ಕಲಬುರಗಿ: ಆಳಂದ ತಾಲೂಕಿನ ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ಶಿವಲಿಂಗ ಕಲಬುರಗಿ ಹೈಕೋರ್ಟ್ ಅವಕಾಶ ನೀಡಿದ್ದು, ಈ ಹಿನ್ನೆಲೆಯಲ್ಲಿ ದರ್ಗಾದಲ್ಲಿರುವ ಶಿವಲಿಂಗಕ್ಕೆ ಶನಿವಾರ ಸ್ವಾಮೀಜಿಗಳು, ಹಿಂದೂಪರ ಸಂಘಟನೆ ಮುಖಂಡರು ಹಾಗೂ ಜನಪ್ರತಿನಿಧಿಗಳು ಪೂಜೆ ಸಲ್ಲಿಸಲಿದ್ದಾರೆ. ಮತ್ತೊಂದಡೆ ನಾಳೆ ದರ್ಗಾದಲ್ಲಿ ಉರುಸ್ ಕೂಡಾ ಇದೆ ಇದರಿಂದ ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಶುಕ್ರವಾರ ಮಧ್ಯರಾತ್ರಿ 12 ಗಂಟೆಯಿಂದ ಶನಿವಾರ (ಫೆ.18) ರಾತ್ರಿ 12ಗಂಟೆ ವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಆದೇಶ ಹೊರಡಿಸಿದ್ದಾರೆ.
ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡುವ ಉದ್ದೇಶದಿಂದ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಡಿಸಿ ಆದೇಶದಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಇದೇ ವಿಚಾರಕ್ಕೆ ಕಲ್ಲು ತೂರಾಟವಾಗಿ ಭಾರೀ ಹಿಂಸಾಚಾರ ನಡೆಸಿತ್ತು. ಇದರಿಂದ ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಪೂಜೆಗೆ ಅವಕಾಶ ನೀಡಿದ್ದ ವಕ್ಫ್ ಟ್ರಿಬ್ಯುನಲ್ ಆದೇಶವನ್ನು ಕಲಬುರಗಿ ಹೈಕೋರ್ಟ್ ಎತ್ತಿ ಹಿಡಿದಿದೆ. ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆಗೆ 15 ಜನರಿಗೆ ಅವಕಾಶ ನೀಡಿ ವಕ್ಫ್ ಟ್ರಿಬುನಲ್ ಕೋರ್ಟ್ ಆದೇಶ ಹೊರಡಿಸಿತ್ತು.
ಇದನ್ನು ಪ್ರಶ್ನಿಸಿದ ದರ್ಗಾ ಕಮೀಟಿ, ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ಆಲಿಸಿದ ಕಲಬುರಗಿ ಹೈಕೋರ್ಟ್ ನ್ಯಾಯಮೂರ್ತಿ ಜೆ.ಎಂ.ಖಾಜಿ, ಶಿವಲಿಂಗ ಪೂಜೆಗೆ ಅವಕಾಶ ನೀಡಿ ಆದೇಶ ಹೊರಡಿಸಿದ್ದಾರೆ.
ಆಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆಗೆ ಇಂದು ಮಧ್ಯಾಹ್ನ ಎರಡು ಗಂಟೆಯಿಂದ ಆರು ಗಂಟೆವರಗೆ ಪೂಜೆಗೆ ನ್ಯಾಯಾಲಯ ಅವಕಾಶ ನೀಡಿದೆ. ಹೀಗಾಗಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಕೇಂದ್ರ ಸಚಿವ ಭಗವಂತ ಖೂಬಾ, ಆಳಂದ ಶಾಸಕ ಸುಭಾಷ್ ಗುತ್ತೇದಾರ್, ರಾಜಕುಮಾರ್ ಪಾಟೀಲ್, ಬಸವರಾಜ್ ಮತ್ತಿಮೂಡ್ ಸೇರಿದಂತೆ ಹದಿನೈದು ಜನ ನಾಳಿನ ಪೂಜೆಯಲ್ಲಿ ಭಾಗಿಯಾಗಲಿದ್ದಾರೆಂದು ವರದಿಗಳು ತಿಳಿಸಿವೆ.
