ಹೊರನಾಡು: ಮೂರು ವೀರಗಲ್ಲು, ಒಂದು ಮಹಾಸತಿ ಕಲ್ಲು ಪತ್ತೆ; ಇತಿಹಾಸದ ಮೇಲೆ ಹೊಸ ಬೆಳಕು

 ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಅನ್ನಪೂರ್ಣೇಶ್ವರಿ ಕ್ಷೇತ್ರ ಹೊರನಾಡು ಗ್ರಾಮದಲ್ಲಿ ಮೂರು ವೀರಗಲ್ಲು ಮತ್ತು ಒಂದು ಮಹಾಸತಿ ಕಲ್ಲು ಸಹಿತ ನಾಲ್ಕು ಐತಿಹಾಸಿಕ ಸ್ಮಾರಕಗಳು ಪತ್ತೆಯಾಗಿವೆ.

               ವೀರಗಲ್ಲು

By : Rekha.M

Online Desk

ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಅನ್ನಪೂರ್ಣೇಶ್ವರಿ ಕ್ಷೇತ್ರ ಹೊರನಾಡು ಗ್ರಾಮದಲ್ಲಿ ಮೂರು ವೀರಗಲ್ಲು ಮತ್ತು ಒಂದು ಮಹಾಸತಿ ಕಲ್ಲು ಸಹಿತ ನಾಲ್ಕು ಐತಿಹಾಸಿಕ ಸ್ಮಾರಕಗಳನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧಕ ಹೆಚ್.ಆರ್.ಪಾಂಡುರಂಗ ಸಂಶೋಧನೆ ಮಾಡಿದ್ದು, ಹೊರನಾಡು ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದ್ದಾರೆ.

ಹೊರನಾಡು ದೊಡ್ಡಮನೆ ರಾಜೇಂದ್ರ ಹೆಗ್ಗಡೆ ಅವರ ಮಲೆನಾಡು ಮಳಿಗೆಯಲ್ಲಿ ನಿಂತಿರುವ ಬಿಳಿಕಣಶಿಲೆಯ ವೀರಗಲ್ಲು ಐದು ಫಲಕಗಳನ್ನು ಹೊಂದಿದೆ. ಶಿಲ್ಪ ಲಕ್ಷಣದ ಆಧಾರದ ಮೇಲೆ ಇದು 13ನೇ ಶತಮಾನದ ಕಳಸ ಸಾಂತರಸರ ಕಾಲದಲ್ಲಿ ತುರುಕಾಳಗದಲ್ಲಿ ಮಡಿದ ಹೊರನಾಡಿನ ವೀರನೊಬ್ಬನ ಜೈನ ಸಂಪ್ರದಾಯದ ವಿಶಿಷ್ಟ ವೀರಗಲ್ಲು ಎಂದು ಊಹಿಸಲಾಗಿದೆ.

ಹದಿಮೂರನೇ ಶತಮಾನದ ಕಳಸ ಸಾಂತರರ ಕಾಲದಲ್ಲಿ ತುರುಕಾಳಗದಲ್ಲಿ ಮಡಿದ ಹೊರನಾಡಿನ ವೀರನೊಬ್ಬನ ಜೈನ ಸಂಪ್ರದಾಯದ ವಿಶಿಷ್ಟ ವೀರಗಲ್ಲು ಎಂದು ತಿಳಿಸಿದ್ದಾರೆ.ಹೆಚ್.ಡಿ. ಜ್ವಾಲನಯ್ಯ ಅವರ ಮನೆ ಮುಂದಿರುವ ಬಿಳಿ ಕಣಶಿಲೆಯ ಈ ಭಗ್ನ ವೀರಗಲ್ಲಿನಲ್ಲಿ ಅಶ್ವಯೋಧರು ಹಾಗೂ ಖಡ್ಗ ಯೋಧರ ಹೋರಾಟದ ಚಿತ್ರಣ, ವೀರನೊಬ್ಬ ಪಲ್ಲಕ್ಕಿಯಲ್ಲಿ ಕುಳಿತು ಯುದ್ದ ರಂಗಕ್ಕೆ ತೆರಳುತ್ತಿರುವ ಅಸ್ಪಷ್ಟ ಚಿತ್ರಣವಿದೆ. ಇದು  ಭೈರವರಸರ ಕಾಲದ ವೀರಗಲ್ಲಾಗಿದೆ.

