ಬೆಂಗಳೂರು: ಯಾದಗಿರಿಯಲ್ಲಿ ಕಲುಶಿತ ನೀರು ಸೇವನೆಯ ಪರಿಣಾಮ 2 ಸಾವನ್ನಪ್ಪಿ, 34 ಮಂದಿ ಅನಾರೋಗ್ಯಕ್ಕೀಡಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಟಿಸಿದ್ದ ವರದಿಯನ್ನು ಆಧರಿಸಿ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್, ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಗೆ ಆದೇಶಿಸಿದ್ದಾರೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಕೇಳಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 58 ರ ಅಡೊಯಲ್ಲಿ ಗ್ರಾಮಪಂಚಾಯ್ತಿ ಪ್ರದೇಶದ ವ್ಯಾಪ್ತಿಯಲ್ಲಿ ನೀರಿನ ಪೂರೈಕೆ ಯೋಜನೆಗಳನ್ನು ಗಮನಿಸಿ, ನಿಗಾ ವಹಿಸುವುದು ಗ್ರಾಮ ಪಂಚಾಯತ್ ನ ಕರ್ತವ್ಯವಾಗಿದೆ. ಆದರೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ, ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸುರಕ್ಷಿತವಾದ ಕುಡಿಯುವ ನೀರಿನ ವ್ಯವಸ್ಥೆ ಯಾದಗಿರಿ ಜಿಲ್ಲೆಯ ಅನುಪುರ್ ಗ್ರಾಮಸ್ಥರಿಗೆ ತಲುಪದೇ ಇರುವುದು ಸ್ಪಷ್ಟವಾಗಿತ್ತು.
"ಸುರಕ್ಷಿತ ನೀರನ್ನು ಪೂರೈಕೆ ಮಾಡುವುದು ಗ್ರಾಮಪಂಚಾಯಿತಿಯ ಆದ್ಯ ಕರ್ತವ್ಯವಾಗಿದೆ. ಈ ವಿಷಯದಲ್ಲಿ ಗ್ರಾಮಪಂಚಾಯಿತಿ ವಿಫಲವಾಗಿರುವುದು ಮೂಲಭೂತ ಕರ್ತವ್ಯ ಉಲ್ಲಂಘನೆಯಷ್ಟೇ ಅಲ್ಲದೇ ದೋಷಪೂರಿತ ಆಡಳಿತವನ್ನೂ ತೋರುತ್ತದೆ" ಎಂದು ನ್ಯಾ. ಪಾಟೀಲ್ ಹೇಳಿದ್ದಾರೆ.
ನ್ಯಾ.ಪಾಟಿಲ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ನಿರ್ದೇಶಕ, ಯಾದಗಿರಿ ಜಿಲ್ಲಾ ಪಂಚಾಯತ್ ನ ಸಿಇಒ, ಡಿಸಿ, ತಾಲೂಕು ಪಂಚಾಯತ್ ನ ಕಾರ್ಯನಿರ್ವಹಣಾ ಅಧಿಕಾರಿ, ಪಿಡಿಒ, ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಿಗೆ ತಕ್ಷಣವೇ ಗ್ರಾಮಕ್ಕೆ ಸುರಕ್ಷಿತ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿದ್ದು, ಮಾ.31 ರ ವೇಳೆಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಘಟನೆಕೆ ಕಾರಣವಾದ ಅಧಿಕಾರಿಗಳ ಬಗ್ಗೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಿರುವ ಮಾಹಿತಿ, ವಿವರಣೆ ನೀಡುವಂತೆಯೂ ಈ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ. ಇದೇ ವೇಳೆ ಯಾದಗಿರಿ ಜಿಲ್ಲೆಯ ಲೋಕಾಯುಕ್ತ ಎಸ್ ಪಿ ಗೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುವಂತೆಯೂ ಸೂಚಿಸಲಾಗಿದೆ.
Post a Comment