ನಗರದಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ಯಾವುದೇ ಅಡೆತಡೆಗಳಿಲ್ಲದಂತೆ ನಡೆಯಲು 8,500 ಪೊಲೀಸ್ ಸಿಬ್ಬಂದಿ ಮತ್ತು 5,500 ಸಂಚಾರಿ ಪೊಲೀಸ್ ಸಿಬ್ಬಂದಿ ಸೇರಿದಂತೆ 14,000 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಸಂಗ್ರಹ ಚಿತ್ರ
ಬೆಂಗಳೂರು: ನಗರದಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ಯಾವುದೇ ಅಡೆತಡೆಗಳಿಲ್ಲದಂತೆ ನಡೆಯಲು 8,500 ಪೊಲೀಸ್ ಸಿಬ್ಬಂದಿ ಮತ್ತು 5,500 ಸಂಚಾರಿ ಪೊಲೀಸ್ ಸಿಬ್ಬಂದಿ ಸೇರಿದಂತೆ 14,000 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಸಿ.ಹೆಚ್.ಪ್ರತಾಪ್ ರೆಡ್ಡಿಯವರು, ನಾಗರೀಕರ ಹಿತದೃಷ್ಟಿಯಿಂದ ಏರ್'ಪೋರ್ಟ್ ರಸ್ತೆಯ ಫ್ಲೈಓವರ್ ಬಿಟ್ಟು ನಗರದ ಇನ್ನೆಲ್ಲಾ ಮೇಲ್ಸೇತುವೆಯಲ್ಲಿ ಶನಿವಾರ ರಾತ್ರಿ 9ರಿಂದ ಭಾನುವಾರ ಬೆಳಿಗ್ಗೆ 6ರವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 10ರಿಂದಲೇ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಯಲಿದೆ. ವ್ಹೀಲಿಂಗ್, ಅತಿವೇಗದ ಚಾಲನೆ ಮಾಡುವವರ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಸಾರ್ವಜನಿಕರು ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ ಎಂದರು ಹೇಳಿದರು.
ಗಲಾಟೆ ಮಾಡುವವರ ಮೇಲೆ ನಿಗಾ ಇಡಲು ವಾಚ್‌ಟವರ್‌ಗಳನ್ನು ಸ್ಥಾಪಿಸಲಾಗಿದೆ, ಈ ಗೋಪುರಗಳಿಗೆ ನಿಯೋಜಿಸಲಾದ ಸಿಬ್ಬಂದಿಗೆ ಬೈನಾಕ್ಯುಲರ್‌ಗಳನ್ನು ಒದಗಿಸಲಾಗುವುದು. ಪ್ರಮುಖ ಸ್ಥಳಗಳಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ನಿಯೋಜಿಸಲಾಗುವುದು. ಹೆಚ್ಚಿನ ಸಿಸಿಟಿವಿಗಳು ಮತ್ತು 20 ಡ್ರೋನ್ ಕ್ಯಾಮೆರಾಗಳನ್ನು ನಿಯೋಜಿಸಲಾಗುತ್ತಿದೆ.
ವರ್ಷಾಚರಣೆ ಸಂದರ್ಭದಲ್ಲಿ ಮಾದಕ ವಸ್ತು ಪೂರೈಕೆ ಹಾಗೂ ರೇವ್ ಪಾರ್ಟಿ ನಿಯಂತ್ರಿಸಲು ನಗರದ ಎಲ್ಲಾ ವಿಭಾಗಗಳ ಡಿಸಿಪಿಯವರು ಹಾಗೂ ಸಿಸಿಬಿ ಅಧಇಕಾರಿಗಳು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ತಿಳಿಯದೇ ಕೂಡ ಡ್ರಗ್ಸ್ ನೀಡುವಂತಹ ಪಾರ್ಟಿಗಳಿಗೆ ಹೋಗದಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಇಂತಹ ಸ್ಥಳಗಳಲ್ಲಿ ಸಿಕ್ಕಿಬಿದ್ದವರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಅಂತಹ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸುವುದು ಉತ್ತಮ. ಡಿಸೆಂಬರ್ ವೊಂದರಲ್ಲಿಯೇ ಸುಮಾರು 547 ಪ್ರಕರಣಗಳನ್ನು ದಾಖಲಿಸಲಾಗಿದ್ದು, 6 ವಿದೇಶಿಯರು ಸೇರಿದಂತೆ 637 ಮಂದಿಯನ್ನು ಬಂಧನಕ್ಕೊಳಪಡಿಸಿ, 344 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮದ್ಯದ ಅಮಲಿನಲ್ಲಿ ಅಶಿಸ್ತಿನ ವರ್ತನೆ ತೋರುವ ಮೋಜುಗಾರರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ನಂತರ ಮತ್ತು ಕಡಿಮೆಯಾದ ಬಳಿಕ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಪಾರ್ಟಿ ಸ್ಥಳಗಳ ಪ್ರವೇಶದ್ವಾರದಲ್ಲಿ ಫೋಟೋ ತೆಗೆಯುವುದು ಕಡ್ಡಾಯವಾಗಿದ್ದು, ಮಾಸ್ಕ್ ಧರಿಸಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಯಾವುದೇ ಅನುಮಾನಾಸ್ಪದ ಓಡಾಟ, ವಸ್ತುಗಳು ಕಂಡು ಬಂದರೂ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇವ. ಧ್ವನಿವರ್ಧಕ ಹಾಗೂ ಮ್ಯೂಸಿಕ್ ಸಿಸ್ಟಂಗಳಿಗೆ ಪ್ರತ್ಯೇಕ ಪರವಾನಗಿ ಪಡೆಯಬೇಕಿದ್ದು, ಮಧ್ಯರಾತ್ರಿಯವರೆಗೂ ಅನುಮತಿ ನೀಡಲಾಗುವುದು. ಹೊಸ ವರ್ಷಾಚರಣೆಗ ಮಧ್ಯರಾತ್ರಿ 1 ಗಂಟೆಯವರಗೆ ಅನುಮತಿ ನೀಡಲಾಗಿದೆ.
