ಇಡೀ ಜಗತ್ತಿನ ಆರ್ಥಿಕತೆ ಕುಂಟುತ್ತಾ ಸಾಗುತ್ತಿದ್ದರೆ, ಭಾರತದ ಆರ್ಥಿಕತೆ ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಮಾತ್ರವಲ್ಲದೇ ತುಲನಾತ್ಮಕವಾಗಿ ಪ್ರಕಾಶಮಾನವಾದ ಸ್ಥಾನದಲ್ಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹರ್ಷ ವ್ಯಕ್ತಪಡಿಸಿದೆ.
ಭಾರತದ ಆರ್ಥಿಕತೆ
ವಾಷಿಂಗ್ಟನ್: ಇಡೀ ಜಗತ್ತಿನ ಆರ್ಥಿಕತೆ ಕುಂಟುತ್ತಾ ಸಾಗುತ್ತಿದ್ದರೆ, ಭಾರತದ ಆರ್ಥಿಕತೆ ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಮಾತ್ರವಲ್ಲದೇ ತುಲನಾತ್ಮಕವಾಗಿ ಪ್ರಕಾಶಮಾನವಾದ ಸ್ಥಾನದಲ್ಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹರ್ಷ ವ್ಯಕ್ತಪಡಿಸಿದೆ.
ಈ ಕುರಿತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಉನ್ನತ ಅಧಿಕಾರಿಯೊಬ್ಬರು ಮಾತನಾಡಿದ್ದು, 'ಆರ್ಥಿಕ ಬೆಳವಣಿಗೆಯ ವಿಷಯದಲ್ಲಿ ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳು ನಿಧಾನವಾಗುತ್ತಿರುವಾಗ, ಭಾರತವು ಮಾತ್ರ ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿದೆ. ಭಾರತದ ಆರ್ಥಿಕತೆ ಉತ್ತಮವಾಗಿದ್ದು, ಇತರ ದೇಶಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಪ್ರಕಾಶಮಾನವಾದ ಸ್ಥಾನದಲ್ಲಿದೆ. ಜಾಗತಿಕ ಸಂಯೋಗವನ್ನು ನೋಡಿ, ಆರ್ಥಿಕತೆ ಕುಸಿತ ಸಮಗ್ರ ಸಮಸ್ಯೆಯಾಗಿದೆ ಎಂದು ಏಷ್ಯಾ ಮತ್ತು ಪೆಸಿಫಿಕ್ ಇಲಾಖೆಯ IMF ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಹೇಳಿದ್ದಾರೆ.
"ಹಣದುಬ್ಬರವು ಏರುತ್ತಿರುವಾಗಲೂ ಪ್ರಪಂಚದ ಅನೇಕ ಭಾಗಗಳಲ್ಲಿ ಬೆಳವಣಿಗೆ ನಿಧಾನವಾಗುತ್ತಿದೆ. ಜಾಗತಿಕ ಆರ್ಥಿಕತೆಯ 1/3 ರಷ್ಟನ್ನು ಹೊಂದಿರುವ ದೇಶಗಳು ಈ ವರ್ಷ ಅಥವಾ ಮುಂದಿನ ವರ್ಷ ಆರ್ಥಿಕ ಹಿಂಜರಿತಕ್ಕೆ ಹೋಗುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ. ಈ ಸಂದರ್ಭದಲ್ಲಿ ಹಣದುಬ್ಬರವು ಅತಿರೇಕವಾಗಿದೆ ಎಂದು ಶ್ರೀನಿವಾಸನ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಸುಧಾರಣೆ ಅತ್ಯಗತ್ಯ
ತೈಲ ಬೆಲೆಗಳು ಹೆಚ್ಚಾದ ಕಾರಣ ಭಾರತವು ಬಾಹ್ಯ ಖಾತೆಯ ಮೇಲೆ ದೊಡ್ಡ ಒತ್ತಡವನ್ನು ಎದುರಿಸುತ್ತಿದೆ. ಚಾಲ್ತಿ ಖಾತೆ ಕೊರತೆ ಹೆಚ್ಚುತ್ತಿದೆ ಎಂದು ಅಭಿಪ್ರಾಯ ಪಟ್ಟ ಶ್ರೀನಿವಾಸನ್ ಅವರು, 'ದೀರ್ಘಾವಧಿಯ ದೃಷ್ಟಿಕೋನದಿಂದ ಮಾಡಬೇಕಾದ ಕೆಲವು ಸುಧಾರಣೆಗಳಿವೆ ಎಂದರು. ಪ್ರಮುಖವಾಗಿ ಕೃಷಿ ಸುಧಾರಣೆ, ಭೂಸುಧಾರಣೆ, ಕಾರ್ಮಿಕ ಸುಧಾರಣೆಯಾಗಬೇಕು ಎಂದು ಹೇಳಿದರು.
