ಶಿವಮೊಗ್ಗ: ನೆಹರು ಕ್ರೀಡಾಂಗಣದಲ್ಲಿ ಮೂಲಸೌಲಭ್ಯದ ಕೊರತೆಯಿದ್ದು,ಇಡೀ ಕ್ರೀಡಾಂಗಣ ಕಸಕಡ್ಡಿಗಳಿಂದ ತುಂಬಿಕೊಂಡಿದೆ.ಕಾಮಗಾರಿ ನೆಪದಲ್ಲಿ ಕ್ರೀಡಾಪಟುಗಳಿಗೆ ಮತ್ತು ವಾಯು ವಿಹಾರಿಗಳಿಗೆ ಗುತ್ತಿಗೆದಾರರಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಬುಧವಾರ ಸಹ್ಯಾದ್ರಿ ಸ್ನೇಹ ಸಂಘ ಮತ್ತು ಸ್ಟೇಡಿಯಂ ಗೆಳೆಯರ ಬಳಗದಿಂದ ಕ್ರೀಡಾಂಗಣದ ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟಿಸಲಾಯಿತು.
ವಾಯುವಿಹಾರಿಗಳಿಗೆ ತೊಂದರೆಯಾಗಿದ್ದು, ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಹಲವಾರು ಬಿದ್ದು ಗಾಯವಾಗಿದೆ. ಕಾಲಿಗೆ ಮೊಲೆ ಸೇರಿಕೊಂಡು ಆಸ್ಪತ್ರೆ ಸೇರಿದವರು ಇದ್ದಾರೆ.ಇಡೀ ಕ್ರೀಡಾಂಗಣ ಅವ್ಯವಸ್ಥೆಯ ಆಗರವಾಗಿದೆ. ವಾಕಿಂಗ್ ಪಾತ್ ಮೇಲೆ ಎಲ್ಲೆಂದರಲ್ಲಿ ಬಿಯರ್ ಬಾಟಲಿಗಳು,ಮರಳು,ಜಲ್ಲಿ ಬಿದ್ದಿರುತ್ತದೆ. ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು,ಜಿಲ್ಲಾಧಿಕಾರಿಗಳು ಹಲವು ಬಾರಿ ಆದೇಶ ನೀಡಿದ್ದರೂ ಯಥಾ ಸ್ಥಿತಿ ಮುಂದುವರೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ರೂ .5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸಿಂಥೆಟಿಕ್ ಟ್ರ್ಯಾಕ್ ನಿರ್ವಹಣೆ ಇಲ್ಲದೆ ಹಾಳಾಗಿದೆ.ಅದನ್ನು ನಿರ್ವಹಿಸಲು ಯಾವುದೇ ಸಿಬ್ಬಂದಿ, ಸಲಕರಣೆಗಳಾಗಲಿ ಇಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.ಶೌಚಾಲಯವಿಲ್ಲ. ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಆದ್ದರಿಂದ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಸಹ್ಯಾದ್ರಿ ಸ್ನೇಹ ಸಂಘದ ಅಧ್ಯಕ್ಷರಾದ ಡಾ.ಸತೀಶ್ ಕುಮಾರ್ ಶೆಟ್ಟಿ ತಿಳಿಸಿದರು.
ಈ ಸಂದರ್ಭದಲ್ಲಿ ಜೈ ಪ್ರಕಾಶ್ ಕಳ್ಳಿ, ರಾಜೇಶ್ ಕಾಮತ್, ದಿವಾಕರ್ ಶೆಟ್ಟಿ, ಪ್ರದೀಪ್ ವಿ.ಯಲಿ,ತಿಮ್ಮಪ್ಪ ಸೇರಿದಂತೆ ಸ್ಟೇಡಿಯಂ ಗೆಳೆಯರ ಬಳಗ ಮತ್ತು ಸಹ್ಯಾದ್ರಿ ಸ್ನೇಹ ಸಂಘದ ಸದಸ್ಯರು ಉಪಸ್ಥಿತರಿದ್ದರು.
Post a Comment