹಿಡಿದುಕೊಂಡು ಓಡಾಡುತ್ತಿದ್ದಾರೆ.

ಅಷ್ಟೆಅಲ್ಲದೇ ಅಜ್ಜಿಯ ಅಹವಾಲಿಗೆ ಪ್ರತಿಯಾಗಿ, ಬೆದರಿಕೆ ಹಾಗೂ ಕಣ್ಣೀರು ಹಾಕಿಸುವ ಕೆಲಸಗಳು ಆಗುತ್ತಿವೆ. ಈ ಸಂಬಂಧ ಖುದ್ದು ಜಿಲ್ಲಾಧಿಕಾರಿಯವರೇ ಮುತುವರ್ಜಿ ವಹಿಸಬೇಕಾದ ಅಗತ್ಯವಿದೆ. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಒಳಗಾಗಿ ಅನಾಗರಿಕರ ರೀತಿಯಲ್ಲಿ ಬದುಕುವಂತಹ ಸ್ಥಿತಿ ಎದುರಾಗಿರುವ ಬಡ ಮಹಿಳೆಗೆ ನ್ಯಾಯ ಸಿಗಬೇಕಿದೆ. 

ಕುಸುಗುಂಡಿಯ ಗ್ರಾಮದಲ್ಲಿ 70 ವರ್ಷದ ರೇವತಿ ಎಂಬವರ ಹಳೆಯ ಮನೆಯೊಂದಿತ್ತು. ಅಲ್ಲಿ ತನ್ನ ವಿಕಲಚೇತನ ಮಗಳ ಜೊತೆಗೆ ಅವರು ವಾಸಿಸುತ್ತಿದ್ದರು. ಹಾಗೋ ಹೀಗೋ ಮಾಡಿ ಒಪ್ಪೊತ್ತಿನ ಕೂಳಿನಲ್ಲಿ, ಜೀವನ ಸಾಗಿಸ್ತಿದ್ದ ಮಹಿಳೆಯ ಬದುಕಲ್ಲೀಗ ನರಕ ಕಾಣುತ್ತಿದೆ. ಇಲ್ಲಿನ ಸರ್ವೆ ನಂಬರ್​ 10 ರಲ್ಲಿ ವಾಸಿಸುತ್ತಿರುವ ಮಹಿಳೆಗೆ ಪಂಚಾಯಿತಿಯಿಂದ ಮನೆ ಕಟ್ಟಿಕೊಳ್ಳಲು 5 ಲಕ್ಷ ರೂಪಾಯಿ ಮಂಜೂರಾಗಿತ್ತು.

ಆರಂಭದ ಉಮೇದಿನಲ್ಲಿ ಪಂಚಾಯಿತಿಯವರೇ ಇರುವ ಮನೆಯನ್ನ ಹಂಚು, ಪಿಕಾಸಿಗಳನ್ನ ತೆರದು, ಹಳೇಯ ಮನೆಯನ್ನು ಓಪನ್​ ಹೌಸ್ ಮಾಡಿಟ್ಟು ಹೋಗಿದ್ದರು. ಅದಾದ ಬಳಿಕ ವೃದ್ಧೆಯ ಮನೆ ಕಟ್ಟುವ ಮಾತು ಹಾಗಿರಲಿ. ಅರ್ಜಿಯ ಅಹವಾಲನ್ನು ಸಹ ಯಾವೊಬ್ಬ ಅಧಿಕಾರಿಗಳು ಸ್ವೀಕರಿಸುತ್ತಿಲ್ಲ. ಗೋಳು ಹೇಳಿಕೊಳ್ಳಲು ಕಚೇರಿಗಳ ಮೆಟ್ಟಿಲು ನೆಲದ ಮೇಲೆ ಕುಕ್ಕುರುಗಾಲು ಹಾಕಿ ಕೈ ಮುಗಿದು ಕುಳಿತರೂ, ಅಜ್ಜಿಯನ್ನು ಬೈದು ಹೆದರಿಸಿ ಕಳುಹಿಸುತ್ತಿದ್ದಾರೆ ಎಂಬ ಆರೋಪವಿದೆ. 

