ಬೆಂಗಳೂರು: 2023-24 ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಬಡ, ಸಣ್ಣ ಹಾಗೂ ಅತಿ ಸಣ್ಣ, ಬಗರ್ ಹುಕುಮ್ ಸಾಗುವಳಿ ದಾರರಿಗೆ ಭೂಮಿ ಮಂಜೂರು ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿರುವುದನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಾಗತಿಸಿದ್ದಾರೆ.
ಮಲೆನಾಡು ಪ್ರದೇಶದಲ್ಲಿ, ಕಾಣೆ, ಬಾಣೆ, ಸೊಪ್ಪಿನ ಬೆಟ್ಟ, ಹುಲ್ಲುಬನ್ನಿ ಹಾಗೂ ಸರ್ಕಾರಿ ಬೀಳು, ಒಳಗೊಂಡಂತೆ, ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ, ಸಾವಿರಾರು, ಬಡವರು ಹಾಗೂ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರ, ಬಗರ್ ಹುಕುಂ ಜಮೀನನ್ನು, ಮಂಜೂರು ಮಾಡಲು ಮುಖ್ಯಮಂತ್ರಿ ಭರವಸೆ ನೀಡಿರುವುದಾಗಿ ಅವರು ಹೇಳಿದ್ದಾರೆ.
ದಶಕಗಳ ಕಾಲದ ಬೇಡಿಕೆಯ ಬಗ್ಗೆ ಸಕಾರಾತ್ಮಕ ವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, ಈ ಕಾರಣಕ್ಕಾಗಿ ರಚಿಸಲಾದ ಸಂಪುಟದ ಉಪ ಸಮಿತಿ ನೀಡುವ ಶಿಫಾರಸುಗಳನ್ನು ಅನುಷ್ಟಾನ ಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಬಜೆಟ್ ನಲ್ಲಿ, ಈ ಕುರಿತು ನಿರ್ಧಾರ ಪ್ರಕಟಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ವಿನಂತಿಸಿದ್ದರು.
ನಿನ್ನೆ ದಿನ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದ ಆರಗ ಜ್ಞಾನೇಂದ್ರ ಬಹು ದಿನಗಳ ಕಾಲದ ಬೇಡಿಕೆಯನ್ನು ಮನ್ನಿಸಿ, ಸಾವಿರಾರು ಬಡ ಕುಟುಂಬಗಳ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಬಗ್ಗೆ ಹೊಂದಿರುವ ಕನಸನ್ನು ನನಸು ಮಾಡಲು ಮನವಿ ಮಾಡಿದ್ದರು.
Post a Comment