ಕಾಂಗ್ರೆಸ್ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ ಬಿಜೆಪಿ ಅಸ್ತ್ರ, ಕೈ ಅಲೆಯನ್ನು ತಡೆದ SC, ST ಮೀಸಲಾತಿ ಹೆಚ್ಚಳ

 

ಭಾರತ್ ಜೋಡೋ ಯಾತ್ರೆ ಮೂಲಕ ರಾಜ್ಯ ರಾಜಕಾರಣದಲ್ಲಿ ಹವಾ ಸೃಷ್ಟಿಸುತ್ತಿರುವ ಕಾಂಗ್ರೆಸ್​ಗೆ ಬಿಜೆಪಿ ಹೊಸ ಅಸ್ತ್ರ ಬಿಟ್ಟಿದೆ. ಇದರಿಂದ ಎರಡು ದಿನದಲ್ಲಿ ರಾಜಕೀಯ ಅಲೆ ಬೇರೆ ತಿರುವುಪಡೆದುಕೊಂಡಿದೆ.

ಬೆಂಗಳೂರು: ಕರ್ನಾಟಕದಲ್ಲಿಇನ್ನೇನು ಆರೇಳು ತಿಂಗಳಲ್ಲಿ ವಿಧಾನಸಭೆ ಚುನಾವಣೆ (Karnataka Assembly Election 2023) ಎದುರಾಗಿಲಿದೆ. ಇದರ ಮಧ್ಯೆ ರಾಜಕೀಯ ಮೇಲಾಟುಗಳು ಜೋರಾಗಿವೆ. ಅದರಲ್ಲೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್(Congress) ಹಾಗೂ ಬಿಜೆಪಿ(BJP) ಮಧ್ಯೆ ಕಾಳಗ ಜೋರಾಗಿಯೇ ನಡೆಯುತ್ತಿದೆ.
ನೇಮಕಾತಿ ಹಗರಣಗಳು, 40 ಪರ್ಸೆಂಟ್ ಕಮಿಷನ್, ಪೇ ಸಿಎಂ ಸೇರಿದಂತೆ ಹಲವು ಆಡಳಿತರೂಢ ಬಿಜೆಪಿಯ ಭ್ರಷ್ಟಾಚಾರಗಳನ್ನ ಕಾಂಗ್ರೆಸ್ ರಾಜಕೀಯ ಅಸ್ತ್ರವನ್ನಾಗಿ ಬಳಿಸಿಕೊಳ್ಳುತ್ತಿದೆ. ಇದಕ್ಕೆ ಬಿಜೆಪಿ ಸಹ ತಿರುಗೇಟು ನೀಡಲು ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರಗಳನ್ನು ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಮೂಲಕ ಜನರ ಮುಂದಿಡುವ ಪ್ರಯತ್ನ ಮಾಡುತ್ತಿದೆ. ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ನಾಯಕ ಸಮುದಾಯದ ಮತಗಳ ಬುಟ್ಟಿಗೆ ಕೈಹಾಕಿದೆ.

ಹೌದು….ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಒಂದೇ ಏಟಿಗೆ ಸಾಮಾಜಿಕ ನ್ಯಾಯದ ಚಾಂಪಿಯನ್​ಗಳು ನಾವೇ ಎಂದು ಓಡಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಿದ್ದಾರೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಪಾಳಯದ ಜಾತಿ ಲೆಕ್ಕಾಚಾರವನ್ನು ಬುಡಮೇಲು ಮಾಡಿದ್ದಾರೆ.

ಕಾಂಗ್ರೆಸ್​ನ ಪೇ ಸಿಎಂ, 40 ಪರ್ಸೆಂಟ್ ಕಮೀಷನ್ ಆರೋಪ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನವೇ ಮೂಡಿಸಿದೆ. ಇದನ್ನೇ ಇಟ್ಟುಕೊಂಡು ಮುಂದಿನ ಚುನಾವಣೆಗೆ ಹೋಗಲು ಸಿದ್ಧವಾಗಿದ್ದ ಕಾಂಗ್ರೆಸ್​ಗೆ ಬಿಜೆಪಿ ಎಸ್​ಸಿ ಹಾಗೂ ಎಸ್​ಟಿ ಮೀಸಲಾತಿ ಹೆಚ್ಚಿಳದ ಅಸ್ತ್ರ ಪ್ರಯೋಗಿಸಿದೆ. ಇದರಿಂದ ಕೈ ಕಂಗಾಲಾಗುವಂತೆ ಮಾಡಿದೆ.