ಹೊರನಾಡಿನ ಅತ್ತಿಗೇರಿಯ ನಾಗೇಂದ್ರ ಪುಟ್ಟಯ್ಯ ಅವರ ಕಾಫಿ ತೋಟದಲ್ಲಿ ಉತ್ತರಾಭಿಮುಖವಾಗಿ ನಿಂತಿರುವ  ಬಿಳಿ ಕಣಶಿಲೆಯ ವೀರಗಲ್ಲಿನಲ್ಲಿ ಯುದ್ಧದ ಚಿತ್ರಣ, ಕಾಳಗದಲ್ಲಿ ಮಡಿದ ವೀರನನ್ನು ಅಪ್ಸರೆಯರು ಸ್ವರ್ಗಕ್ಕೆ ಕರೆದೊಯ್ಯುತ್ತಿರುವ ಚಿತ್ರಣಗಳಿದ್ದು, ಇದೂ ಸಹ ಭೈರವರಸರ ಕಾಲದ ಹೊರನಾಡಿನ ವೀರನೊಬ್ಬನ ವೀರಮರಣದ ಸ್ಮಾರಕವಾಗಿದೆ.

ಹೊರನಾಡು ಗ್ರಾಮ ಪಂಚಾಯಿತಿ ಹಿಂಭಾಗದಲ್ಲಿ ಬಸರಿಮಕ್ಕಿಯ ದೇವರಾಜಯ್ಯ ಅವರ ಪಾಳು ಗದ್ದೆಯಲ್ಲಿ ಪೂರ್ವಾಭಿಮುಖವಾಗಿ ನಿಂತಿರುವ ಮತ್ತೊಂದು ಸ್ಮಾರಕದ ಬಲಭಾಗಕ್ಕೆ ಆಶೀರ್ವಾದ ಪೂರ್ವಕವಾಗಿ ಮೇಲೆತ್ತಿದ ತೆರೆದ ಹಸ್ತದ ಸ್ತ್ರೀಯೊಬ್ಬಳ ಬಲತೋಳು  ಹಾಗೂ ಮಧ್ಯದಲ್ಲಿ  ದಂಪತಿಗಳು ಕೈಮಗಿದು ಕುಳಿತಿರುವ ಚಿತ್ರಣ, ಸೂರ್ಯ ಚಂದ್ರರ ಚಿತ್ರಣವಿದೆ.

ಭೈರವರಸರ ಆಡಳಿತ ಕಾಲದಲ್ಲಿ ಕಳಸ ಸೀಮೆಯ ಹೊರನಾಡಿನ ಯೋಧನೊಬ್ಬ ಯುದ್ದದಲ್ಲಿ ಹೋರಾಡಿ ಮಡಿದ ನಿಮಿತ್ತ ಅವನ ಪತ್ನಿ ಚಿತೆಯೇರಿ ಆತ್ಮಾರ್ಪಣೆ ಮಾಡಿಕೊಂಡ ನಿಮಿತ್ತ  ಪತಿಪತ್ನಿಯರ ಪರಾಕ್ರಮ-ತ್ಯಾಗದ ಸ್ಮಾರಕವಾಗಿ ಈ ಒಕ್ಕೈ ಮಹಾಸತಿ ಕಲ್ಲು ಪ್ರತಿಷ್ಟಾಪಿಸಲ್ಪಟ್ಟಿದೆ ಎಂದು ಪಾಂಡುರಂಗ ಅವರು ಹೇಳುತ್ತಾರೆ.

Post a Comment

Previous Post Next Post