ಬೆಂಗಳೂರು: ಸರ್ಕಾರದಿಂದ ಟೆಂಡರ್ ಹಗರಣ ನಡೆದಿದೆ, ಇದರ ನೇತೃತ್ವವನ್ನು ಸಿಎಂ ಬಸವರಾಜ ಬೊಮ್ಮಾಯಿಯವರು ವಹಿಸಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಗಳ ಮೇಲೆ ನೇರ ಆರೋಪ ಮಾಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರ ಈ ಹಗರಣವನ್ನು ಇಲ್ಲಿಗೇ ಬಿಡದೇ ಕೋರ್ಟ್ ಗೆ ತೆಗೆದುಕೊಂಡು ಹೋಗುತ್ತವೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಬಿಜೆಪಿ ನೀಡಿರುವ ಟೆಂಡರ್ ರದ್ದು ಮಾಡಿ ಹಗರಣವನ್ನು ಬಯಲಿಗೆಳೆಯುತ್ತೇವೆ. ಸರ್ಕಾರದಿಂದ ಒಂದೇ ದಿನ 18 ಸಾವಿರ ಕೋಟಿ ರೂ ಟೆಂಡರ್ ಆಗಿದೆ. ಚುನಾವಣೆಯಲ್ಲಿ ತಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ತನಿಖಾ ಸಮಿತಿ ರಚನೆ ಮಾಡಿ ಹಗರಣ ಬಯಲಿಗೆಳೆಯುತ್ತೇವೆ. ಈ ಸರ್ಕಾರ ಯದ್ವಾತದ್ವಾ ಜನರ ಹಣವನ್ನು ಲೂಟಿ ಮಾಡುತ್ತಿದೆ, ಅಧಿಕಾರ ಸಿಗದ ಶಾಸಕರು, ನಾಯಕರಿಗೆ ಹಣ ಕೊಡಲು ಈ ರೀತಿ ತರಾತುರಿಯಲ್ಲಿ ನಿಗಮ-ಮಂಡಳಿಗಳಲ್ಲಿ ಟೆಂಡರ್ ನೀಡಲಾಗುತ್ತಿದೆ. ಇದು ಕಮಿಷನ್ ಹೊಡೆಯಲು ಮಾಡಿಕೊಂಡಿರುವ ಭಾಗ, ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮಿಷನ್ ನ ಮುಂದುವರಿದ ಭಾಗ ಇದು ಎಂದು ಆರೋಪಿಸಿದರು.
ಇದೆಲ್ಲವೂ ಚುನಾವಣೆ ಖರ್ಚಿಗೆ ಹಣ ಸಂಗ್ರಹಿಸಲು ಆಗಿದೆ. ಚುನಾವಣೆಗೆ 6 ಸಾವಿರ ಕೋಟಿ ರೂ ಕೊಡುತ್ತೇವೆ ಎಂದು ಹೇಳುತ್ತಾರೆ. ಇಷ್ಟರಮಟ್ಟಿಗೆ ರಾಜ್ಯವನ್ನು ಹಾಳುಮಾಡಲು ಹೊರಟಿದ್ದಾರೆ. ನಾವು ಆರೋಪ ಮಾಡಿದರೆ ಸಾಕ್ಷಿ ಕೊಡಿ, ನಿಮ್ಮ ಸರ್ಕಾರದಲ್ಲಿಯೂ ಭ್ರಷ್ಟಾಚಾರ ಆಗಿದೆ ಎನ್ನುತ್ತಾರೆ, ನಮ್ಮ ಸರ್ಕಾರದಲ್ಲಿ ಆಗಿದ್ದರೆ ಈಗ ಅಧಿಕಾರದಲ್ಲಿರುವ ಬಿಜೆಪಿಯವರು ತನಿಖೆ ನಡೆಸಲಿ ಎಂದರು.
ನಿಗಮ-ಮಂಡಳಿಗಳ ಸಭೆಗಳು ಸಿಎಂ ಬೊಮ್ಮಾಯ ನೇತೃತ್ವದಲ್ಲೇ ನಡೆಯೋದು. ಟೆಂಡರ್ ಮೊತ್ತ ಎಷ್ಟು ಹೆಚ್ಚಿಸಬೇಕು ಎಂದು ಅವರೇ ಹೇಳಿರುತ್ತಾರೆ. ಇದಕ್ಕೆಲ್ಲಾ ಬೊಮ್ಮಾಯಿಯೇ ಕಾರಣ ಎಂದು ಆರೋಪಿಸಿದರು.
Post a Comment