ಶಬ್ದ ಮಾಲಿನ್ಯ ಸಮಿತಿಗಳ ಭಾಗವಾಗಿರುವ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಶ್ರೇಣಿಯ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಪಾರ್ಟಿಗಳಲ್ಲಿ ಅನುಮತಿಸಿದ ಮಿತಿಗಿಂತ ಹೆಚ್ಚಾಗಿ ಸೌಂಡ್ ನೀಡಿದ್ದರೆ, ಕ್ರಮ ಕೈಗೊಳ್ಳುತ್ತಾರೆ. ಹೊಸ ವರ್ಷಾಚರಣೆ ವೇಳೆ ವೇಗವಾಗಿ ಚಾಲನೆ ಮಾಡುವುದು, ನಿರ್ಲಕ್ಷ್ಯ ಚಾಲನೆ ಮಾಡುವುದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಹೀಗಾಗಿ ಪಾರ್ಟಿಗಳಿಗೆ ಹೋಗುವವರು ಸ್ವಂತ ವಾಹನಗಳ ಬದಲಿಗೆ ಸಾರ್ವಜನಿಕ ವಾಹನಗಳನ್ನು ಬಳಕೆ ಮಾಡುವಂತೆ ಸಲಹೆ ನೀಡುತ್ತಿದ್ದೇವೆ. ಈ ಕುರಿತು ರಾತ್ರಿಯಿಡಿ ತಪಾಸಣೆ ಕೈಗೊಳ್ಳಲಾಗುತ್ತದೆ ಎಂದು ಸಂಚಾರ ವಿಭಾಗದ ವಿಶೇಷ ಆಯುಕ್ತ ಸಲೀಂ ಅವರು ಹೇಳಿದ್ದಾರೆ.
ಎಂಜಿ ರಸ್ತೆಯ ಸುತ್ತಮುತ್ತ ಸಂಚಾರಕ್ಕೆ ನಿರ್ಬಂಧ
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಎಂಜಿ ರಸ್ತೆ ಸುತ್ತಮುತ್ತ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ.
ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿಯಲ್ಲಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆ, ರೆಸ್ಟ್ ಹೌಸ್ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆಗಳಲ್ಲಿ ಕರ್ತವ್ಯದಲ್ಲಿರುವ ಪೊಲೀಸ್ ಮತ್ತು ಅಗತ್ಯ ಸೇವೆಗಳ ವಾಹನಗಳನ್ನು ಹೊರತುಪಡಿಸಿ, ಇತರೆ ವಾಹನಗಳ ಸಂಚಾರಕ್ಕೆ ಈ ರಸ್ತೆಯಲ್ಲಿ ನಿರ್ಬಂಧ ಹೇರಲಾಗಿದೆ.
ಈ ರಸ್ತೆಗಳಲ್ಲಿ ಶನಿವಾರ ರಾತ್ರಿ 8 ರಿಂದ ಭಾನುವಾರ ಮಧ್ಯರಾತ್ರಿ 1 ರವರೆಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಭಾನುವಾರ ಮುಂಜಾನೆ 3 ಗಂಟೆಯವರೆಗೆ ಈ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯನ್ನೂ ನಿಷೇಧಿಸಲಾಗಿದೆ.
ಈ ರಸ್ತೆಗಳಲ್ಲಿ ಪ್ರವೇಶವಿಲ್ಲ...