ನಾಯಕ ಸಮುದಾಯದವನ್ನು ಸಮಾಧಾನಪಡಿಸುವ ಪ್ರಯತ್ನ ಯೆಸ್……ಎಸ್​ಟಿ ಮೀಸಲಾತಿ ಹೆಚ್ಚಳ ಮಾಡದಿರುವುದು ಹಾಗೂ ಶ್ರೀರಾಮುಲುಗೆ ಉಪಮುಖ್ಯಮಂತ್ರಿ ನೀಡುವುದಾಗಿ ಹೇಳಿ ಮಾತು ತಪ್ಪಿದ್ದರಿಂದ ನಾಯಕ ಸಮುದಾಯ ಬಿಜೆಪಿ ವಿರುದ್ಧ ಸಿಡಿದೆದ್ದಿದೆ. ಅಲ್ಲದೇ ಸಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ನೀಡಿದ ಭರವಸೆಗಳನ್ನ ಈಡೇರಿಸದೇ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದೇವೆ ಅಂತೆಲ್ಲ ಪೋಸ್ಟರ್​ಗಳು ಹರಿದಾಡುತ್ತಿವೆ. ಇದರಿಂದ ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ನಾಯಕ ಸಮುದಾಯದ ಮತಗಳು ಕೈತಪ್ಪುವ ಆತಂಕವಾಗಿತ್ತು. ಇದರಿಂದ ನಾಯಕ ಸಮುದಾಯವನ್ನು ಸಾಫ್ಟ್​ ಮಾಡಲು ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡುವ ತೀರ್ಮಾನಕ್ಕೆ ಬಂದಿದೆ.

ಕಳೆದ ಬಾರಿಯ ಉಪಚುನಾವಣೆಗೆ ಮುನ್ನ ಬಿ. ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಸಾಧ್ಯತೆ ಇದೆ ಎಂಬಂತಹ ಸುದ್ದಿ ದಟ್ಟವಾಗಿ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಶ್ರೀರಾಮುಲು ಉಪಮುಖ್ಯಮಂತ್ರಿ ಆಗುತ್ತಾರೆ ಎಂದು ಹೈಕಮಾಂಡ್ ಕೊಟ್ಟಿದ್ದ ಭರವಸೆಯಿಂದ ಇಡೀ ನಾಯಕ ಸಮುದಾಯ ಬಹುತೇಕ ಬಿಜೆಪಿ ಪರ ನಿಂತ್ತಿತ್ತು.ಪಕ್ಷದೊಳಗೂ ಕೂಡ ಶ್ರೀರಾಮುಲುಗೆ ಡಿಸಿಎಂ ಭಾಗ್ಯ ಕರುಣಿಸಲು ಬೆಂಬಲವಿತ್ತು. ಆದರೆ, ಚುನಾವಣೆ ಬಳಿಕ ಬಿಜೆಪಿಗೆ ಅಧಿಕಾರ ಸಿಗಲಿಲ್ಲ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಆ ಬಳಿಕ ಮೈತ್ರಿ ಪಾಳಯದಿಂದ 17 ಶಾಸಕರು ರಾಜೀನಾಮೆ ನೀಡುವುದರೊಂದಿಗೆ ಮೈತ್ರಿ ಸರ್ಕಾರ ಬಿದ್ದುಹೋಗಿ ಬಿಎಸ್​ವೈ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಆಗಲೂ ಕೂಡ ಶ್ರೀರಾಮುಲುಗೆ ಡಿಸಿಎಂ ಸ್ಥಾನ ಖಚಿತವೆಂಬ ಮಾತುಗಳು ಕೇಳಿಬಂದವು. ಅಚ್ಚರಿ ಎಂದರೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಲೇ ಇಲ್ಲ. ಇದನ್ನು ಕಾಂಗ್ರೆಸ್ ಲಾಭ ಪಡೆದುಕೊಂಡು, ನಾಯಕ ಸಮುದಾಯಕ್ಕೆ ಬಿಜೆಪಿ ಅನ್ಯಾಯ ಮಾಡಿದೆ. ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದು ಚುನಾವಣೆ ಸಂದರ್ಭದಲ್ಲಿ ಘೋಷಿಸಿತ್ತು. ಆದ್ರೆ, ಬಿಜೆಪಿ ಮಾತು ತಪ್ಪಿದೆ ಅಂತೆಲ್ಲ ಕಾಂಗ್ರೆಸ್ ನಾಯಕ ಸಮುದಾಯದ ಕಿವಿಗೆ ಊದಿ ರಾಜಕೀಯ ಮೈಲೇಜ್ ಪಡೆದುಕೊಂಡಿದೆ. ಇದೀಗ ಇದಕ್ಕೆ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳದ ನಿರ್ಧಾರದ ಮೂಲಕ ನಾಯಕ ಸಮುದಾಯದ ವೋಟ್​ ಬ್ಯಾಂಕ್​ಗೆ ಕೈಹಾಕಿದೆ.