ಬೇರೆ ದೇಶಗಳಿಗಿಂತ ಭಾರತ ಉತ್ತಮ
"ಬಹುತೇಕ ಪ್ರತಿಯೊಂದು ದೇಶವೂ ನಿಧಾನವಾಗುತ್ತಿದೆ. ಆ ಸಂದರ್ಭದಲ್ಲಿ, ಭಾರತವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಈ ಪ್ರದೇಶದ ಇತರ ದೇಶಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಪ್ರಕಾಶಮಾನವಾದ ಸ್ಥಾನದಲ್ಲಿದೆ ಎಂದು ಶ್ರ್ರೀನಿವಾಸನ್ ಹೇಳಿದ್ದಾರೆ.
ಆರ್ಥಿಕ ಬೆಳವಣಿಗೆಯಲ್ಲಿ ಹಿನ್ನಡೆ ಅನುಭವಿಸುತ್ತಿರುವುದು ಭಾರತ ಮಾತ್ರವಲ್ಲ, ಇದು ಜಾಗತಿಕವಾಗಿ ನಡೆಯುತ್ತಿರುವ ಟ್ರೆಂಡ್ ಆಗಿದೆ. ಬಹುತೇಕ ಎಲ್ಲಾ ದೇಶಗಳ ಆರ್ಥಿಕತೆಯೂ ಕುಸಿತ ಕಾಣುತ್ತಿದೆ. ಐಎಂಎಫ್ ಪ್ರಕಾರ, 2023ರಲ್ಲಿ ಅಮೆರಿಕ, ಜರ್ಮನಿ ಮೊದಲಾದ ಪ್ರಮುಖ ಆರ್ಥಿಕತೆಗಳ ವೇಗ ಶೇ. 2ನ್ನೂ ದಾಟುವುದಿಲ್ಲ. ಕುತೂಹಲವೆಂದರೆ, ಅಮೆರಿಕದಂಥ ಮುಂದುವರಿದ ದೇಶಗಳಿಗಿಂತ ಅಭಿವೃದ್ಧಿಶೀಲ ದೇಶಗಳ ಆರ್ಥಿಕತೆ ಉತ್ತಮ ರೀತಿಯಲ್ಲಿ ಮುಂದುವರಿಯುವ ಸಾಧ್ಯತೆ ತೋರಿದೆ. ಇಟಲಿ, ಜರ್ಮನಿಯಂಥ ದೇಶಗಳ ಆರ್ಥಿಕತೆ ಮೈನಸ್ ಮಟ್ಟಕ್ಕೆ ಇಳಿಯಬಹುದು. ಅಂದರೆ, ಆರ್ಥಿಕ ಬೆಳವಣಿಗೆ ಬದಲು ಆರ್ಥಿಕ ಹಿನ್ನಡೆ ಆಗಬಹುದು ಎಂಬುದನ್ನು ಐಎಂಎಫ್‌ನ ಅಂಕಿಅಂಶಗಳು ಹೇಳುತ್ತಿವೆ. ಯುದ್ಧದಲ್ಲಿ ಭಾಗಿಯಾಗಿರುವ ರಷ್ಯಾ ಕೂಡ ಮೈನಸ್ 2.3ರಷ್ಟು ಆರ್ಥಿಕ ಹಿನ್ನಡೆ ಹೊಂದಬಹುದು.
