ಶಿವಮೊಗ್ಗ: ಕೌಟುಂಬಿಕ ಕಲಹ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಪತಿ ಸೇರಿ ಮೂವರು ಆರೋಪಿತರಿಗೆ ಶಿಕ್ಷೆ!

 ಶಿವಮೊಗ್ಗ: ಶ್ರೀಮತಿ ಶೋಭಾ, 26 ವರ್ಷ, ಮಲವಗೊಪ್ಪ ಗ್ರಾಮ ಶಿವಮೊಗ್ಗ ಮತ್ತು ಆಕೆಯ ಗಂಡ ಹಾಲೇಶನಾಯ್ಕ ಇಬ್ಬರಿಗೂ ಕೌಟುಂಬಿಕ ವಿಚಾರದಲ್ಲಿ ದ್ವೇಶವಿದ್ದು, ಈ ಹಿನ್ನೆಲೆಯಲ್ಲಿ ಆರೋಪಿ ಹಾಲೇಶನಾಯ್ಕನು ದಿನಾಂಕಃ 28-12-2016  ರಂದು ಬೆಳಗ್ಗೆ ಶೋಭಾ ರವರು ತಮ್ಮ ತಾಯಿಯೊಂದಿಗೆ ಮಲವಗೊಪ್ಪ ಬಸ್ ನಿಲ್ದಾಣದ ಬಳಿ ನಿಂತಿದ್ದಾಗ, ಏಕಾಏಕಿ ಬಂದು ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ತಲೆ ಮತ್ತು ಕೈಕಾಲಿಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿ ತೀವ್ರ ಸ್ವರೂಪದ ರಕ್ತಗಾಯ ಪಡಿಸಿರುತ್ತಾನೆ ಮತ್ತು ಉಳಿದ ಆರೋಪಿತರಾದ ರವಿ ನಾಯ್ಕ, ದಾದು ನಾಯ್ಕ ಮತ್ತು ವೆಂಕ್ಯಾನಾಯ್ಕ ರವರು ಸೇರಿ ಶೋಭಾಳಿಗೆ ಹೊಡೆದು ಕೊಲೆ ಮಾಡಲು ಕುಮ್ಮಕ್ಕು ನೀಡಿರುತ್ತಾರೆಂದು, ದೂರು ನೀಡಿದ ಮೇರೆಗೆ ತುಂಗಾನಗರ ಪೊಲೀಸ್ ಠಾಣಾ ಗುನ್ನೆ ಸಂಖ್ಯೆ 0614/2016  ಕಲಂ 114, 307, 326, 504, 506 ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

 

                                                             ಆರೋಪಿತರು 

    ಆಗಿನ ತನಿಖಾಧಿಕಾರಿಗಳಾದ ಶ್ರೀ ಬಿ. ಸಿ. ಗಿರೀಶ್, ಪೊಲೀಸ್ ಉಪ ನಿರೀಕ್ಷಕರು, ತುಂಗಾನಗರ, ಪೊಲೀಸ್ ಠಾಣೆರವರು ಪ್ರಕರಣದ ತನಿಖೆ ಕೈಗೊಂಡು ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.ಪ್ರಕರಣದಲ್ಲಿ ಸರ್ಕಾರದ ಪರವಾಗಿ ಶ್ರೀ ಶಾಂತರಾಜ್, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಧೀಶರಾದ ಶ್ರೀ ಮಾನು ಕೆ. ಎಸ್ ರವರು ದಿನಾಂಕ:10-02-2023 ರಂದು ಆರೋಪಿತನ ವಿರುದ್ಧ ಕಲಂ 114, 307, 326, 504 ಸಹಿತ 34 ಐಪಿಸಿ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿತರಾದ 1) ರವಿ ನಾಯ್ಕ, 28 ವರ್ಷ, ಮಲವಗೊಪ್ಪ ಗ್ರಾಮ ಶಿವಮೊಗ್ಗ,  2) ದಾದು ನಾಯ್ಕ, 35 ವರ್ಷ, ಮಲವಗೊಪ್ಪ ಗ್ರಾಮ ಶಿವಮೊಗ್ಗ ಮತ್ತು 3)ವೆಂಕ್ಯಾನಾಯ್ಕ, 40 ವರ್ಷ, ಮಲವಗೊಪ್ಪ ಗ್ರಾಮ ಶಿವಮೊಗ್ಗ ರವರಿಗೆ 02 ವರ್ಷಗಳ ಕಾಲ ಕಠಿಣ ಕಾರಾವಾಸ ಶಿಕ್ಷೆ ಮತ್ತು ತಲಾ 22,000/- ರೂ ದಂಡ, ದಂಡವನ್ನು ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 03 ತಿಂಗಳು ಸಾದಾ ಕಾರವಾಸ ಶಿಕ್ಷೆ ನೀಡಿ  ಆದೇಶ ನೀಡಿರುತ್ತಾರೆ.

Post a Comment

Previous Post Next Post