ತೀರ್ಥಹಳ್ಳಿ ತಾಲೂಕು ಶಿವಮೊಗ್ಗ ಜಿಲ್ಲೆಯಲ್ಲಿ ಮುಗಿಲು ಮುಟ್ಟಿದ ಅಕ್ರಮ ಮರಳು ಗಣಿಗಾರಿಕೆ! ವಿಫಲವಾಯಿತೇ ಜಿಲ್ಲಾಡಳಿತ?

 

  ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಹಲವು ದಿನಗಳಿಂದ ಅವ್ಯಾಹತವಾಗಿ ಅಕ್ರಮವಾಗಿ  ಮರಳು ಗಣಿಗಾರಿಕೆ  ನಡೆಯುತ್ತಿದೆ. ಗೃಹಮಂತ್ರಿಗಳ ತಾಲೂಕಿನಲ್ಲೇ ನಡೆಯುತ್ತಿರುವ ಈ ಅಕ್ರಮ ಮರಳು ಗಣಿಗಾರಿಕೆ ಅವರ ಗಮನಕ್ಕೆ ಬಂದಿಲ್ಲವೆಂಬುದೇ ವಿಪರ್ಯಾಸ! ಪ್ರತಿ ನಿತ್ಯ ತೀರ್ಥಹಳ್ಳಿಯಲ್ಲಿ 30 ಕ್ಕೂ ಹೆಚ್ಚ್ಚಿನ ಲಾರಿಗಳು ಅಕ್ರಮವಾಗಿ ಮರಳು ಸಾಗಣೆಯಲ್ಲಿ ತೊಡಗಿವೆ. ಇದು ಗೃಹಮಂತ್ರಿಗಳ ಗಮನಕ್ಕೆ ಬಂದಿಲ್ಲವೇಕೆ?

   
ಅಲ್ಲದೆ, ಸರ್ಕಾರದ ಅನುಮತಿ ಪಡೆದ ಮರಳಿನ ಕ್ವಾರಿಗಳು ಸರ್ಕಾರ ನೀಡಿರುವ ಪರವಾನಗಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸರ್ಕಾರವು ಒಂದು ಲಾರಿಗೆ 9500 ರೂ ಒಂದು ಬಿಲ್ ನಂತೆ ಪರವಾನಗಿ ನೀಡಿದೆ. ಆದರೆ ಮರಳಿನ ಕ್ವಾರಿಗಳು ಒಂದು ಬಿಲ್ ಗೆ 9500 ರೂ. 9500 ರೂ. ಸರ್ಕಾರಕ್ಕೆ ರಾಯಲ್ಟಿ ಕಟ್ಟಿ ಒಂದು ಬಿಲ್ ನಲ್ಲಿ ದಿನಕ್ಕೆ 6 ರಿಂದ 7 ಲೋಡ್ ಮರಳು ಸಾಗಾಟ ನಡೆಸುತ್ತಿದ್ದಾರೆ.ಇದರಿಂದಾಗಿ ಸರ್ಕಾರಕ್ಕೆ ಕೋಟಿಗಟ್ಟಲೆ ನಷ್ಟವಾಗುತ್ತಿದೆ. ಇನ್ನೂ ಸರ್ಕಾರ ನೇಮಿಸಿರುವ ಚೆಕ್ ಪೋಸ್ಟ್ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿಲ್ಲ.ಚೆಕ್ ಪೋಸ್ಟ್ ಗೆ ಬರುವ ಲಾರಿಗಳನ್ನು ಸರಿಯಾಗಿ ಪರಿಶೀಲನೆ ಮಾಡದೇ ಹಾಗೆಯೆ ಬಿಡುತ್ತಿದ್ದಾರೆ. ಇಷ್ಟೊಂದು ರಾಜಾರೋಷವಾಗಿ ರಾಷ್ಟೀಯ ಹೆದ್ದಾರಿಯಲ್ಲೇ ನಡೆಯುತ್ತಿರುವ ಈ ಅಕ್ರಮ ಮರಳು ಸಾಗಾಟ ಯಾರ ಗಮನಕ್ಕೂ ಬಂದಿಲ್ಲವೇಕೆ?

