By: Rekha.M
Online Desk
ರಾಜ್ಯಪಾಲರ ಭಾಷಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ನೀಡಿದರು.
ಬೆಂಗಳೂರು, ಫೆ. ೨೦- ರಾಜ್ಯದ ಆರ್ಥಿಕ ಪರಿಸ್ಥಿತಿ ಸದೃಢವಾಗಿದ್ದು, ತೆರಿಗೆ ಸಂಗ್ರಹಣೆಯಲ್ಲಿ ಕೈಗೊಂಡ ಸುಧಾರಣಾ ಕ್ರಮಗಳಿಂದ ಈ ಬಾರಿ ಅತಿ ಹೆಚ್ಚು ತೆರಿಗೆ ಸಂಗ್ರಹಣೆಯಾಗಿದೆ. ಇದು ಬಜೆಟ್ ಕಾರ್ಯಕ್ರಮಗಳಿಗೆ ಆರ್ಥಿಕ ಬೆಂಬಲ ನೀಡಲು ಸಹಾಯಕವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸಭೆಯಲ್ಲಿಂದು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಕೋವಿಡ್‌ನಿಂದ ರಾಜ್ಯದ ಆದಾಯ ಸಂಗ್ರಹ ೫ ಸಾವಿರ ಕೋಟಿ ರೂ. ಕೊರತೆ ಅನುಭವಿಸಿತ್ತು. ನಂತರ ಕೈಗೊಂಡ ಸುಧಾರಣಾ ಕ್ರಮಗಳಿಂದ ತೆರಿಗೆ ಸಂಗ್ರಹ ಉತ್ತಮವಾಗಿದ್ದು, ೧೩ ಸಾವಿರ ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದರು.
ತೆರಿಗೆ ಸಂಗ್ರಹಣೆ ಅತ್ಯಂತ ದಕ್ಷತೆಯಿಂದ ಮಾಡಿದ್ದೇವೆ. ಎಲ್ಲೆಲ್ಲಿ ಕೊರತೆಯಿತ್ತೋ ಅದನ್ನೆಲ್ಲ ಗಮನಿಸಿ ತೆರಿಗೆ ಸಂಗ್ರಹ ಮಾಡಲಾಗಿದೆ. ಅಡಿಕೆ ತೆರಿಗೆಯಿಲ್ಲದೆ ಹೋಗುತ್ತಿತ್ತು. ಅದನ್ನು ಸರಿ ದಾರಿಗೆ ತಂದಿದ್ದೇವೆ. ಹಾಗೆಯೇ ಗುಜರಿ ವಸ್ತುಗಳು (ಸ್ಕ್ರಾಪ್) ಯಾವುದೇ ತೆರಿಗೆ ಇಲ್ಲದೆ ಆಮದಾಗಿ ಮಂಗಳೂರಿನಿಂದ ದೆಹಲಿವರೆಗೂ ಹೋಗುತ್ತಿತ್ತು. ಇದನ್ನು ಈಗ ಸರಿಪಡಿಸಿ ತೆರಿಗೆ ಬರುವಂತೆ ನೋಡಿಕೊಂಡಿದ್ದೇವೆ. ಒಟ್ಟಾರೆ ತೆರಿಗೆ ಸಂಗ್ರಹಣೆಯಲ್ಲಿ ದಕ್ಷತೆ ಹೆಚ್ಚಾಗಿ ತೆರಿಗೆ ಸಂಗ್ರಹ ೧೩ ಸಾವಿರ ಕೋಟಿ ರೂ. ತಲುಪಿದೆ. ಇದೊಂದು ಸಾಧನೆ ಎಂದರು ಅವರು ಹೇಳಿದರು.
ತೆರಿಗೆ ಸಂಗ್ರಹಣೆಯಲ್ಲಿ ಲೋಪವೆಸಗಿದ ೨೫ ಅಧಿಕಾರಿಗಳನ್ನು ಅಮಾನತ್ತು ಮಾಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಾಗಿತ್ತು. ಅಧಿಕಾರಿಗಳು ಸಹ ದಕ್ಷತೆಯಿಂದ ತೆರಿಗೆ ಸಂಗ್ರಹಣೆಯಲ್ಲಿ ತೊಡಗಿಕೊಂಡು ನಿಗದಿತ ಗುರಿಗಿಂತ ತೆರಿಗೆ ಸಂಗ್ರಹಣೆ ಹೆಚ್ಚಾಗಲು ಕಾರಣರಾಗಿದ್ದಾರೆ ಎಂದು ಅವರು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹಿನ್ನಡೆ ಅನುಭವಿಸಿತ್ತು. ಈಗ ಆರ್ಥಿಕ ಹಿಂಜರಿತದಿಂದ ಹೊರ ಬಂದು ಆರ್ಥಿಕ ಪರಿಸ್ಥಿತಿ ಚೇತರಿಸಿಕೊಂಡಿದೆ ಎಂದು ಅವರು ತಿಳಿಸಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿಯ ಚೇತರಿಕೆ ಬಜೆಟ್‌ನಲ್ಲಿ ಜನಪರ ಕಾರ್ಯಕ್ರಮಗಳನ್ನು ಕೊಡಲು ನೆರವಾಗಿದೆ ಎಂದು ಅವರು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ನಮಗೆ ೫ ಸಾವಿರ ಕೋಟಿ ರೂ. ಆದಾಯ ಖೋತಾ ಆಗಿತ್ತು. ಕೆಲ ರಾಜ್ಯಗಳಲ್ಲಿ ನೌಕರರಿಗೆ ಸಂಬಳವನ್ನು ಸಹ ಸರಿಯಾಗಿ ಕೊಟ್ಟಿರಲಿಲ್ಲ. ಆದರೆ ರಾಜ್ಯ ಸರ್ಕಾರ ನೌಕರರಿಗೆ ಸಂಬಳ ಸರಿಯಾಗಿ ಕೊಟ್ಟಿತು. ಆರ್ಥಿಕ ಶಿಸ್ತಿನಿಂದ ಆದಾಯ ಸಂಗ್ರಹ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಆರ್‌ಬಿಐ ಮೂಲಕ ವಿಶೇಷ ಸಾಲ ವ್ಯವಸ್ಥೆ ಮಾಡಿದ್ದು ಆರ್ಥಿಕತೆ ಚೇತರಿಕೆಗೆ ಕಾರಣವಾಯಿತು. ರಾಜ್ಯ ಸರ್ಕಾರ ೧೮ ಸಾವಿರ ಕೋಟಿ ರೂ. ಸಾಲ ಪಡೆದಿದೆ. ಇದನ್ನು ಕೇಂದ್ರ ಸರ್ಕಾರವೇ ತೀರಿಸುತ್ತದೆ. ರಾಜ್ಯ ಸರ್ಕಾರಕ್ಕೆ ಯಾವುದೇ ಭಾರ ಇರುವುದಿಲ್ಲ. ರಾಜ್ಯಗಳಿಗೆ ಸಾಲ ಕೊಡುವ ಕೇಂದ್ರದ ಈ ನಿರ್ಧಾರ ಆರ್ಥಿಕ ಚೇತರಿಕೆಯಲ್ಲಿ ಮಹತ್ವದ ಪಾತ್ರ ವಹಿಸಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Post a Comment