ರಾಜ್ಯದಲ್ಲಿ ಮಳೆಯ ಅಬ್ಬರ: ಕೋಲ್ಡ್ ಸ್ಟೋರೇಜ್ ಘಟಕಗಳಿಲ್ಲದೆ ಸಂಕಷ್ಟದಲ್ಲಿ ಗದಗದ ಈರುಳ್ಳಿ ಬೆಳೆಗಾರರು!

 ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಗದಗ ಜಿಲ್ಲೆಯಲ್ಲಿ ಇದುವರೆಗೂ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಇಲ್ಲ ಎಂಬುದು ವಿಪರ್ಯಾಸದ ವಿಚಾರವಾಗಿದೆ.

       ಗದಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು.

By : Rekha.M
Online Desk

ಗದಗ: ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಗದಗ ಜಿಲ್ಲೆಯಲ್ಲಿ ಇದುವರೆಗೂ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಇಲ್ಲ ಎಂಬುದು ವಿಪರ್ಯಾಸದ ವಿಚಾರವಾಗಿದೆ.

ಕೃಷಿ ಮಾರುಕಟ್ಟೆ ಉತ್ಪನ್ನ ಸಮಿತಿಯು ಶೈತ್ಯಾಗಾರಕ್ಕಾಗಿ ಎರಡು ಕಟ್ಟಡಗಳನ್ನು ನಿರ್ಮಿಸಿದೆ, ಆದರೆ ಇನ್ನೂ ಸೌಲಭ್ಯಗಳನ್ನು ಒದಗಿಸಿಲ್ಲ. ರಾಜ್ಯದಲ್ಲಿ ಕೆಲದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಇದರಿಂದ ಬೆಳೆಗಳನ್ನು ಹೇಗೆ ಸಂಗ್ರಹಿಸುವುದು ಎಂದು ರೈತರು ಚಿಂತೆಗೀಡಾಗಿದ್ದಾರೆ. ಇದೇ ವೇಳೆ ಕೋಲ್ಡ್ ಸ್ಟೋರೇಜ್ ಘಟಕಗಳಲ್ಲಿ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ.

ಜಿಲ್ಲೆಯೊಂದರಲ್ಲೇ 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದ್ದು, ನವೆಂಬರ್ ನಿಂದ ಜನವರಿವರೆಗೆ ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡುತ್ತಾರೆ.

ಈ ಬಾರಿ ಎಡೆಬಿಡದೆ ಸುರಿದ ಮಳೆಯಿಂದ ಹಲವು ರೈತರು ಸಂಕಷ್ಟಕ್ಕೀಡಾಗಿದ್ದು, ಸರಿಯಾದ ದಾಸ್ತಾನು ಇಲ್ಲದೇ ಬೆಳೆಗಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ ಸಣ್ಣ ರೈತರು ಉತ್ತಮ ಬೆಲೆಗೆ ಕಾಯದೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಇತರರು ಗೋದಾಮುಗಳನ್ನು ಬಾಡಿಗೆಗೆ ಪಡೆಯಬೇಕಾದ ಅನಿವಾರ್ಯತೆ ಇದೆ.

ಈರುಳ್ಳಿ ಬೆಳೆಗಾರರು ಪ್ರತಿ ವರ್ಷವೂ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಮತ್ತು ಕಡಿಮೆ ಬೆಲೆಗೆ ಬೆಳೆಗಳನ್ನು ಮಾರಾಟ ಮಾಡಲು ಅಥವಾ ಅಲ್ಪ ಲಾಭ ಪಡೆಯಲು ಅವುಗಳನ್ನು ಬೇರೆಡೆಗೆ ಕೊಂಡೊಯ್ಯುವುದು ಅನಿವಾರ್ಯವಾಗುತ್ತಿದೆ. 9.5 ಕೋಟಿ ಮೌಲ್ಯದ ಎರಡು ಕಟ್ಟಡಗಳನ್ನು 2018 ರಲ್ಲಿ ನಿರ್ಮಿಸಲಾಗಿದೆ, ಆದರೆ ಸೌಲಭ್ಯಗಳನ್ನು ಇನ್ನೂ ಒದಗಿಸಿಲ್ಲ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ, ಈರುಳ್ಳಿ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ ಈ ಬಾರಿ ಬೆಂಗಳೂರು ಮಾರುಕಟ್ಟೆಯಲ್ಲೂ ಈರುಳ್ಳಿಗೆ ಕಡಿಮೆ ಬೆಲೆ ಸಿಗುತ್ತಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ ನಾಲ್ಕು ಕ್ವಿಂಟಾಲ್ ಈರುಳ್ಳಿ ಮಾರಾಟ ಮಾಡಿದ ಗದಗ ರೈತನಿಗೆ 8 ರೂಪಾಯಿ ಲಾಭ ಬಂದಿದೆ.

ಗೋದಾಮುಗಳ ಬಾಡಿಗೆ ಬೆಲೆಯೇ ದಿನಕ್ಕೆ 300 ರೂ.ಗಳಾಗಿವೆ. ಈ ಎಲ್ಲಾ ಬೆಳವಣಿಗೆಗಳು ಗದಗ ಜಿಲ್ಲೆಯ ರೈತರನ್ನು ಲಾಭವನ್ನು ಬಿಟ್ಟುಬಿಡುವಂತೆ ಮಾಡುತ್ತಿದೆ.

ಈರುಳ್ಳಿ ಬೆಳೆಗಾರರಿಗೆ ಉಚಿತ ದಾಸ್ತಾನು ಮಾಡಲು ನಿರ್ಮಿಸಿರುವ ಈ ಎರಡು ಕಟ್ಟಡಗಳಲ್ಲಿ ಶೈತ್ಯಾಗಾರ ವ್ಯವಸ್ಥೆ ಕಲ್ಪಿಸುವಂತೆ ಎಪಿಎಂಸಿ ಅಧಿಕಾರಿಗಳಿಗೆ ಒತ್ತಾಯಿಸುತ್ತಲೇ ಬಂದಿದ್ದೇವೆ. ರಾಜ್ಯದ ಮಟ್ಟದ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಆದರೆ, ಅಧಿಕಾರಿಗಳು ಕಾಳಜಿ ತೋರುತ್ತಿಲ್ಲ ಎಂದು ಈರುಳ್ಳಿ ರೈತರೊಬ್ಬರು ತಿಳಿಸಿದ್ದಾರೆ.

ಗದಗ ಎಪಿಎಂಸಿಯ ಅಧಿಕಾರಿಯೊಬ್ಬರು ಮಾತನಾಡಿ, “ನಾವು ಶೀಘ್ರದಲ್ಲೇ ರೈತರಿಗೆ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳನ್ನು ಒದಗಿಸುತ್ತೇವೆ, ಆದರೆ ಅನೇಕರು ತಮ್ಮ ಬೆಳೆಗಳಿಗೆ ಬೇಡಿಕೆಯಿಲ್ಲವೆಂದು ತಮ್ಮ ಬೆಳೆಗಳನ್ನು ಸಗಟು ವ್ಯಾಪಾರಿಗಳಿಗೆ ಅಥವಾ ಬೆಂಗಳೂರಿಗೆ ಕೊಂಡೊಯ್ಯುತ್ತಾರೆ. ಇದೀಗ ರೈತರಿಂದ ಬೇಡಿಕೆಗಳು ಬಂದಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಅವರಿಗೆ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದಿದ್ದಾರೆ.

Post a Comment

Previous Post Next Post