  ತಾಲೂಕಿನಲ್ಲಿ ಪ್ರತಿದಿನ 30 ರಿಂದ 40 ಮರಳಿನ ಲಾರಿಗಳು ಸಂಚರಿಸುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ರಸ್ತೆಗಳಲ್ಲಿ ಓಡಾಡುವುದೇ ದುಸ್ತರವಾಗಿದೆ. ಪ್ರತಿದಿನ ಸಾರ್ವಜನಿಕರು ಜೀವ ಕೈಲಿಟ್ಟುಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ. ಕಾರಣ ಇಲ್ಲಿ ಸಂಚರಿಸುತ್ತಿರುವ ಮರಳಿನ ಲಾರಿಗಳ ಚಾಲಕರು ವೇಗದ ಮಿತಿಯನ್ನು ಮೀರಿ ಅತ್ಯಂತ ವೇಗವಾಗಿ ಲಾರಿಗಳನ್ನು ಚಲಾಯಿಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರು ರಸ್ತೆಯಲ್ಲಿ ಓಡಾಡಲು ಪ್ರತಿದಿನ ಭಯಪಡುವಂತಾಗಿದೆ.

  ಜಿಲ್ಲೆಯಲ್ಲಿ ಅಕ್ರಮ ಮರಳುಗಣಿಗಾರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಿಯಿಂತ್ರಿಸಲು ಸರ್ಕಾರವು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರು ಜಿಲ್ಲೆಯನ್ನು ಮರೆತು ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಯಾವುದೇ ರೀತಿಯ ಜವಾಬ್ದಾರಿಯನ್ನು ನಿರ್ವಹಿಸದೇ ಬೇಜವಾಬ್ದಾರಿಯಿಂದ ಜಿಲ್ಲೆಯನ್ನು ಕಡೆಗಣಿಸುತ್ತಿದ್ದಾರೆ.

  ಇನ್ನೂ ಇದಕ್ಕೆ ಸಂಬಂಧಿಸಿದಂತೆ ಗಣಿ ಭೂ ವಿಜ್ಞಾನ ಇಲಾಖೆಯೂ ಸಹ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದೆ. ಇದನೆಲ್ಲ ಗಮನಿಸಿದರೆ ಈ ಅಕ್ರಮ ಮರಳು ಗಣಿಗಾರಿಕೆ ಪರೋಕ್ಷವಾಗಿ ಶಾಸಕರ ಬೆಂಬಲದಿಂದಲೇ ನಡೆಯುತ್ತಿದೆಯಾ? ಎಂಬ ಅನುಮಾನ ಬರುವಂತಿದೆ. ಇದರಿಂದಾಗಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲಾಗದೇ ಹಿಂದೇಟು ಹಾಕುತ್ತಿದ್ದಾರೆಯೇ? ವರ್ಗಾವಣೆಯೇ ಭೀತಿಯೇನಾದರೂ ಇದೆಯಾ? ಅಥವಾ ಲಂಚದ ಆಸೆಗಾಗಿ ಈ ಅಕ್ರಮವನ್ನು ಬೆಂಬಲಿಸುತ್ತಿದ್ದಾರೆಯೇ?ಎಂಬ ಅನೇಕ ಅನುಮಾನಗಳು ಬರುತ್ತಿವೆ.

  ಇನ್ನೇನು ಚುನಾವಣೆಯು ಸಮೀಪಿಸುತ್ತಿದೆ.ಆದರೆ ಜಿಲ್ಲೆಯಲ್ಲಿ ಅವ್ಯಾಹತವಾಗಿ  ನಡೆಯುತ್ತಿರುವ ಇಂತಹ ಅಕ್ರಮ ಚಟುವಟಿಕೆಗಳನ್ನು,ಜಿಲ್ಲೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು  ಗಮನಿಸುತ್ತಿದ್ದರೆ ಯಾರು ಪ್ರಾಮಾಣಿಕರು ಎಂಬ ಗೊಂದಲ ಮೂಡುತ್ತಿದೆ.ಇದರಿಂದಾಗಿ ಚುನಾವಣೆಯಲ್ಲಿ ಯಾರಿಗೆ ಮತ ಚಲಾಯಿಸಬೇಕು?ಯಾರನ್ನು ನಾಯಕರನ್ನಾಗಿ ಆಯ್ಕೆ ಮಾಡಬೇಕು? ಯಾರನ್ನು ನಂಬಬೇಕು ಎಂಬುದೇ ಶಿವಮೊಗ್ಗ ಜನತೆಗೆ ಗೊಂದಲವಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ ಜಿಲ್ಲೆಯಲ್ಲಿ ನಡೆಯುತ್ತಿರುವ ಇಂತಹ ಎಲ್ಲ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಆಡಳಿತ ಸುಧಾರಣೆಗೆ ತರಬೇಕಾಗಿದೆ.

Post a Comment

Previous Post Next Post