ಎರಡು ದಿನದಲ್ಲಿ ಗೇಮ್ ಚೇಂಜ್​

ಆಡಳಿತರೂಢ ಬಿಜೆಪಿಯ ಕಾರ್ಯ ವೈಖರಿಗಳು ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ಪೇ ಸಿಎಂ, ಪರ್ಸೆಂಟೆಜ್ ಬಿಜೆಪಿಗೆ ಇರುಸುಮುರುಸು ಉಂಟುಮಾಡಿದೆ. ಜಿಲ್ಲಾ, ತಾಲೂಕು ಕೇಂದ್ರಗಳಲ್ಲೂ ಬಿಜೆಯ ಪೇಸಿಎಂ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಕಾಂಗ್ರೆಸ್​ನ ಈ ಎಲ್ಲಾ ರಾಜಕೀಯ ಮೈಲೇಜ್ ಎಎಸ್​ಸಿ, ಎಸ್​ಟಿ ಮೀಸಲಾತಿ ಹೆಚ್ಚಳ ತಲೆಕೆಳಗಾಗುವಂತೆ ಮಾಡಿದೆ. ಮೀಸಲಾತಿ ಹೆಚ್ಚಳ ತೀರ್ಮಾನ ತೆಗೆದುಕೊಳ್ಳುತ್ತಿದ್ದಂತೆಯೇ ಬಿಜೆಪಿ ರಾಜ್ಯ ರಾಜಕಾರಣದಲ್ಲಿ ಹವಾ ಸೃಷ್ಟಿಸಿದೆ. ಕಾಂಗ್ರೆಸ್ನ ಎಲ್ಲಾ ರನಣತಂತ್ರಗಳನ್ನು ಎರಡೇ ದಿನದಲ್ಲೇ ಮೀಸಲಾತಿ ಗೇಮ್ ಚೇಂಜ್ ಮಾಡಿದೆ.

ಹೋದಲೆಲ್ಲ ಬಿಜೆಪಿ ನಾಯಕರು, ಮೀಸಲಾತಿ ಹೆಚ್ಚಳವನ್ನು ನಾವು ಮಾಡಿದ್ದೇವೆ. ಇಷ್ಟು ವರ್ಷಗಳ ಕಾಲ ಕೇಂದ್ರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆದ್ರೆ, ಅವರು ಮಾಡುವ ಮನಸ್ಸು ಮಾಡಿಲ್ಲ. ಇದೀಗ ನಾವು ಸಾಧಿಸಿ ತೋರಿಸಿದ್ದೇವೆ. ಈ ಮೂಲಕ ಬಿಜೆಪಿ ಹಿಂದೂಳಿದವರ ಪರವಾಗಿದೆ ಎನ್ನುವ ಮಾತುಗಳಿಂದ ರಾಜಕೀಯ ಮೈಲೇಜ್ ಪಡೆದುಕೊಳ್ಳಲು ಬಿಜೆಪಿ ಮುಂದಾಗಿದೆ.

