ಶೀಘ್ರದಲ್ಲೇ ಮಿಥೆನಾಲ್ ಮಿಶ್ರಿತ ಇಂಧನದಿಂದ ಸಂಚರಿಸುವ ಬಿಎಂಟಿಸಿ ಬಸ್'ಗಳು ನಗರದ ರಸ್ತೆಗಳಲ್ಲಿ ಸಂಚಾರ ಆರಂಭಿಸಲಿವೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಅಶೋಕ್ ಲೇಲ್ಯಾಂಡ್‌ನ ಎಂ100 ಟ್ರಕ್ ಮತ್ತು ಬಿಎಂಟಿಸಿಯ ಮೆಥನಾಲ್-ಡೀಸೆಲ್ ಮಿಶ್ರಿತ (ಎಂಡಿ 15) ಬಸ್‌ಗಳಿಗೆ ಭಾನುವಾರ ಬೆಂಗಳೂರಿನ ವಿಧಾನಸೌಧದಲ್ಲಿ ಚಾಲನೆ ನೀಡಿದರು.
ಬೆಂಗಳೂರು: ಶೀಘ್ರದಲ್ಲೇ ಮಿಥೆನಾಲ್ ಮಿಶ್ರಿತ ಇಂಧನದಿಂದ ಸಂಚರಿಸುವ ಬಿಎಂಟಿಸಿ ಬಸ್'ಗಳು ನಗರದ ರಸ್ತೆಗಳಲ್ಲಿ ಸಂಚಾರ ಆರಂಭಿಸಲಿವೆ.
ರಾಜ್ಯದ ಮೊದಲ ಬಸ್ ಅನ್ನು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾನುವಾರ ಲೋಕಾರ್ಪಣೆ ಮಾಡಿದರು.
ಬಸ್ ಗಳಿಗೆ ಚಾಲನೆ ನೀಡಿದ ಗಡ್ಕರಿಯವರು, ಈ ಉಪಕ್ರಮವು ಮಾಲಿನ್ಯ ಮತ್ತು ತೈಲ ಆಮದನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು.
ಮೆಥನಾಲ್ ಅನ್ನು ಡೀಸೆಲ್‌ನೊಂದಿಗೆ ಬೆರೆಸಲಾಗುತ್ತದೆ. ಇನ್ನು ಎಂಡಿ 15 ಎಂದು ಕರೆಯಲಾಗುತ್ತದೆ. ಬಿಎಂಟಿಸಿಯಲ್ಲಿ ಪ್ರಾಯೋಗಿಕವಾಗಿ 20 ವಾಹನಗಳಲ್ಲಿ 3 ತಿಂಗಳ ಅವಧಿಕೆ ಈ ಪ್ರಯೋಗವನ್ನು ಮಾಡಲು ಉದ್ದೇಶಿಸಲಾಗಿದೆ. ಈಗಾಗಲೇ 400 ಲೀಟರ್ ಎಂಡಿ15 ಇಂಧನ ಮಿಶ್ರಣವನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸರಬರಾಜು ಮಾಡಿದೆ.
ಮಿಥೆನಾಲ್ ಬಳಸುವುದರಿಂದ ದೇಶಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಬಹುದು. ಮಿಥೆನಾಲ್ ಇಂಧನದ ದರವು ಡೀಸೆಲ್ ದರಕ್ಕಿಂತ ಕಡಿಮೆ ಇರುತ್ತದೆ. ಹೀಗಾಗಿ ನೀತಿ ಆಯೋಗದ ಮಾರ್ಗದರ್ಶನದಲ್ಲಿ ಮಿಥೆನಾಲ್ ಉಳಿತಾಯ ಕಾರ್ಯಕ್ರಮದ ಅಂಗವಾಗಿ ಈ ಪ್ರಯೋಗವನ್ನು ಹಮ್ಮಿಕೊಳ್ಳಲಾಗಿದೆ.
“ಭಾರತೀಯ ಪೆಟ್ರೋಲಿಯಂ ಇತಿಹಾಸದಲ್ಲಿ ಇದೊಂದು ಮಹತ್ತರವಾದ ದಿನ. ಪೆಟ್ರೋಲಿಯಂಗೆ ಪರ್ಯಾಯವಾಗಿ ಇಂದು ನಾವು ಮಿಥೆನಾಲ್ ಮಿಶ್ರಿತ ಇಂಧನವನ್ನು ಪರಿಚಯಿಸಿದ್ದೇವೆ. ಪ್ರತಿ ವರ್ಷ ನಾವು 16,000 ಕೋಟಿ ರೂ.ಗೆ ತೈಲ ಆಮದು ಮಾಡಿಕೊಳ್ಳುತ್ತಿದ್ದೇವೆ. ಭಾರತದಲ್ಲಿ 34 ಕೋಟಿ ವಾಹನಗಳಿವೆ. ಸಾರಿಗೆ ವಲಯವು ಅತಿ ಹೆಚ್ಚು ಮಾಲಿನ್ಯಕಾರಕಗಳಲ್ಲಿ ಒಂದಾಗಿದೆ. ಈ ಮಿಶ್ರಣದಿಂದ ಆಮದುಗಳನ್ನು ಕಡಿಮೆ ಮಾಡಬಹುದು ಮತ್ತು ಮಾಲಿನ್ಯವನ್ನು ಕಡಿತಗೊಳಿಸಬಹುದುಕಕ ಎಂದು ಗಡ್ಕರಿಯವರು ಹೇಳಿದ್ದಾರೆ.
