ಲಂಚ ಪ್ರಕರಣ: ಜಾಮೀನು ಮೇಲೆ ಹೊರ ಬಂದ ಶಾಸಕ ಮಾಡಾಳ್, ಬಿಜೆಪಿ ಕಣ್ಣು ಕೆಂಪಗಾಗಿಸಿದ ವಿಜಯೋತ್ಸವ!

 ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡ ಪ್ರತ್ಯಕ್ಷವಾದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಕುಟುಂಬಸ್ಥರು, ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಿದ್ದು, ಈ ಬೆಳವಣಿಗೆ ಬಿಜೆಪಿಗೆ ಮುಜುಗರವನ್ನುಂಟು ಮಾಡಿದೆ.

                                 ವಿಜಯೋತ್ಸವ ಆಚರಿಸುತ್ತಿರುವ ಬಿಜೆಪಿ ಕಾರ್ಯಕರ್ತರು.

By : Rekha.M
Online Desk

ಬೆಂಗಳೂರು/ದಾವಣಗೆರೆ: ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡ ಪ್ರತ್ಯಕ್ಷವಾದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಕುಟುಂಬಸ್ಥರು, ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಿದ್ದು, ಈ ಬೆಳವಣಿಗೆ ಬಿಜೆಪಿಗೆ ಮುಜುಗರವನ್ನುಂಟು ಮಾಡಿದೆ.

ಚುನಾವಣಾ ಸಂದರ್ಭದಲ್ಲಿ ಲೋಕಾಯುಕ್ತ ದಾಳಿಯಿಂದಾಗಿ ಈಗಾಗಲೇ ಬಿಜೆಪಿ ಜರ್ಜರಿತವಾಗಿದ್ದು, ಇದರ ನಡುವಲ್ಲೇ ಕಾರ್ಯಕರ್ತರು ಮಾಡಾಳ್ ಅವರಿಗೆ ಅದ್ಧೂರಿಯಾಗಿ ಸ್ವಾಗತ ಕೋರಿದ್ದು ಬಿಜೆಪಿಯ ಕಣ್ಣು ಕೆಂಪಗಾಗುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂತಹ ಆಚರಣೆಗಳನ್ನು ನಡೆಸದಂತೆ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.

ಮಾರ್ಚ್ 2 ರಂದು ಬೆಂಗಳೂರಿನಲ್ಲಿ ಲೋಕಾಯುಕ್ತರು ನಡೆಸಿದ ದಾಳಿಯಲ್ಲಿ ಶಾಸಕರ ಪುತ್ರ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಅವರ ಕಚೇರಿಯಲ್ಲಿ 8 ಕೋಟಿ ರೂ ಪತ್ತೆಯಾಗಿತ್ತು. ಈ ಪ್ರಕರಣದ ಬಳಿಕ ಮಾಡಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ದಾವಣಗೆರೆ ಬಿಜೆಪಿ ಜಿಲ್ಲಾಧ್ಯಾಕ್ಷ ವೀರೇಶ್ ಹನಗವಾಡಿ ಅವರು, ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಸದಸ್ಯರನ್ನು ಉಚ್ಚಾಟಿಸುವ ನಿರ್ಧಾರವನ್ನು ಬಿಜೆಪಿಯ ಶಿಸ್ತು ಸಮಿತಿಯು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಉಚ್ಛಾಟನೆ ಮಾಡುವುದಾದರೆ, ಮೊದಲು ಬಿಜೆಪಿ ಶಿಸ್ತು ಸಮಿತಿಯು ಸದಸ್ಯನಿಗೆ ಸೂಕ್ತ ನೋಟಿಸ್ ನೀಡುತ್ತದೆ. ಆದರೆ, ಅಂತಹ ಯಾವುದೇ ನೋಟಿಸ್ ಗಳನ್ನು ಜಾರಿ ಮಾಡಲಾಗಿಲ್ಲ. ಈಗಾಗಲೇ ಮಾಡಾಲ್ ಅವರು ಆಘಾತಕ್ಕೊಳಗಾಗಿದ್ದು, ಪಕ್ಷದೊಂದಿಗೆ ಮಾತುಕತೆ ನಡೆಸಿರಬಹುದು. ಹೀಗಾಗಿಯೇ ನೋಟಿಸ್ ಜಾರಿಯಾಗಿಲ್ಲ ಎಂದು ತಿಳಿಸಿದ್ದಾರೆ.

ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ್ದ ಮಾಡಾಳ್ ವಿರೂಕಾಕ್ಷಪ್ಪ ಅವರು, ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ಇದೆಲ್ಲದಕ್ಕೂ ಇನ್ನು 48 ಗಂಟೆಗಳಲ್ಲಿ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿ ಎಲ್ಲವನ್ನೂ ಹೇಳುತ್ತೇನೆ. ನಾನು ಎಲ್ಲಿಗೂ ಓಡಿಹೋಗಿರಲಿಲ್ಲ. ಇಲ್ಲಿಯೇ ಇದ್ದೆ, ಈ ರೀತಿ ಗಂಭೀರ ಆರೋಪ ಬಂದಿದ್ದರಿಂದ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲವಷ್ಟೆ. ಊರಿನಲ್ಲೇ ಇದ್ದೆ ಎಂದು ಹೇಳಿದ್ದರು.

ಅಡಿಕೆ ತೋಟ, ಕ್ರಷರ್‌ನಿಂದದ ಬಂದ ಹಣವನ್ನು ಮನೆಯಲ್ಲಿಟ್ಟಿದ್ದೆವು, ಲೋಕಾಯುಕ್ತ ದಾಳಿ ವೇಳೆ ಸಿಕ್ಕ ಹಣವನ್ನು ವಶಕ್ಕೆ ಪಡೆದಿದ್ದಾರೆ. ಆ ಹಣಕ್ಕೆ ನಮ್ಮ ಬಳಿ ದಾಖಲೆಯಿದೆ, ಮತ್ತೆ ಪಡೆದುಕೊಳ್ಳುತ್ತೇವೆ. ಕೆಎಸ್‌ಡಿಎಲ್‌ ಅಧ್ಯಕ್ಷನಾಗಿ ನಿಯಮಬಾಹಿರ ಕೆಲಸ ಮಾಡಿಲ್ಲ, ಪಕ್ಷ ತಾಯಿಯಿದ್ದಂತೆ, ಪಕ್ಷಕ್ಕೆ ಎಂದೂ ದ್ರೋಹ ಮಾಡುವುದಿಲ್ಲ, ಸಿಎಂ ಬೊಮ್ಮಾಯಿ ನಿಷ್ಪಕ್ಷಪಾತ ತನಿಖೆ ಮಾಡುವುದಾಗಿ ಹೇಳಿದ್ದಾರೆ. 48 ಗಂಟೆಯೊಳಗೆ ತನಿಖಾಧಿಕಾರಿ ಮುಂದೆ ಹಾಜರಾಗುತ್ತೇನೆಂದು ತಿಳಿಸಿದ್ದರು.

ಪಕ್ಷದಿಂದ ಉಚ್ಛಾಟಿಸುವ ವಿಚಾರ ಕುರಿತು ಮಾತನಾಡಿ, ಅಂತಹ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಕ್ಲೀನ್ ಚಿಟ್ ಪಡೆದುಕೊಂಡ ಬಳಿಕ ಪಕ್ಷಕ್ಕೆ ಮರಳಿ ಸೇರ್ಪಡೆಗೊಳ್ಳುತ್ತೇನೆಂದು ಹೇಳಿದರು.


Post a Comment

Previous Post Next Post