ಬಿಜೆಪಿ ಎಸ್​ಟಿ ಶಾಸಕರಿಗೆ ಬಲ

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಎಸ್​ಟಿ ಮೀಸಲಾತಿ ಹೆಚ್ಚಳ ಮಾಡುವುದಾಗಿ ನಾಯಕ ಸಮುದಾಯದ ಅಧಿಕಾಯಕ ಎಂದೇ ಬಿಂಬಿತರಾಗಿರುವ ಶ್ರೀರಾಮುಲು ಘೋಷಣೆ ಮಾಡಿದ್ದರು. ಮೀಸಲಾತಿ ಹೆಚ್ಚಳ ಮಾಡುವುದು ಶತಸಿದ್ಧ, ಇದನ್ನು ರಕ್ತದಲ್ಲಿ ಬರೆದುಕೊಡುವೆ ಅಂತೆಲ್ಲಾ ಹೇಳಿಕೆ ನೀಡಿದ್ದರು. ಆದ್ರೆ, ಹಲವು ವರ್ಷಗಳಾದರೂ ಮೀಸಲಾತಿ ಹೆಚ್ಚಳ ಸಾಧ್ಯವಾಗಿರಲಿಲ್ಲ. ಇದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.

ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿ ಸರ್ಕಾರ ಎಸ್​ಟಿ ಮೀಸಲಾತಿಯನ್ನು ಹೆಚ್ಚಿಸುವ ತೀರ್ಮಾನ ಕೈಗೊಂಡಿದ್ದು, ಎಸ್​ಟಿ ಮೀಸಲಾತಿ ಕ್ಷೇತ್ರದಿಂದ ಗೆದ್ದು ಬಂದಿರುವ ಶಾಸಕರಿಗೆ ಬಲ ಬಂದಂತಾಗಿದೆ. ಅಲ್ಲದೇ ಎದೆಯುಬ್ಬಿಸಿ ನಿಲ್ಲುವಂತೆ ಮಾಡಿದೆ.

ಈ ಮೀಸಲಾತಿ ಹೆಚ್ಚಳ ಅಸ್ತ್ರವನ್ನು ಈ ಬಾರಿ ಚುನಾವಣೆಗೆ ಬಲವಾಗಿ ಬಳಸಿಕೊಳ್ಳಲು ಬಿಜೆಪಿ ಹೈಕಾಂಡ್, ಎಸ್​​ಟಿ ಮೀಸಲು ಕ್ಷೇತ್ರದಿಂದ ಗೆದ್ದು ಬಂದಿರುವ ಶಾಸಕರಿಗೆ ಸಲಹೆ ನೀಡಿದೆ,. ಅಲ್ಲದೇ ಎಸ್​ಟಿ ಸಮುದಾಯ ಮತಗಳನ್ನ ಕ್ರೂಢೀಕರಿಸಬೇಕೆಂದು ಟಾಸ್ಕ್​ ನೀಡಿದೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಎಸ್​ಟಿ ಸಮುದಾಯದ ಶಾಸಕರಾದ ರಾಜುಗೌಡ, ಶ್ರೀರಾಮುಲು ಹೋದಲೆಲ್ಲ ಮೀಸಲಾತಿ ಹೆಚ್ಚಳ ಮಾಡಿರುವ ಬಗ್ಗೆ ಪ್ರಸ್ತಾಪ ಮಾಡುತ್ತಲೇ ಇದ್ದಾರೆ. ಮೀಸಲಾತಿ ಹೆಚ್ಚಳದ ಕ್ರೆಡಿಟ್ ತೆಗೆದುಕೊಳ್ಳುವುದರ ಜೊತೆ ತಮ್ಮ ಸಮುದಾಯದ ಮತಗಳನ್ನ ಬಿಜೆಪಿಗೆ ಪರಿವರ್ತಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದು ಚುನಾವಣೆ ವೇಳೆ ಯಾವ ರೀತಿ ವರ್ಕೌಟ್ ಆಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.




Post a Comment

Previous Post Next Post