2023ರಲ್ಲಿ ಭಾರತದ ಆರ್ಥಿಕತೆ ಶೇ. 6.1ರ ವೇಗದಲ್ಲಿ ಬೆಳೆಯಬಹುದು. ಇದು ಬಹುತೇಕ ಎಲ್ಲಾ ಪ್ರಮುಖ ದೇಶಗಳಿಗಿಂತ ಉತ್ತಮ. ಜಾಗತಿಕವಾಗಿ ಮುಂದುವರಿದ ದೇಶಗಳ ಆರ್ಥಿಕತೆಯ ಸರಾಸರಿ ಬೆಳವಣಿಗೆ 2023ರಲ್ಲಿ ಶೇ. 1.1 ಇರಲಿದೆ. ಇದೇ ಅವಧಿಯಲ್ಲಿ ಭಾರತ, ಚೀನಾದಂಥ ಅಭಿವೃದ್ಧಿಶೀ ದೇಶಗಳ ಸರಾಸರಿ ಆರ್ಥಿಕತೆ ಬೆಳವಣಿಗೆ ಶೇ. 3.7ರಷ್ಟು ಇರಬಹುದು. ಅದರಲ್ಲೂ ಏಷ್ಯನ್ ಅಭಿವೃದ್ಧಿ ದೇಶಗಳು ಶೇ. 4.9ರಷ್ಟು ಆರ್ಥಿಕ ಅಭಿವೃದ್ಧಿ ಸಾಧಿಸಬಹುದು ಎಂಬುದು ಐಎಂಎಫ್ ಮಾಡಿರುವ ಹೊಸ ಅಂದಾಜಿನ ಅಂಕಿ ಅಂಶಗಳು ಹೇಳುತ್ತವೆ.
ಶೇ.6.1ರಲ್ಲಿ ಭಾರತದ ಆರ್ಥಿಕತೆ
ಐಎಂಎಫ್ ಅಕ್ಟೋಬರ್ 11ರಂದು ಪ್ರಕಟಿಸಿದ ವಿಶ್ವ ಆರ್ಥಿಕ ನೋಟದ ವರದಿಯಲ್ಲಿ ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳ ಆರ್ಥಿಕ ಬೆಳವಣಿಗೆಯ ಸಾಧ್ಯತೆಯನ್ನು ಬಿಂಬಿಸುವ ಪ್ರಯತ್ನ ಮಾಡಿದೆ. ಅದರ ಪ್ರಕಾರ ಪ್ರಸಕ್ತ 2022ರ ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ. 6.8ಕ್ಕೆ ಇಳಿಯಬಹುದು ಎಂದಿದೆ. ಆರ್‌ಬಿಐ ಸೇರಿದಂತೆ ಇನ್ನೂ ಹಲವು ಸಂಸ್ಥೆಗಳೂ ಕೂಡ ಭಾರತದ ಆರ್ಥಿಕ ಬೆಳವಣಿಗೆಯ ವೇಗ ನಿರೀಕ್ಷೆಗಿಂತ ಕಡಿಮೆ ಇರಬಹುದು ಎಂದು ಅಭಿಪ್ರಾಯಪಟ್ಟಿವೆ. 2023ರಲ್ಲಿ ಭಾರತದ ಬೆಳವಣಿಗೆಯ ವೇಗ ಶೇ. 6.1ಕ್ಕೆ ಇಳಿಯಬಹುದು ಎಂದೂ ಐಎಂಎಫ್ ಹೇಳಿದೆ.