ಇನ್ನೂ ವೃದ್ಧೆ ಬಾಯಿ ಬರದ ಮಗಿನ ಹಾಕ್ಕೊಂಡು ಬಿಸಿಲಲ್ಲಿ ಅಡಿಗಿ ಮಾಡ್ಕೊಂಡು ಕೂಕಂಡಿದ್ದೀನಿ ಯಾರಾದರೂ ಕಾಪಾಡಿ, ಚೂರು ಉಪಕಾರ ಮಾಡಿಕೊಡಿ ಎಂದು ಅಂಗಲಾಚುತ್ತಿದ್ದಾಳೆ. ಆದರೆ, ಅಧಿಕಾರಿಗಳ ಅಂತಃಕರಣ ಕರಗುತ್ತಿಲ್ಲ. ಹಾಗಾಗಿಯೇ ಇಂತಹ ಬಡವರಿಗೆ ನೆರವು ನೀಡುವ ಭರವಸೆ ಒದಗಿಸಿದ ಮಾನ್ಯ ಜಿಲ್ಲಾಧಿಕಾರಿಯವರೇ ಈ ಕುಟುಂಬಕ್ಕೊಂದು ನ್ಯಾಯ ಒದಗಿಸಬೇಕಿದೆ. ಅಂದಹಾಗೆ, ಇಲ್ಲಿ ಅಜ್ಜಿಯ ಮನೆ ಕಟ್ಟಲು ರಸ್ತೆಯಿಲ್ಲ ಎಂಬ ವಾದ ಕೇಳಿಬರುತ್ತಿದೆ. ಇರುವ ರಸ್ತೆಯನ್ನು ಒತ್ತುವರಿ ಮಾಡಲಾಗಿದ್ದು, ಅದೇ ವಿಚಾರಕ್ಕಾಗಿ ಗಲಾಟೆಯು ನಡೆದಿದ್ದು ಪೊಲೀಸ್ ಕಂಪ್ಲೇಂಟ್ ಕೂಡ ಆಗಿದೆಯಂತೆ.

ಇದೇ ಕಾರಣವಿಟ್ಟು ಪಂಚಾಯಿತಿ ಅಧಿಕಾರಿಗಳು ವೃದ್ಧೆಗೆ ಮನೆ ಕಟ್ಟಿಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಆರೋಪ.  ಆದರೆ ಕೋರ್ಟು, ಕಟ್ಲೆ, ಕಾನೂನು ಏನೇಂದರೇ ಏನೂ ತಿಳಿಯದ ಮಹಿಳೆಯೊಬ್ಬಳು, ತನ್ನ ಮಗಳಿಗಾದರು ನೆಲೆಮಾಡಿಕೊಡಬೇಕು, ಅವಳನ್ನ ಬೀದಿ ಬಿಟ್ಟು ಹೋಗಲು ಆಗುತ್ತಾ ಎಂದೇ ಪ್ರಶ್ನಿಸುತ್ತಿದ್ದಾಳೆ. ಅಲ್ಲದೇ ಇಳಿ ವಯಸ್ಸಿನಲ್ಲಿ ಪ್ರತಿಭಟನೆ ನಡೆಸ್ತಿದ್ದಾರೆ. ಅರ್ಜಿ ಹಿಡಿದು ಸಿಕ್ಕವರ  ಕೈ ಕಾಲು ಹಿಡಿದು ಕಚೇರಿಗಳ ಮುಂದೆ ಪಾಠ ಹೇಳಿಕೊಟ್ಟವರ ಹಾಗೆ ಬೇಕೇ ಬೇಕು ಮನೆ ಬೇಕು ಎನ್ನುವ ವೃದ್ಧ ಜೀವದಲ್ಲಿ ಅಧಿಕಾರಿಗಳಿಗೆ ಪ್ರಾಮಾಣಿಕತೆ ಕಾಣುತ್ತಿಲ್ಲವೆ ಎಂಬುದು ಸ್ಥಳೀಯರ ಪ್ರಶ್ನೆ.

ಅಜ್ಜಿ ಹಾಗೂ ಅಜ್ಜಿಮನೆಯ ಅವಸ್ಥೆ ಕಂಡು ಊರಲ್ಲಿರೋ ಯುವಕರು, ಮುಖಂಡರು, ಚೂರುಪಾರು ಸಹಾಯ ಮಾಡುತ್ತಿದ್ದಾರೆ. ಆದರೆ, ವ್ಯವಸ್ಥೆಯೇ ಇಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದಕ್ಕೆ ಉತ್ತರ ಜಿಲ್ಲಾಡಳಿತ ನೀಡಬೇಕು. ಸದ್ಯ ವೃದ್ಧೆ ತಿಳಿದವರ ಸಹಾಯ ಪಡೆದು ಮನೆ ಕಟ್ಟಲು ನೆರವಾಗಿ ಎಂದು ಸಾಗರ ಉಪ ವಿಭಾಗಕ್ಕೆ ಅರ್ಜಿ ಬರೆದು ನ್ಯಾಯ ಕೋರುತ್ತಿದ್ದಾರೆ. ವೃದ್ಧೆ ರೇವತಿ ಸಲ್ಲಿಸಿದ ಅರ್ಜಿ ಇಲ್ಲಿದೆ! ಈಗಲಾದರೂ ಅಜ್ಜಿಗೆ ನ್ಯಾಯ ಸಿಗುತ್ತಾ ಎಂಬುದನ್ನ ಕಾದು ನೋಡಬೇಕಿದೆ.




Post a Comment

Previous Post Next Post