ತಾರಕಕ್ಕೇರಿದ ಗಡಿ ವಿವಾದ: ಒಂದಿಂಚು ಭೂಮಿ ಬಿಟ್ಟುಕೊಡುವುದಿಲ್ಲ ಎಂದ ಸಿಎಂ ಏಕನಾಥ್ ಶಿಂಧೆ, ಕರ್ನಾಟಕ ಬಸ್ಸುಗಳಿಗೆ ಕಪ್ಪು ಬಣ್ಣದಿಂದ ಮರಾಠಿಯಲ್ಲಿ ಬರೆದು ಆಕ್ರೋಶ

 ಮಹಾರಾಷ್ಟ್ರ ಮತ್ತು ಕರ್ನಾಟಕ ಮಧ್ಯೆ ಗಡಿ ವಿವಾದ ಮುಂದುವರಿಯುತ್ತಿದ್ದಂತೆ, ಮಹಾರಾಷ್ಟ್ರ ಭಾಗದ ಒಂದು ಇಂಚು ಭೂಮಿಯನ್ನೂ ಸಹ ಬಿಟ್ಟುಕೊಡುವುದಿಲ್ಲ ಎಂದು ಅಲ್ಲಿನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.

           ಕರ್ನಾಟಕ ಸಾರಿಗೆ ಬಸ್ಸುಗಳಿಗೆ ಕಪ್ಪು ಬಣ್ಣದಿಂದ ಮರಾಠಿಯಲ್ಲಿ ಬರೆದು ಮರಾಠ ಮಹಾಸಂಘದ ಪ್ರತಿಭಟನೆ

By : Rekha.M
Online Desk

ಮುಂಬೈ: ಮಹಾರಾಷ್ಟ್ರ ಮತ್ತು ಕರ್ನಾಟಕ ಮಧ್ಯೆ ಗಡಿ ವಿವಾದ ಮುಂದುವರಿಯುತ್ತಿದ್ದಂತೆ, ಮಹಾರಾಷ್ಟ್ರ ಭಾಗದ ಒಂದು ಇಂಚು ಭೂಮಿಯನ್ನೂ ಸಹ ಬಿಟ್ಟುಕೊಡುವುದಿಲ್ಲ ಎಂದು ಅಲ್ಲಿನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.

ಗಡಿ ಭಾಗದಲ್ಲಿರುವ ಮರಾಠಿಗರಿಗೆ ನ್ಯಾಯ ಒದಗಿಸಲು ಸರ್ಕಾರ ಸಕಲ ಪ್ರಯತ್ನವನ್ನೂ ಮಾಡುತ್ತಿದೆ. ಮಹಾರಾಷ್ಟ್ರ ಭಾಗದ ಒಂದು ಇಂಚು ಭೂಮಿಯೂ ಬೇರೆಯವರ ಪಾಲಾಗಲು ನಾವು ಬಿಡುವುದಿಲ್ಲ. 40 ಗ್ರಾಮಗಳ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.

ಇದಕ್ಕೂ ಮುನ್ನ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮೇಲೆ ಹರಿಹಾಯ್ದಿದ್ದ ಮಾಜಿ ಸಿಎಂ ಉದ್ಧವ್ ಠಾಕ್ರೆ, ಬೊಮ್ಮಾಯಿಯವರಿಗೆ ಈಗೇನು ದೆವ್ವ ಹಿಡಿದಿದೆಯೇ, ಈಗ ಗಡಿ ವಿವಾದ ಬಗ್ಗೆ ಮಾತನಾಡುತ್ತಾರೆ. ಮಹಾರಾಷ್ಟ್ರದ 40 ಗ್ರಾಮಗಳು ಬೇಕೆಂದು ಈಗ ಹಠಾತ್ತಾಗಿ ಕೇಳುವ ಬೊಮ್ಮಾಯಿಯವರಿಗೆ ದೆವ್ವ ಹಿಡಿದಿದೆಯೇ ಎಂದು ಟೀಕಿಸಿದ್ದರು.

ಎನ್ ಸಿಪಿ ನಾಯಕ ಅಜಿತ್ ಪವಾರ್ ಕರ್ನಾಟಕಕ್ಕೆ ಸಿಎಂ ಏಕನಾಥ್ ಶಿಂಧೆ ಮತ್ತು ದೇವೇಂದ್ರ ಫಡ್ನವೀಸ್ ಸರಿಯಾದ ಉತ್ತರ ನೀಡಬೇಕೆಂದು ಹೇಳಿದ್ದಾರೆ. ಈ ವಿವಾದದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆಂದು ಕೂಡ ಅಜಿತ್ ಪವಾರ್ ಒತ್ತಾಯಿಸಿದ್ದಾರೆ. 

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಗಡಿ ವಿವಾದ ಕುರಿತು ನೀಡುತ್ತಿರುವ ಹೇಳಿಕೆ ಪ್ರಚೋದನಕಾರಿಯಾಗಿದ್ದು, ಜನರನ್ನು ಕೆರಳಿಸುವಂತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು. ದೇವೇಂದ್ರ ಫಡ್ನವೀಸ್ ಹೇಳಿಕೆ ಪ್ರಚೋದನಕಾರಿಯಾಗಿದೆ. ಗಡಿ ವಿವಾದದಲ್ಲಿ ನಮ್ಮ ಸರ್ಕಾರ ನೆಲ, ಜನ, ಗಡಿಭಾಗದ ರಕ್ಷಣೆಗೆ ಬದ್ಧವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು.

ನಿನ್ನೆ ಹೇಳಿಕೆ ನೀಡಿದ್ದ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಭಾಗದಲ್ಲಿರುವ ಯಾವುದೇ ಗ್ರಾಮಗಳು ಕರ್ನಾಟಕಕ್ಕೆ ಹೋಗಲು ಬಿಡುವುದಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ಸರ್ಕಾರ ಬಲವಾಗಿ ಹೋರಾಡಲಿದ್ದು, ಬೆಳಗಾವಿ ಕಾರವಾರ ನಿಪ್ಪಾಣಿ ಭಾಗ ಸೇರಿದಂತೆ ಮರಾಠಿಗರು ಮಾತನಾಡುವ ಯಾವುದೇ ಗ್ರಾಮಗಳು ಕರ್ನಾಟಕ ಪಾಲಾಗಲು ಬಿಡುವುದಿಲ್ಲ ಎಂದಿದ್ದರು. 

ಸಿಎಂ ಬೊಮ್ಮಾಯಿ ಹೇಳಿಕೆ ವಿರುದ್ಧ ಪ್ರತಿಭಟನೆ: ಗಡಿ ವಿವಾದ ಕುರಿತು ಕರ್ನಾಟಕ ಸಿಎಂ ಬೊಮ್ಮಾಯಿ ನೀಡಿರುವ ಹೇಳಿಕೆ ಖಂಡಿಸಿ ಮರಾಠ ಮಹಾಸಂಘ ಪ್ರತಿಭಟನೆ ನಡೆಸಿದ್ದು ಕರ್ನಾಟಕ ಬಸ್ಸಿಗೆ ಬಣ್ಣ ಬಳಿದು, ಮರಾಠಿಯಲ್ಲಿ ಬರೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.


Post a Comment

Previous Post Next Post