ಹುಬ್ಬಳ್ಳಿಯಲ್ಲಿ ಐಟಿ-ಬಿಟಿ ವಿಸ್ತರಣೆಗೆ ಸರ್ಕಾರ ಬದ್ಧ: ಸಚಿವ ಡಾ. ಅಶ್ವತ್ಥನಾರಾಯಣ

 ಹುಬ್ಬಳ್ಳಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಐಟಿ, ಎಲೆಕ್ಟ್ರಾನಿಕ್ಸ್, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ  ಹೇಳಿದ್ದಾರೆ.

          ಅಶ್ವತ್ಥ ನಾರಾಯಣ

By : Rekha.M
Online Desk

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಐಟಿ, ಎಲೆಕ್ಟ್ರಾನಿಕ್ಸ್, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ  ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೇಂದ್ರ ಆರಂಭಿಸಲು ಸ್ಥಳೀಯವಾಗಿ ಎಲ್ಲಾ ಸೌಲಭ್ಯ ಕಲ್ಪಿಸಲಾಗುವುದು, ನಾಸ್ಕಾಮ್ ಅಥವಾ ಬೇರೆ ಖಾಸಗಿ ಕಂಪನಿಗಳಿಗಾಗಿ ಸರ್ಕಾರ ಹುಡುಕಾಟ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ- ಧಾರವಾಡ ಮತ್ತು ಬೆಳಗಾವಿಗಳನ್ನು ಒಳಗೊಂಡ ಕ್ಲಸ್ಟರ್‌ನಲ್ಲಿ 500 ಎಕರೆ ಪ್ರದೇಶದಲ್ಲಿ ಭಾರತದ ಪ್ರಪ್ರಥಮ ವಿದ್ಯುತ್ ವಾಹನಗಳ ಕ್ಲಸ್ಟರ್ ಮತ್ತು ನವೋದ್ಯಮಗಳ ಹಬ್‌ ಅಭಿವೃದ್ಧಿಯ ಜತೆಗೆ 20 ಸಾವಿರ ಜನರು ಕೆಲಸ ಮಾಡುವಂತಹ ಟೆಕ್‌ಪಾರ್ಕ್ ಸ್ಥಾಪನೆಗೂ ಅಗತ್ಯ ಹೆಜ್ಜೆಗಳನ್ನು ಇಡಲಾಗುವುದು. ಇಲ್ಲಿ ಉದ್ಯಮಗಳು ನೆಲೆಯೂರುವಂತೆ ಮಾಡಲು ಹುಬ್ಬಳ್ಳಿ ಕ್ಲಸ್ಟರ್ ಸೀಡ್‌ ಫಂಡ್‌ಗೆ 25 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ಭರವಸೆ ನೀಡಿದರು.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನ ಮೂಲಕ ಕಳೆದ 10 ತಿಂಗಳಲ್ಲಿ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಕ್ಲಸ್ಟರ್‍‌ನಲ್ಲಿಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡೇಟಾ ಎಂಜಿನಿಯರಿಂಗ್, ಅಗ್ರಿಟೆಕ್ ಮತ್ತು ಫುಡ್‌ಟೆಕ್‌ ವಲಯಗಳಿಗೆ ಸಂಬಂಧಿಸಿದ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜತೆಗೆ ಇಎಸ್‌ಡಿಎಂ ವಲಯದ ಉತ್ಪನ್ನಗಳ ವಿನ್ಯಾಸ ಮತ್ತು ಮೂಲಮಾದರಿಗಳ ಉತ್ಪಾದನೆಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಈ ಕ್ಲಸ್ಟರ್‍‌ನಲ್ಲಿರುವ ಉದ್ದಿಮೆಗಳಿಗೆ ನೆರವು ನೀಡಲು 'ಹುಬ್ಬಳ್ಳಿ ಕ್ಲಸ್ಟರ್ ವೆಂಚರ್ ಫಂಡ್' ಆರಂಭಿಸಲಾಗಿದೆ ಎಂದು ವಿವರಿಸಿದರು.

ಧಾರವಾಡದ ಐಐಐಟಿ, ಐಐಟಿ, ಬೆಳಗಾವಿಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕ ಸ್ಟಾರ್ಟ್‌ ಅಪ್‌ ಕೇಂದ್ರಗಳನ್ನು ಆರಂಭಿಸಲಾಗುವುದು," ಎಂದು ಸ್ಪಷ್ಟಪಡಿಸಿದರು. ರಾಜ್ಯದ ಸ್ಟಾರ್ಟ್‌ಅಪ್‌ ಕಂಪನಿಗಳಲ್ಲಿ ದೊಡ್ಡ ಉದ್ಯಮಿಗಳು ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಇದರಿಂದ 4 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. 10 ಸ್ಟಾರ್ಟ್‌ಅಪ್‌ ಕಂಪನಿಗಳ ಅಭಿವೃದ್ಧಿಗೆ ಕ್ಲಸ್ಟರ್‌ ಫಂಡಿಂಗ್‌ ಯೋಜನೆಯಡಿ 100 ಮಿಲಿಯನ್‌ ಡಾಲರ್‌ ಬೇಡಿಕೆ ನಿರೀಕ್ಷೆ ಹೊಂದಲಾಗಿದೆ," ಎಂದರು.

ಬೆಳಗಾವಿಯಲ್ಲಿ 150 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ಲೋಬಲ್ ಎಮರ್ಜಿಂಗ್ ಟೆಕ್ನಾಲಜಿ ಸೆಂಟರ್ ಸ್ಥಾಪಿಸಲಾಗುವುದು ಎಂದರು. ಇನ್‌ಕ್ಯುಬೇಷನ್ ಸೆಂಟರ್‌ಗಳಲ್ಲಿ ಉತ್ಪನ್ನಗಳು ಮತ್ತು ಸೇವೆಗಳನ್ನು ರಚಿಸುವ ಹಂತಕ್ಕೆ ತಲುಪಿರುವ ಸ್ಟಾರ್ಟ್‌ಅಪ್‌ಗಳನ್ನು ವೇಗಗೊಳಿಸಲು ಹುಬ್ಬಳ್ಳಿ ಕ್ಲಸ್ಟರ್ ಸೀಡ್ ಫಂಡ್‌ಗೆ 25 ಕೋಟಿ ರೂ ಅನುದಾನ ನೀಡಲಾಗುವುದು ಎಂದು ತಿಳಿಸಿದರು.




    Post a Comment

    Previous Post Next Post