ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್ ಅಂಗಳದಲ್ಲಿರುವಾಗಲೇ ಬೆಳಗಾವಿಗೆ ಭೇಟಿ ನೀಡಿಯೇ ತೀರುತ್ತೇವೆ, ನಮ್ಮನ್ನು ಯಾರೂ ತಡೆಯಲಾಗದು ಎಂದು ಹೇಳಿದ್ದೆ ಮಹಾರಾಷ್ಟ್ರ ಸಚಿವರು, ಇದೀಗ ಕನ್ನಡಿಗರ ಹೋರಾಟಕ್ಕೆ ಮಣಿದಂತಿದ್ದು, ಬೆಳಗಾವಿ ಭೇಟಿಯನ್ನು ರದ್ದುಗೊಳಿಸಿದ್ದಾರೆ.
ಸಂಗ್ರಹ ಚಿತ್ರ
ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್ ಅಂಗಳದಲ್ಲಿರುವಾಗಲೇ ಬೆಳಗಾವಿಗೆ ಭೇಟಿ ನೀಡಿಯೇ ತೀರುತ್ತೇವೆ, ನಮ್ಮನ್ನು ಯಾರೂ ತಡೆಯಲಾಗದು ಎಂದು ಹೇಳಿದ್ದೆ ಮಹಾರಾಷ್ಟ್ರ ಸಚಿವರು, ಇದೀಗ ಕನ್ನಡಿಗರ ಹೋರಾಟಕ್ಕೆ ಮಣಿದಂತಿದ್ದು, ಬೆಳಗಾವಿ ಭೇಟಿಯನ್ನು ರದ್ದುಗೊಳಿಸಿದ್ದಾರೆ.
ಬೆಳಗಾವಿ ಭೇಟಿ ರದ್ದುಗೊಳಿಸಿರುವುದನ್ನು ಸ್ವತಃಮಹಾರಾಷ್ಟ್ರ ಸಚಿವ ಶಂಭುರಾಜ್ ದೇಸಾಯಿ ಅವರು, ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡುವ ವೇಳೆ ಖಚಿತಪಡಿಸಿದ್ದಾರೆ.
ಬೆಳಗಾವಿ ಭೇಟಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡಿಲ್ಲ. ಹೀಗಾಗಿ ನಾವು ಇಂದಿನ ಬೆಳಗಾವಿ ಭೇಟಿ ರದ್ದುಗೊಳಿಸಿದ್ದೇವೆ. ಮೊದಲು ಡಿ.3ರಂದು ಬೆಳಗಾವಿ ಭೇಟಿಗೆ ನಾವು ನಿರ್ಧರಿಸಿದ್ದೆವು. ಆದರೆ, ಕೆಲ ದಲಿತ ಸಂಘಟನೆಗಳಿಂದ ಡಿ.6ರಂದು ಬರಲು ಮನವಿ ಇತ್ತು. ಹೀಗಾಗಿ ಡಿಸೆಂಬರ್ 6ರಂದು ಬೆಳಗಾವಿಗೆ ತೆರಳಲು ನಿರ್ಧರಿಸಿದ್ದೆವು. ಇಂದು ಡಾ.ಬಿ.ಆರ್.ಅಂಬೇಡ್ಕರ್‌ರವರ ಮಹಾ ಪರಿನಿರ್ವಾಣ ದಿನ. ಶ್ರದ್ಧಾಂಜಲಿ ಸಲ್ಲಿಕೆ ವೇಳೆ ಅಹಿತಕರ ಘಟನೆ ನಡೆಯಬಾರದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದೆಂದು ಭೇಟಿಯನ್ನು ರದ್ದು ಮಾಡಿದ್ದೇವೆಂದು ಹೇಳಿದ್ದಾರೆ.
