ಪಿಎಸ್‌ಐ ನೇಮಕಾತಿ ಹಗರಣ: ಎಡಿಜಿಪಿ ಅಮೃತ್ ಪಾಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒಪ್ಪಿಗೆ ಸೂಚಿಸಿದ ಸರ್ಕಾರ

 ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ಎಡಿಜಿಪಿ ಆಗಿದ್ದ ಅಮೃತ್ ಪಾಲ್ ಅವರನ್ನು ವಿಚಾರಣೆಗೆ ಒಳಪಡಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.

         ಅಮೃತ್ ಪಾಲ್

By : Rekha.M
Online Desk


ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ಎಡಿಜಿಪಿ ಆಗಿದ್ದ ಅಮೃತ್ ಪಾಲ್ ಅವರನ್ನು ವಿಚಾರಣೆಗೆ ಒಳಪಡಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.

ಆರೋಪಿ ಐಪಿಎಸ್ ಅಧಿಕಾರಿಯಾಗಿರುವುದರಿಂದ ಕಾನೂನು ಪ್ರಕ್ರಿಯೆ ಆರಂಭಿಸಲು ಸರ್ಕಾರದ ಒಪ್ಪಿಗೆ ಅಗತ್ಯವಿತ್ತು. ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿಗೆ ಗುರಿಯಾಗಿರುವ ಆಡಳಿತಾರೂಢ ಬಿಜೆಪಿ ಇದೀಗ ತನಿಖೆಗೆ ತನ್ನ ಸಮ್ಮತಿಯನ್ನು ನೀಡಿದೆ.

ಜೈಲಿನಲ್ಲಿರುವ ಐಪಿಎಸ್ ಅಧಿಕಾರಿ ವಿರುದ್ಧ ಸಿಐಡಿ 1,406 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತ್ತು. ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ರಾಜ್ಯವನ್ನೇ ಬೆಚ್ಚಿಬೀಳಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ್ದ ಪಿಎಸ್ ಐ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಮೊದಲ ಹಿರಿಯ ಎಡಿಜಿಪಿ ಮಟ್ಟದ ಅಧಿಕಾರಿ ಅಮೃತ್ ಪಾಲ್.

ಆರೋಪಿ ಅಮೃತ್ ಪಾಲ್‌ ಅವರನ್ನು ಹಗರಣದ 35ನೇ ಆರೋಪಿಯನ್ನಾಗಿ ಮಾಡಲಾಗಿದ್ದು, ಸಿಐಡಿ ತನಿಖಾಧಿಕಾರಿ ಡಿವೈಎಸ್‌ಪಿ ಬಿ.ಕೆ. ಶೇಖರ್ ಅವರು ಹಗರಣದಲ್ಲಿ ಅಮೃತ್ ಪಾಲ್ ವಿರುದ್ಧ 78 ದಾಖಲೆಗಳು, 38 ಸಾಕ್ಷಿಗಳನ್ನು ಸಲ್ಲಿಸಿದ್ದು, ಪಾಲ್ ಅವರ ಪಾತ್ರವನ್ನು ವಿವರಿಸಿದ್ದಾರೆ. ಹಗರಣವನ್ನು ನಡೆಸಲು ಸಂಚು ಮತ್ತು ಸಬ್ ಇನ್ಸ್‌ಪೆಕ್ಟರ್ ಹುದ್ದೆಯ ಆಕಾಂಕ್ಷಿಗಳಿಂದ ಹಣ ವಸೂಲಿ ಮಾಡಿದ್ದರು ಎನ್ನಲಾಗಿದೆ.

ಪಿಎಸ್‌ಐ ಹುದ್ದೆಯ ಆಕಾಂಕ್ಷಿಗಳಿಂದ 1.35 ಕೋಟಿ ರೂಪಾಯಿ ಹಣವನ್ನು ಪಡೆದಿದ್ದ ಪಾಲ್‌, ಆ ಹಣವನ್ನು ತನ್ನ ಸಹಾಯಕ ಹಾಗೂ ಬೇನಾಮಿ ಶಂಭುಲಿಂಗ ಸ್ವಾಮಿಗೆ ನೀಡಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈತನಿಂದ 41 ಲಕ್ಷ ರೂ.ಗಳನ್ನು ಸಿಐಡಿ ವಶಪಡಿಸಿಕೊಂಡಿತ್ತು.

ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಕೆಲಸ ಮಾಡಿದ್ದ ಪಾಲ್ ಅವರು ತಮ್ಮ ಜೂನಿಯರ್ ಡಿವೈಎಸ್ಪಿ ಶಾಂತಕುಮಾರ್ ಮತ್ತು ತಂಡಕ್ಕೆ 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಹಗರಣ ನಡೆಸಲು ಅವಕಾಶ ಮಾಡಿಕೊಟ್ಟಿದ್ದರು. ನೇಮಕಾತಿ ವಿಭಾಗದ ಇತರೆ ಅಧಿಕಾರಿಗಳಾದ ಸುನೀತಾ ಬಾಯಿ, ಆರ್‌ಪಿಐ ಮಂಜುನಾಥ್ ಮತ್ತು ಸಿಬಂದಿ ಕೂಡ ಹಗರಣದಲ್ಲಿ ಅವರ ಪಾತ್ರವನ್ನು ದೃಢಪಡಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ, ತನಗೆ ತಿಳಿಯದಂತೆ ಹಗರಣ ನಡೆದಿದ್ದು, ಹಣ ಪಡೆದಿಲ್ಲ ಎಂದು ಪೌಲ್ ಸಮರ್ಥಿಸಿಕೊಳ್ಳುತ್ತಿದ್ದಾರೆ.

ವಿಶೇಷವೆಂದರೆ, ಹಗರಣ ಬೆಳಕಿಗೆ ಬಂದ ನಂತರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ರಾಜೀನಾಮೆಗೆ ಪ್ರತಿಪಕ್ಷ ಕಾಂಗ್ರೆಸ್ ಒತ್ತಾಯಿಸಿತ್ತು.

Post a Comment

Previous Post Next Post