ರಾಜ್ಯದಲ್ಲಿ ಜಾರಿಗೆ ಬಂದಿರುವ ಮತಾಂತರ ನಿಷೇಧ ಕಾಯಿದೆಯಡಿ ಮೊದಲ ಪ್ರಕರಣ ದಾಖಲಿಸಲಾಗಿದ್ದು, ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಜಾರಿಗೆ ಬಂದಿರುವ ಮತಾಂತರ ನಿಷೇಧ ಕಾಯಿದೆಯಡಿ ಮೊದಲ ಪ್ರಕರಣ ದಾಖಲಿಸಲಾಗಿದ್ದು, ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸೈಯ್ಯದ್ ಮೊಯಿನ್ ಎಂಬ ಆರೋಪಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಅನ್ಯ ಧರ್ಮಕ್ಕೆ ಸೇರಿದ 18 ವರ್ಷದ ಯುವತಿಯನ್ನು ಬಲವಂತವಾಗಿ ಮತಾಂತರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಯುವತಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ.
ಉತ್ತರಪ್ರದೇಶದವರಾಗಿರುವ ಯುವತಿಯ ಪೋಷಕರು ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಯಶವಂತಪುರ ಠಾಣೆ ವ್ಯಾಪ್ತಿಯ ಬಿ.ಕೆ. ನಗರದ ಸೈಯದ್ ಮೋಯಿನ್, ತನ್ನ ಮನೆ ಬಳಿಯ ನಿವಾಸಿಯಾದ 18 ವರ್ಷದ ಹಿಂದೂ ಯುವತಿಯನ್ನು ಮತಾಂತರ ಮಾಡಿದ್ದ. ಯುವತಿ ಪೋಷಕರು ನೀಡಿದ್ದ ದೂರಿನಡಿ, ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆಯಡಿ (ಮತಾಂತರ ನಿಷೇಧ) ಪ್ರಕರಣ ದಾಖಲಿಸಿಕೊಂಡು ಆರೋಪಿ ಯನ್ನು ಬಂಧಿಸಲಾಗಿದೆ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ ತಿಳಿಸಿದರು.
‘ಯುವತಿಯ ತಂದೆ–ತಾಯಿ, ಉತ್ತರ ಪ್ರದೇಶದವರು. ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ಬಿ.ಕೆ.ನಗರದಲ್ಲಿ ನೆಲೆಸಿದ್ದರು. ದಂಪತಿಗೆ ಯುವತಿ ಸೇರಿ ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಎಸ್ಸೆಸ್ಸೆಲ್ಸಿವರೆಗೂ ಓದಿದ್ದ ಯುವತಿ, ಅರ್ಧಕ್ಕೆ ಶಾಲೆ ಬಿಟ್ಟು ಮನೆಯಲ್ಲಿದ್ದರು. ಮನೆಗೆ ಅಗತ್ಯವಿದ್ದ ವಸ್ತುಗಳನ್ನು ತರಲು ಅಂಗಡಿಗೆ ಆಗಾಗ ಹೋಗಿ ಬರುತ್ತಿದ್ದರು. ಯುವತಿಯನ್ನು ಹಿಂಬಾಲಿಸಿ ಪರಿಚಯ ಮಾಡಿಕೊಂಡಿದ್ದ ಆರೋಪಿ ಸೈಯದ್ ಮೋಯಿನ್, ಹೆಚ್ಚು ಮಾತನಾಡಲಾರಂಭಿಸಿದ್ದ. ಆರೋಪಿ ಹಾಗೂ ಯುವತಿ, ಮೊಬೈಲ್ ನಲ್ಲಿ ನಿತ್ಯವೂ ಮಾತನಾಡುತ್ತಿದ್ದರು. ಆರೋಪಿಯೇ ಪ್ರೀತಿಯ ನಿವೇದನೆ ಮಾಡಿದ್ದ. ಆತನ ಆಮಿಷಕ್ಕೆ ಒಳಗಾಗಿ, ಯುವತಿ ಸಹ ಪ್ರೀತಿಸಲಾರಂಭಿಸಿದ್ದರು’ ಎಂದು ಹೇಳಿವೆ. ಯುವತಿ ಪ್ರೀತಿಸುತ್ತಿರುವ ಸಂಗತಿ 6 ತಿಂಗಳ ಹಿಂದೆಯಷ್ಟೇ ಪೋಷಕರಿಗೆ ಗೊತ್ತಾಗಿತ್ತು. ಸಿಟ್ಟಾಗಿದ್ದ ಪೋಷಕರು, ಯುವತಿಗೆ ಬುದ್ಧಿವಾದ ಹೇಳಿದ್ದರು. ಆದರೂ ಯುವತಿ, ಆರೋಪಿಯನ್ನು ಹಲವು ಬಾರಿ ಭೇಟಿಯಾಗಿದ್ದರು.
