ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ರಾಜಧಾನಿಯ ಮಹಿಳೆಯರಿಗೆ ಬಿಎಂಟಿಸಿ ವತಿಯಿಂದ ಉಚಿತ ಪ್ರಯಾಣ ವಿಶೇಷ ಕೊಡುಗೆ ನೀಡಲಾಗಿದೆ. ಮಾ.7 (ಮಂಗಳವಾರ) ಮಧ್ಯರಾತ್ರಿ 12 ಗಂಟೆಯಿಂದ ಬುಧವಾರ ಮಧ್ಯರಾತ್ರಿ 12 ಗಂಟೆಯವರೆಗೂ ಬಿಎಂಟಿಸಿ ಬಸ್‌ಗಳಲ್ಲಿ ಸಂಪೂರ್ಣ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಎಲ್ಲಾ ಮಾದರಿಯ ಬಸ್‌ಗಳಲ್ಲಿಯೂ ಅವಕಾಶ
ಬಿಎಂಟಿಸಿಯ ಎಲ್ಲಾ ಮಾದರಿಯ ಬಸ್‌ಗಳಲ್ಲಿಯೂ ಬುಧವಾರ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶವಿದೆ. ಎಸಿ, ವೋಲ್ವೊ ವಜ್ರ, ವಾಯುವಜ್ರ ಬಸ್‌ಗಳಲ್ಲಿಯೂ ಹಣ ನೀಡದೇ ಸಂಚರಿಸಬಹುದು.ಯಾವುದೇ ದಾಖಲಾತಿ, ಗುರುತಿನ ಚೀಟಿಯೂ ಅವಶ್ಯಕತೆ ಇಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಕ್ಕೆ ಪತ್ರಬರೆದಿದ್ದರು
ಮಹಿಳಾ ದಿನಾಚರಣೆ ಹಿನ್ನೆಲೆ ಮಹಿಳೆಯರಿಗೆ ಉಚಿತ ಬಸ್‌ಪಾಸ್ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಬಿಎಂಟಿಸಿ ವ್ಯಸ್ಥಾಪಕ ನಿದೇಶಕಿ ಸತ್ಯವತಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅದರಂತೆ ಸರ್ಕಾರವು ಒಪ್ಪಿಗೆ ನೀಡಿದ್ದು, ಮಹಿಳೆಯರಿಗೆ ಒಂದು ದಿನದ ಮಟ್ಟಿಗೆ ಉಚಿತ ಪ್ರಯಾಣ ಸೌಲಭ್ಯ ಸಿಗಲಿದೆ.
ಸ್ವಾತಂತ್ರ್ಯ ಅಮೃತಮಹೋತ್ಸವ ದಿನ ಉಚಿತ ಪ್ರಯಾಣವಿತ್ತು
ಕಳೆದ ವರ್ಷ ಜ.15 ರಂದು ಬಿಎಂಟಿಸಿ ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿತ್ತು. ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಬಿಎಂಟಿಸಿ ಬೆಳ್ಳಿ ಮಹೋತ್ಸವ ಹಿನ್ನೆಲೆ ಈ ಉಚಿತ ಪ್ರಯಾಣ ಅವಕಾಶ ಕಲ್ಪಿಸಲಾಗಿತ್ತು. ಅಂದು ಲಕ್ಷಾಂತರ ಮಂದಿ ಉಚಿತವಾಗಿ ಪ್ರಯಾಣಸಿದ್ದರು.
ಐದು ಸಾವಿರಕ್ಕೂ ಅಧಿಕ ಬಸ್ ಕಾರ್ಯಾಚರಣೆ
ಪ್ರಸ್ತುತ ಬಿಎಂಟಿಸಿಯ 48 ಘಟಕಗಳು, 50 ಬಸ್ ನಿಲ್ದಾಣಗಳು ಹಾಗೂ 6600 ಬಸ್‌ಗಳು ಕಾರ್ಯಾಚಣೆಯಲ್ಲಿವೆ. ಪ್ರತಿದಿನ 5567 ಬಸ್ಸುಗಳಿಂದ, 54 ಸಾವಿರ ಟ್ರಿಪ್‌ಗಳಾಗುತ್ತವೆ. ಒಟ್ಟಾರೆ ಬಿಎಟಿಸಿ ಬಸ್‌ಗಳು ನಿತ್ಯ 10.84 ಲಕ್ಷ ಕಿ.ಮೀಗಳನ್ನು ಕ್ರಮಿಸಿ ಸರಾಸರಿ 29.00 ಲಕ್ಷ ಪ್ರಯಾಣಿಕರಿಗೆ ಬೇಡಿಕೆಗನುಗುಣವಾಗಿ ಸಾರಿಗೆ ಸೌಲಭ್ಯವನ್ನು ಕಲ್ಪಿಸುತ್ತಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
Post a Comment