- ಎಂಜಿ ರಸ್ತೆ - ಅನಿಲ್ ಕುಂಬ್ಳೆ ವೃತ್ತದಿಂದ ಮೇಯೋ ಹಾಲ್ ಬಳಿ ರೆಸಿಡೆನ್ಸಿ ರಸ್ತೆವರೆಗೆ
- ಬ್ರಿಗೇಡ್ ರಸ್ತೆ - ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಒಪೇರಾ ಜಂಕ್ಷನ್‌ವರೆಗೆ
- ಚರ್ಚ್ ಸ್ಟ್ರೀಟ್ - ಬ್ರಿಗೇಡ್ ರಸ್ತೆಯಿಂದ ಮ್ಯೂಸಿಯಂ ರಸ್ತೆಗೆ
- ಮ್ಯೂಸಿಯಂ ರಸ್ತೆ - ಎಂಜಿ ರಸ್ತೆಯಿಂದ ಹಳೇ ಮದ್ರಾಸ್ ರಸ್ತೆ ಜಂಕ್ಷನ್‌ವರೆಗೆ
- ರೆಸ್ಟ್ ಹೌಸ್ ರಸ್ತೆ - ಮ್ಯೂಸಿಯಂ ರಸ್ತೆಯಿಂದ ಬ್ರಿಗೇಡ್ ರಸ್ತೆವರೆಗೆ
- ರೆಸಿಡೆನ್ಸಿ ಕ್ರಾಸ್ ರಸ್ತೆ - ರೆಸಿಡೆನ್ಸಿ ರಸ್ತೆಯಿಂದ ಎಂಜಿ ರಸ್ತೆ (ಶಂಕರ್ ನಾಗ್ ಥಿಯೇಟರ್)ವರೆಗೆ
ಈ ರಸ್ತೆಗಳಲ್ಲಿ ಪಾರ್ಕಿಂಗ್ ಇಲ್ಲ
- ಎಂಜಿ ರಸ್ತೆ - ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ
- ಬ್ರಿಗೇಡ್ ರಸ್ತೆ - ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಒಪೇರಾ ಜಂಕ್ಷನ್‌ವರೆಗೆ
- ಚರ್ಚ್ ಸ್ಟ್ರೀಟ್ - ಬ್ರಿಗೇಡ್ ರಸ್ತೆಯಿಂದ ಸೇಂಟ್ ಮಾರ್ಕ್ಸ್ ರಸ್ತೆಯವರೆಗೆ
- ರೆಸ್ಟ್ ಹೌಸ್ ರಸ್ತೆ - ಬ್ರಿಗೇಡ್ ರಸ್ತೆಯಿಂದ ಮ್ಯೂಸಿಯಂ ರಸ್ತೆವರೆಗೆ
- ಮ್ಯೂಸಿಯಂ ರಸ್ತೆ - ಎಂಜಿ ರಸ್ತೆಯಿಂದ ಮದ್ರಾಸ್ ಬ್ಯಾಂಕ್ ರಸ್ತೆ ಜಂಕ್ಷನ್‌ವರೆಗೆ
2 ಗಂಟೆಗಳ ಮೆಟ್ರೋ ಸೇವೆ ವಿಸ್ತರಣೆ
ಸಂಭ್ರಮಾಚರಣೆಯ ನಂತರ ಪ್ರಯಾಣಿಕರು ಮನೆಗೆ ಮರಳಲು ಅನುಕೂಲವಾಗುವಂತೆ ನಮ್ಮ ಮೆಟ್ರೋ ಡಿಸೆಂಬರ್ 31 ರಂದು ಮಧ್ಯರಾತ್ರಿಯಿಂದ ಜನವರಿ 1, 2023 ರಂದು 2 ಗಂಟೆಯವರೆಗೆ ರೈಲು ಸೇವೆಗಳನ್ನು ವಿಸ್ತರಿಸಿದೆ.
ವಿಸ್ತರಿಸಿದ ಸಮಯದಲ್ಲಿ ರೈಲುಗಳು 15 ನಿಮಿಷಗಳ ಮಧ್ಯಂತರದಲ್ಲಿ ಚಲಿಸುತ್ತವೆ, ಮೂರು ನಿಲ್ದಾಣಗಳಲ್ಲಿ ಕೇವಲ ಕಾಗದದ ಟಿಕೆಟ್‌ಗಳಿಗೆ ಅನುಮತಿ ನೀಡಲಾಗಿದೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಎಲ್ಲಾ ನಾಲ್ಕು ಟರ್ಮಿನಲ್ ನಿಲ್ದಾಣಗಳಿಗೆ ಕೊನೆಯ ರೈಲು ಜನವರಿ 1 ರಂದು ಮಧ್ಯರಾತ್ರಿ 2 ಗಂಟೆವರೆಗೆ ಇರುತ್ತದೆ.
ಮೆಟ್ರೋ ರೈಲು ಸಮಯ
- ಬೈಯಪ್ಪನಹಳ್ಳಿ 1.35, ಕೆಂಗೇರಿ 1.25, ನಾಗಸಂದ್ರ 1.30 ಮತ್ತು ಸಿಲ್ಕ್ ಇನ್ಸ್ಟಿಟ್ಯೂಟ್ 1.25. ಎಂಜಿ ರಸ್ತೆ,
- ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್‌ಗಳಲ್ಲಿ ಪೇಪರ್ ಟಿಕೆಟ್‌ಗಳ ದರವು ವಿಸ್ತೃತ ಸಮಯದಲ್ಲಿ 50 ರೂ ಇರಲಿದೆ.
Post a Comment