ಸಾರ್ವಜನಿಕ ಸಾರಿಗೆಯ ನಿರ್ವಹಣಾ ವೆಚ್ಚದ ಕುರಿತು ಮಾತನಾಡಿದ ಅವರು, ಪ್ರಾಯೋಗಿಕ ಹಂತದಲ್ಲಿ ಯಶಸ್ವಿಯಾಗಿದ್ದೇ ಆದರೆ, ಕೇವಲ ಡೀಸೆಲ್ ಅನ್ನು ಅವಲಂಬಿಸಿರುವ ಸಾರ್ವಜನಿಕ ಬಸ್‌ಗಳು ಮೆಥೆನಾಲ್‌ಗೆ ಬದಲಾಗಬಹುದು, ಇದಕ್ಕೆ ಲೀಟರ್‌ಗೆ ಸುಮಾರು 25 ರೂ ವೆಚ್ಚವಾಗುತ್ತದೆ. "ಹಾಗೆ ಮಾಡುವುದರಿಂದ, ನಷ್ಟದಲ್ಲಿರುವ ಸಾರಿಗೆ ಇಲಾಖೆಯನ್ನು ಮೇಲೆತ್ತಬಹುದು ಎಂದು ತಿಳಿಸಿದ್ದಾರೆ.
ಸಾರಿಗೆ ನಿಗಮದ ಮಾಸಿಕ ಆದಾಯದ ಶೇ.60ರಷ್ಟು ಹಣವು ಡೀಸೆಲ್'ಗೆ ಹೋಗುತ್ತಿದೆ. ಡೀಸೆಲ್‌ಗಾಗಿ ಸುಮಾರು 70 ಕೋಟಿ ರೂಗಳನ್ನು ವೆಚ್ಚ ಮಾಡಲಾಗುತ್ತಿದೆ. ಮೆಥನಾಲ್ ಬಳಸುವುದರಿಂದ ಈ ವೆಚ್ಚವನ್ನು ಕಡಿಮೆ ಮಾಡಬಹುದು. ಪ್ರಸ್ತುತ ಇಂಡಿಯನ್ ಆಯಿಲ್ ಪೂರೈಸುವ ಮೆಥನಾಲ್-ಡೀಸೆಲ್ ಮಿಶ್ರಣದಲ್ಲಿ 20 ಬಸ್‌ಗಳನ್ನು ನಿರ್ವಹಿಸುತ್ತಿದ್ದೇವೆ. ಪ್ರಾಯೋಗಿಕ ಹಂತದಲ್ಲಿ ವಾಹನವು ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ, ಮಿಶ್ರಣವು ಎಂಜಿನ್ ಮೇಲೆ ಪರಿಣಾಮ ಬೀರುತ್ತಿದೆಯೇ, ಮಾಲಿನ್ಯ ಸೇರಿದಂತೆ ಹಲವು ವಿಚಾರಗಳ ಕುರಿತು ಪರಿಶೀಲನೆ ನಡೆಸುತ್ತೇವೆಂಡು ಬಿಎಂಟಿಸಿ ಎಂಡಿ ಸತ್ಯವತಿ ಅವರು ಹೇಳಿದ್ದಾರೆ.
ಇದೇ ವೇಳೆ ಅಶೋಕ್ ಲೇಲ್ಯಾಂಡ್'ನ ಲಾರಿಯೊಂದಕ್ಕೆ ಶೇ.100 ಮಿಥೆನಾಲ್ (ಎಂ100) ಇಂಧನ ಬಳಸಿದ್ದು, ಅದನ್ನು ಪ್ರಾಯೋಗಿಕವಾಗಿ ಅನಾವರಣಗೊಳಿಸಲಾಯಿತು.
ನೈಸರ್ಗಿಕ ಅನಿಲ, ಕಲ್ಲಿದ್ದಲು ಅಥವಾ ಬಯೋಮಸ್ ಗಳಿಂದ ಮಿಥೆನಾಲ್ ಬಳಸುವುದರಿಂದ ವಾಹನದ ಹೊಗೆ ಉಗುಳುವಿಕೆ ಮತ್ತು ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡಬಹುದು.
Post a Comment