IMF ಮಂಗಳವಾರ ತನ್ನ ವರ್ಲ್ಡ್ ಎಕನಾಮಿಕ್ ಔಟ್‌ಲುಕ್‌ನಲ್ಲಿ ಬಿಡುಗಡೆ ಮಾಡಿರುವ ವರದಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ ವೇಗದ ದರವನ್ನು ಶೇ.6.1ಕ್ಕೆ ಇಳಿಸಿದೆ. 2021 ರಲ್ಲಿ ಈ ದರ ಶೇ8.7ರಷ್ಟಿತ್ತು, ಆದರೆ 2022 ರಲ್ಲಿ ಶೇ6.8ರ ಬೆಳವಣಿಗೆ ನಿರೀಕ್ಷೆ ಮಾಡಿತ್ತು. ಆದರೆ ಇದೀಗ ಈ ಅಂದಾಜನ್ನು ಅಂದರೆ 2023 ರ ಪ್ರಕ್ಷೇಪಣ ಪ್ರಮಾಣವನ್ನು ಶೇ. 6.1 ಕ್ಕೆ ಇಳಿಕೆ ಮಾಡಿದೆ. ಜಾಗತಿಕ ಆರ್ಥಿಕತೆಯ ಮೂರನೇ ಒಂದು ಭಾಗದಷ್ಟು 2023 ರಲ್ಲಿ ಸಂಕುಚಿತಗೊಳ್ಳುತ್ತದೆ, ಆದರೆ ಮೂರು ದೊಡ್ಡ ಆರ್ಥಿಕತೆಗಳಾದ ಯುನೈಟೆಡ್ ಸ್ಟೇಟ್ಸ್ (ಅಮೆರಿಕ), ಯುರೋಪಿಯನ್ ಯೂನಿಯನ್ ಮತ್ತು ಚೀನಾ ದೇಶಗಳ ಆರ್ಥಿಕತೆಗಳು ಕುಸಿತ ಮುಂದುವರಿಸುತ್ತದೆ ಎಂದು ಅದು ಹೇಳಿದೆ.
ಕೋವಿಡ್‌ನಿಂದ ಶುರುವಾದ ಆರ್ಥಿಕ ದುಃಸ್ಥಿತಿಯ ಬೆಂಕಿಗೆ ರಷ್ಯಾ ಉಕ್ರೇನ್ ಯುದ್ಧ ಒಂದು ರೀತಿಯಲ್ಲಿ ತುಪ್ಪ ಸುರಿದಿದೆ. ಅಮೆರಿಕ ಸೇರಿದಂತೆ ಜಾಗತಿಕವಾಗಿ ಏರಿರುವ ಬ್ಯಾಂಕ್ ಬಡ್ಡಿ ದರಗಳೂ ಕೂಡ ಬೆಳವಣಿಗೆಯನ್ನು ಕುಂಠಿತಗೊಳಿಸಿವೆ. ಐಎಂಎಫ್ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, 2023ರಲ್ಲಿ ಹಲವು ದೇಶಗಳಿಗೆ ಆರ್ಥಿಕ ಹಿಂಜರಿತದ ಅನುಭವವಾಗಲಿದೆ ಎಂದು ಎಚ್ಚರಿಸಿದೆ. "ಕೋವಿಡ್‌ನಿಂದ ಉಂಟಾಗಿದ್ದ ಆರ್ಥಿಕ ಪೆಟ್ಟಿನ ನೋವು ಸ್ವಲ್ಪ ಶಮನವಾಗುತ್ತಿರುವಂತೆಯೇ ಈ ವರ್ಷದ ಆಘಾತಗಳು ಮತ್ತೆ ನೋವು ತಂದಿವೆ" ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಆರ್ಥಿಕ ಸಮಾಲೋಚಕ ಪಿಯೆರೆ ಓಲಿವಿಯೆರ್ ಗೌರಿಂಚಾಸ್ ಅಭಿಪ್ರಾಯಪಟ್ಟಿದ್ದಾರೆ.
Post a Comment