ಆರೋಪಿ ಮಾತಿಗೆ ಒಪ್ಪಿದ್ದ ಯುವತಿ, ಆ. 5ರಂದು ಸಂಜೆ ಅಂಗಡಿಗೆ ಹೋಗಿ ಬರುವುದಾಗಿ ಪೋಷಕರಿಗೆ ಹೇಳಿ ಹೋಗಿದ್ದರು. ರಾತ್ರಿಯಾದರೂ ಯುವತಿ ಮನೆಗೆ ವಾಪಸು ಬಂದಿರಲಿಲ್ಲ. ಗಾಬರಿಗೊಂಡ ಪೋಷಕರು, ಹಲವೆಡೆ ಹುಡುಕಾಡಿದ್ದರು. ಸುಳಿವು ಸಿಗದಿದ್ದರಿಂದ, ಮಗಳು ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು. ಆರೋಪಿ ಸೈಯದ್ ಮೋಯಿನ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು’ ಎಂದು ತಿಳಿಸಿವೆ. ಅಕ್ಟೋಬರ್ 8 ರಂದು ಹಿಂದಿರುಗಿದ ಯುವತಿ ತಾನು ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಪೋಷಕರಿಗೆ ತಿಳಿಸಿದ್ದಾಳೆ. ಆತನನ್ನು ಬಿಟ್ಟು ಬಿಡುವಂತೆ ಪೋಷಕರು ಮನವೊಲಿಸಿದ್ದಾರೆ, ಆದರೆ ಆ ಪ್ರಯತ್ನ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಯುವತಿಯ ತಾಯಿ ಕೇಸ್ ದಾಖಲಿಸಿದ್ದಾರೆ.
ಆಂಧ್ರಪ್ರದೇಶದ ಪೆನುಕೊಂಡದ ದರ್ಗಾದಲ್ಲಿ ಮತಾಂತರಗೊಂಡ ನಂತರ ಮುಯಿನ್ ಆಕೆಯನ್ನು ಮದುವೆಯಾಗಿದ್ದ ಎನ್ನಲಾಗಿದೆ. ತನಗೆ ಬಲವಂತವಾಗಿ ಮತಾಂತರ ಮಾಡಿಲ್ಲ, ತನ್ನ ಇಚ್ಛೆಯಿಂದ ಮಾಡಿದ್ದೇನೆ ಎಂದು ಬಾಲಕಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.
ರಾಜ್ಯದಲ್ಲಿ ಜಾರಿಗೆ ಬಂದಿರುವ ಮತಾಂತರ ನಿಷೇಧ ಕಾಯಿದೆಯ ಸೆಕ್ಷನ್ 5 ರ ಪ್ರಕಾರ, ಬಲವಂತದ ಮತಾಂತರಕ್ಕಾಗಿ ಆರೋಪಿಗೆ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆಯೊಂದಿಗೆ ಮತ್ತು 25,000 ರೂ ದಂಡ ವಿಧಿಸಲಾಗುತ್ತದೆ.
ಮತಾಂತರ ನಿಯಮಗಳೇನು?
ಧರ್ಮವನ್ನು ಬದಲಾಯಿಸಲು ಬಯಸುವ ಯಾವುದೇ ವ್ಯಕ್ತಿಯು 30 ದಿನಗಳ ಮುಂಚಿತವಾಗಿ ಜಿಲ್ಲಾಧಿಕಾರಿಗಳಿಗೆ ನಮೂನೆ I ರಲ್ಲಿ ಘೋಷಣೆಯನ್ನು ನೀಡಬೇಕು. ಪರಿವರ್ತನೆ ಮಾಡುವ ಜನರು ಕನಿಷ್ಠ 30 ದಿನಗಳ ಮುಂಚಿತವಾಗಿ ಫಾರ್ಮ್ II ರಲ್ಲಿ ಮನವಿ ಸಲ್ಲಿಸಬೇಕು. 30 ದಿನಗಳೊಳಗೆ ಆಕ್ಷೇಪಣೆಗಳು ಬಂದಲ್ಲಿ ಕರೆದು ವಿಚಾರಣೆ ನಡೆಸಲಾಗುವುದು. ಧರ್ಮ ಪರಿವರ್ತನೆಯ ಉದ್ದೇಶ ಮತ್ತು ಕಾರಣವನ್ನು ವಿಚಾರಣೆಯಲ್ಲಿ ವಿವರಿಸಬೇಕಾಗಿದೆ.
Post a Comment