ಆಳಂದ ಪಟ್ಟಣದಲ್ಲಿ ಸುಪ್ರಸಿದ್ದ ಸೂಪಿ ಸಂತ ಲಾಡ್ಲೆ ಮಶಾಕ್ ದರ್ಗಾವಿದೆ. 14 ನೇ ಶತಮಾನದಲ್ಲಿಯೇ ತನ್ನ ತತ್ವ ವಿಚಾರಗಳಿಂದ ಲಾಡ್ಲೆ ಮಶಾಕ್ ಸುಪ್ರಸಿದ್ದಿಯನ್ನು ಹೊಂದಿದ್ದರು. ಇದೇ ದರ್ಗಾದ ಆವರಣದಲ್ಲಿ, 15ನೇ ಶತಮಾನದಲ್ಲಿ ಆಗಿಹೋಗಿರುವ ಸಂತ, ಶಿವಾಜಿ ಮಹಾರಾಜರ ಗುರು, ಸಮರ್ಥ ರಾಮದಾಸರ ರಾಘವ ಚೈತನ್ಯರ ಸಮಾಧಿಯಿದೆ. ಸಮಾಧಿ ಮೇಲೆ ಶಿವಲಿಂಗವಿದೆ. ದರ್ಗಾಕ್ಕೆ ಹೋಗುತ್ತಿದ್ದ ಅನೇಕ ಹಿಂದೂ ಭಕ್ತರು, ರಾಘವ ಚೈತನ್ಯ ಸಮಾಧಿ ಮತ್ತು ಶಿವಲಿಂಗಕ್ಕೆ ನಮಸ್ಕರಿಸಿ, ಪೂಜೆ ಮಾಡಿ ಬರುತ್ತಿದ್ದರು. ಜೊತೆಗೆ ಜೋಶಿ ಅನ್ನೋ ಕುಟುಂಬದವರು ಲಿಂಗಕ್ಕೆ ಪ್ರತಿದಿನ ಪೂಜೆ ಸಲ್ಲಿಸುತ್ತಿದ್ದರು. ಇತ್ತೀಚಿನವರೆಗೆ ಅಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಹಿಂದೂ ಮುಸ್ಲಿಂ ನಡುವೆ ಸಾಮರಸ್ಯ ಕೂಡ ಇತ್ತು.
ಆದರೆ, ಕಳೆದ ವರ್ಷ ಶಿವಲಿಂಗದ ಮೇಲೆ ಅನ್ಯ ಕೋಮಿನ ಕೆಲವರು ಮಲಮೂತ್ರ ವಿಸರ್ಜನೆ ಮಾಡಿದ್ದರು. ಇದು ಹಿಂದೂ ಧರ್ಮಿಯರ ಆಕ್ರೋಶಕ್ಕೆ ಕಾರಣವಾಗಿತ್ತು. ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜನೆ ಮಾಡಿದ್ದನ್ನು, ಆಳಂದ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್, 2021ರ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಐತಿಹಾಸಿಕ ಹಿನ್ನೆಲೆ ಹೊಂದಿರುವ ರಾಘವ ಚೈತನ್ಯ ಸಮಾಧಿ ಮತ್ತು ಶಿವಲಿಂಗಕ್ಕೆ ರಕ್ಷಣೆ ನೀಡಬೇಕು ಅಂತ ಸರ್ಕಾರಕ್ಕೆ ಆಗ್ರಹಿಸಿದ್ದರು. ಇದು ಮತ್ತೊಂದು ಕೋಮಿನ ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು.
ಹೀಗಾಗಿ ಶಾಸಕ ಸುಭಾಷ್ ಗುತ್ತೇದಾರ್ ವಿರುದ್ಧವೇ ಅವಹೇಳನಕಾರಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಕಳೆದ ವರ್ಷ ನವಂಬರ್ ತಿಂಗಳಲ್ಲಿ, ಆಳಂದದಲ್ಲಿ ಬೃಹತ್ ಪ್ರತಿಭಟನೆ ಕೂಡ ಹಿಂದೂಪರ ಸಂಘಟನೆಗಳ ಮುಖಂಡರು ನಡೆಸಿದ್ದರು. ಆಗ ಶಿವರಾತ್ರಿ ದಿನವೇ, ರಾಘವ ಚೈತನ್ಯ ಸಮಾಧಿ ಮತ್ತು ಶಿವಲಿಂಗವನ್ನು ಶುಚಿ ಗೊಳಿಸಿ, ಅಲ್ಲಿ ಪೂಜೆ ಮಾಡೋದಾಗಿ ಹೇಳಿದ್ದರು.
Post a Comment