ನಾಡಿನಾದ್ಯಂತ ವಿಜಯ ದಶಮಿ ಸಂಭ್ರಮ ಮನೆ ಮಾಡಿದೆ. ದುಷ್ಟ ಶಕ್ತಿ ಮೇಲೆ ಶಿಷ್ಟ ಶಕ್ತಿಯು ವಿಜಯ ಸಾರುವ ಸಾಂಕೇತಿಕವಾಗಿ ಹಬ್ಬ ಆಚರಿಸಲಾಗುತ್ತಿದ್ದು, ಮೈಸೂರಿನಲ್ಲಿ ಜಂಬೂ ಸವಾರಿಗೆ ಸಕಲ ಸಿದ್ಧತೆ ನಡೆದಿದೆ.
ಜಂಬೂ ಸವಾರಿ ಸಾಂದರ್ಭಿಕ ಚಿತ್ರ
ಮೈಸೂರು: ನಾಡಿನಾದ್ಯಂತ ವಿಜಯ ದಶಮಿ ಸಂಭ್ರಮ ಮನೆ ಮಾಡಿದೆ. ದುಷ್ಟ ಶಕ್ತಿ ಮೇಲೆ ಶಿಷ್ಟ ಶಕ್ತಿಯು ವಿಜಯ ಸಾರುವ ಸಾಂಕೇತಿಕವಾಗಿ ಹಬ್ಬ ಆಚರಿಸಲಾಗುತ್ತಿದ್ದು, ಮೈಸೂರಿನಲ್ಲಿ ಜಂಬೂ ಸವಾರಿಗೆ ಸಕಲ ಸಿದ್ಧತೆ ನಡೆದಿದೆ.
ಮಧ್ಯಾಹ್ನ 2.36ರಿಂದ 2.50ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಸಂಜೆ 05:07 ರಿಂದ 5.18ರ ವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿ ಮೆರವಣಿಗೆ ಸಿಎಂ ಚಾಲನೆ ನೀಡಲಿದ್ದಾರೆ.
ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಷ್ಟಾರ್ಚನೆ ಮಾಡಲಿದ್ದಾರೆ. ರಾಜ ವಂಶಸ್ಥ ಯದುವೀರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಸಾಥ್ ನೀಡಲಿದ್ದಾರೆ. ಸಂಜೆ ಹೊತ್ತಿಗೆ ಚಿನ್ನದ ಅಂಬಾರಿ ಅರಮನೆ ಅಂಗಳದಿಂದ ಬನ್ನಿಮಂಟಪದತ್ತ ಪಯಣಿಸಲಿದ್ದು, ವಿದ್ಯುತ್ ದೀಪಾಲಂಕಾರದಲ್ಲಿ ಚಿನ್ನದ ಅಂಬಾರಿ ಸಾಗಲಿದೆ.
ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂ ಸವಾರಿ ಮೆರವಣಿಗೆ ನಡೆಯಲಿದ್ದು, ಆಲ್ಬರ್ಟ್ ವಿಕ್ಟರ್ ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ರಾಜ್ಯದ ಕಲೆ, ಸಾಹಿತ್ಯ, ಇತಿಹಾಸ ಬಿಂಬಿಸುವ 48 ಸ್ತಬ್ಧಚಿತ್ರಗಳು, 50 ಕಲಾತಂಡಗಳ ಜಾನಪದ ಕಲಾ ಪ್ರದರ್ಶನದೊಂದಿಗೆ ಜಂಬೂ ಸವಾರಿ ಸಾಗಲಿದೆ. ಈ ಬಾರಿ ದಿವಂಗತ ಪುನೀತ್ ರಾಜ್ ಕುಮಾರ್ ಅವರ ಸ್ತಬ್ಧ ಚಿತ್ರವೂ ಮೆರವಣಿಗೆಯಲ್ಲಿ ಇರಲಿದೆ.
ಈ ಮಧ್ಯೆ, ಸಾಲು ಸಾಲು ರಜೆಗಳಿಂದಾಗಿ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಮೈಸೂರಿನತ್ತ ಧಾವಿಸುತ್ತಿದ್ದಾರೆ. ಇದರಿಂದಾಗಿ ನಗರದ ಬಹುತೇಕ ಹೋಟೆಲ್‌ಗಳು ಭರ್ತಿಯಾಗಿವೆ. ಪ್ರವಾಸಿಗರ ಜೊತೆಗೆ ಸ್ಥಳೀಯರು ದೀಪಾಲಂಕಾರ ವೀಕ್ಷಣೆ ಸೇರಿದಂತೆ ವಿವಿಧೆಡೆ ಭೇಟಿ ನೀಡುತ್ತಿರುವುದರಿಂದ ಅರಮನೆ ಸುತ್ತಮುತ್ತಲಿನ ರಸ್ತೆ ಮತ್ತಿತರ ಕಡೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
Post a Comment