ಡಿಸೆಂಬರ್ 31ರೊಳಗೆ ಬಿಬಿಎಂಪಿ ಚುನಾವಣೆ ನಡೆಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶ ನೀಡಿದ್ದರೂ, ವಿಪಕ್ಷಗಳಿಗೆ ಚುನಾವಣೆ ನಡೆಯುವುದೇ ಎಂಬ ಅನುಮಾನ ಇನ್ನೂ ಕಾಡುತ್ತಿದೆ.
ಬಿಬಿಎಂಪಿ ಮತ್ತು ಕರ್ನಾಟಕ ಹೈಕೋರ್ಟ್
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಡಿಸೆಂಬರ್ 31ರೊಳಗೆ ನಡೆಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶ ನೀಡಿದ್ದರೂ, ವಿಪಕ್ಷಗಳಿಗೆ ಚುನಾವಣೆ ನಡೆಯುವುದೇ ಎಂಬ ಅನುಮಾನ ಇನ್ನೂ ಕಾಡುತ್ತಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ನ ಸದಸ್ಯರು ಸರ್ಕಾರ ಚುನಾವಣೆ ನಡೆಸುವುದೇ ಅನುಮಾನ ಎನ್ನುತ್ತಿದ್ದರೆ ಬಿಜೆಪಿ ಮಾತ್ರ ಚುನಾವಣೆಗೆ ಸಿದ್ಧ ಎಂದು ಹೇಳಿದೆ.
ಕಾಂಗ್ರೆಸ್ ನ ಸದಸ್ಯರಾದ ಎಂ ಶಿವರಾಜು ಹಾಗೂ ಜಿ ಪದ್ಮಾವತಿ ಹಾಗೂ ಭದ್ರೇಗೌಡ ಚುನಾವಣೆ ನಡೆಯುವುದು ಅನುಮಾನ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸರ್ಕಾರ ಈಗ ಒಬಿಸಿ ಮೀಸಲಾತಿಗೆ ಸಂಬಂಧಿಸಿದಂತೆ ದ್ವಿಸದಸ್ಯ ಪೀಠದ ಮೊರೆ ಹೋಗುವ ಸಾಧ್ಯತೆ ಇದ್ದು ಇದು ಮತ್ತಷ್ಟು ವಿಳಂಬಕ್ಕೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.
ಸರ್ಕಾರ ಚುನಾವಣೆಯನ್ನು ವಿಳಂಬ ಮಾಡುವುದಕ್ಕೆ ಇನ್ನಷ್ಟು ಆಯ್ಕೆಗಳ ಮೊರೆ ಹೋಗುವ ಸಾಧ್ಯತೆ ಇದೆ ಎನ್ನುತ್ತಾರೆ ಶಿವರಾಜು. ಕೆಲವು ಬಿಜೆಪಿ ಬೆಂಬಲಿಗರು ಮೀಸಲಾತಿ ಪ್ರಕ್ರಿಯೆಯನ್ನು ಕೋರ್ಟ್ ನಲ್ಲಿ ಪ್ರಶ್ನಿಸಬಹುದು, ಇಲ್ಲವೇ ದ್ವಿಸದಸ್ಯ ಪೀಠದ ಮೊರೆ ಹೋಗಬಹುದು. ಇನ್ನು ಮುಂದಿನ ವರ್ಷ ವಿಧಾನಸಭಾ ಚುನಾವಣೆಯೂ ಇರುವುದರಿಂದ ಚುನಾವಣೆ ಇನ್ನಷ್ಟು ವಿಳಂಬವಾಗಲಿದೆ ಎಂದು ಶಿವರಾಜ್ ಹೇಳಿದ್ದಾರೆ.
ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರುವ ಬಿಬಿಎಂಪಿ ಮಾಜಿ ಮೇಯರ್ ಪದ್ಮಾವತಿ, ಕಳಪೆ ಆಡಳಿತದಿಂದ ಬಿಜೆಪಿ ಚುನಾವಣೆಯಲ್ಲಿ ಸೋಲುವ ಆತಂಕ ಹೊಂದಿದೆ. ಹಗರಣಗಳು, ಹೆಚ್ಚುತ್ತಿರುವ ರಸ್ತೆ ಗುಂಡಿಗಳು, ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ಪ್ರದೇಶಗಳು ಬಿಜೆಪಿಯ ಘನತೆಯನ್ನು ಕುಗ್ಗಿಸಿವೆ. ಆದ್ದರಿಂದ ಅವರು ಉದ್ದೇಶಪೂರ್ವಕವಾಗಿ ಡೀಲಿಮಿಟೇಷನ್, ಮೀಸಲಾತಿಯನ್ನು ವಿರೋಧಿಸುತ್ತಿದ್ದು, ಇದನ್ನೇ ಚುನಾವಣೆ ಮುಂದೂಡುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಬಿಬಿಎಂಪಿ ಕೌನ್ಸಿಲ್ ಅವಧಿ ಮುಕ್ತಾಯಗೊಂಡು ಎರಡು ವರ್ಷಗಳೇ ಕಳೆದಿವೆ. ಸರ್ಕಾರ ಚುನಾವಣೆ ನಡೆಸಲು ಯಾವುದೇ ಕ್ರಮ ಕೈಗೊಂಡಿಲ್ಲ. 2008 ರಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಲೂ ಅವರು ಚುನಾವಣೆಯನ್ನು 2 ವರ್ಷಗಳ ಕಾಲ ವಿಳಂಬ ಮಾಡಿದ್ದರು, ಹೈಕೋರ್ಟ್ ಆದೇಶ ಸ್ವಲ್ಪ ಸಮಾಧಾನ ತಂದಿದೆ, ಹೈಕೋರ್ಟ್ ನ ಆದೇಶ ಆಶಾಕಿರಣವಾಗಿದೆ ಎಂದು ಜೆಡಿಎಸ್ ನ ನಾಯಕ, ಮಾಜಿ ಉಪಮೇಯರ್ ಭದ್ರೇಗೌಡ ಹೇಳಿದ್ದಾರೆ.
Post a Comment