ಶ್ರದ್ಧಾಂಜಲಿ ಸಲ್ಲಿಕೆಗೆ ನಮಗೆ ಅನುಮತಿ ನೀಡಬಹುದಿತ್ತು. ಕರ್ನಾಟಕ ಸರ್ಕಾರ ಅವಕಾಶ ಕಲ್ಪಿಸಿದರೆ, ಒಳ್ಳೆಯದಾಗುತ್ತಿತ್ತು. ಅನುಮತಿ ನೀಡಿಲ್ಲ, ಹೀಗಾಗಿ ಬೆಳಗಾವಿ ಭೇಟಿ ರದ್ದು ಮಾಡಿದ್ದೇವೆಂದು ತಿಳಿಸಿದ್ದಾರೆ,
ಮಹಾರಾಷ್ಟ್ರ ರಾಜ್ಯ ಸಚಿವರು ಬೆಳಗಾವಿಗೆ ಆಗಮಿಸದಂತೆ ಸಿಎಂ ಬೊಮ್ಮಾಯಿ ಹಾಗೂ ರಾಜ್ಯ ಗೃಹ ಸಚಿವರು ನಿನ್ನೆಯಷ್ಟೇ ಎಚ್ಚರಿಕೆ ನೀಡಿದ್ದರು. ಎಚ್ಚರಿಕೆಯ ಬಳಿಕವೂ ಬೆಳಗಾವಿಗೆ ಬಂದೆ ಬರುತ್ತೇವೆ ಎಂದು ಮಹಾರಾಷ್ಟ್ರ ಸಚಿವರು ಹೇಳಿದ್ದ ಹಿನ್ನೆಲೆಯಲ್ಲಿ ಬೆಳಗಾವಿ ಡಿಸಿ ನಿರ್ಬಂಧ ಹೇರಿದ್ದರು.
ಈ ನಡುವೆ ಬೆಂಗಳೂರಿನಿಂದ ಕರವೇ ನಾರಾಯಣಗೌಡ ನೇತೃತ್ವದಲ್ಲಿ ಸಾವಿರಾರು ಹೋರಾಟಗಾರರು ಬೆಳಗಾವಿಯತ್ತ ಹೆಜ್ಜೆ ಹಾಕಿದ್ದಾರೆಂದು ತಿಳಿದುಬಂದಿದೆ.
ಎಂಇಎಸ್, ಮಹಾರಾಷ್ಟ್ರ ರಾಜಕಾರಣಿಗಳ ವಿರುದ್ಧ ಸಿಡಿದೆದ್ದಿರುವ ಕರ್ನಾಟಕ ರಕ್ಷಣಾ ವೇದಿಕೆ, ಇಂದು ʼಕರವೇ ನಡಿಗೆ ಬೆಳಗಾವಿ ಕಡೆಗೆʼ ಹಮ್ಮಿಕೊಂಡಿದೆ.
ನಾಡದ್ರೋಹಿ ಎಂಇಎಸ್ ಹಾಗೂ ಮಹಾರಾಷ್ಟ್ರ ರಾಜಕಾರಣಿಗಳು ಕರ್ನಾಟಕ ಸರ್ಕಾರವನ್ನು ನಿಂದಿಸುತ್ತಿರುವುದನ್ನು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ಷೇಪಿಸಿದ್ದಾರೆ. ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಹಲ್ಲೆಗೂ ಖಂಡನೆ ವ್ಯಕ್ತಪಡಿಸಿದ್ದಾರೆ.
ಇದರಂತೆ ಇಂದು ಬೆಳಗಾವಿಗೆ ಆಗಮಿಸುತ್ತಿರುವ ನಾರಾಯಣಗೌಡ ನೂರಾರು ಬೆಂಬಲಿಗರೊಂದಿಗೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮಧ್ಯಾಹ್ನ 12 ಗಂಟೆಗೆ ಬಹಿರಂಗ ಸಭೆ, ಬೆಳಗಾವಿಯ ಖಾಸಗಿ ಹೋಟೆಲ್‌ನಿಂದ ಚನ್ನಮ್ಮ ವೃತ್ತದವರೆಗೆ ರ್ಯಾಲಿ ನಡೆಸಲಿದ್ದಾರೆಂದು ತಿಳಿದುಬಂದಿದೆ.
Post a Comment