ರಾಜ್ಯದಲ್ಲಿ ಅಕ್ಟೋಬರ್ ತಿಂಗಳಲ್ಲೇ ಮಳೆಗೆ 13 ಜನರ ಸಾವು, ಪರಿಹಾರ ಕಲ್ಪಿಸಲು ಸಿಎಂ ಬೊಮ್ಮಾಯಿ ನಿರ್ದೇಶನ

 ಈ ತಿಂಗಳ ಆರಂಭದಿಂದಲೂ ರಾಜ್ಯದ ವಿವಿಧೆಡೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ 13 ಜನರು ಸಾವನ್ನಪ್ಪಿದ್ದು, ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ ಸಂಭವಿಸಿದ್ದು, ಮಳೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

                      ಧಾರವಾಡದಲ್ಲಿ ಮಳೆಯ ಪರಿಸ್ಥಿತಿ

By : Rekha.M
Online Desk

ಹೊಸಪೇಟೆ: ಈ ತಿಂಗಳ ಆರಂಭದಿಂದಲೂ ರಾಜ್ಯದ ವಿವಿಧೆಡೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ 13 ಜನರು ಸಾವನ್ನಪ್ಪಿದ್ದು, ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ ಸಂಭವಿಸಿದ್ದು, ಮಳೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಪರಿಹಾರ ವಿತರಣೆಯಲ್ಲಿ ಯಾವುದೇ ಲೋಪವಾಗಬಾರದು ಎಂದು ಅವರು ಸೂಚಿಸಿದ್ದಾರೆ.

ಅಕ್ಟೋಬರ್ 1 ರಿಂದ ಮಳೆಯಿಂದಾಗಿ 28 ಜಾನುವಾರುಗಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, 3,309 ಮನೆಗಳು ಹಾನಿಯಾಗಿವೆ. ಸುಮಾರು 6,279 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಐದು ಕಾಳಜಿ ಕೇಂದ್ರಗಳನ್ನು ಸರ್ಕಾರ ತೆರೆದಿದ್ದು, ಅಲ್ಲಿ 1,330 ಜನರು ವಾಸ್ತವ್ಯ ಹೂಡಿದ್ದಾರೆ.

ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿ, ಪರಿಸ್ಥಿತಿ ಪರಿಶೀಲನೆ ನಡೆಸಿದರು. ಕೆಲವೆಡೆಗಳಲ್ಲಿ ದಾಖಲೆ ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು, ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ವಾಸ್ತವ ಸ್ಥಿತಿ ಆಧರಿಸಿದ ಪರಿಹಾರಕ್ಕೆ ವರದಿ ಸಲ್ಲಿಸಬೇಕು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಅಧಿಕಾರಿಗಳಿಗೆ ಹೇಳಿದರು. 

ಮಳೆ ಹಾನಿಗೆ ಎನ್ ಡಿಆರ್ ಎಫ್ ಮಾರ್ಗಸೂಚಿ ಜೊತೆಗೆ ಹೆಚ್ಚುವರಿ ಪರಿಹಾರ ಒದಗಿಸಲು ರಾಜ್ಯ ವಿಪತ್ತು ನಿರ್ವಹಣಾ ಪಡೆ ಸುತ್ತೋಲೆ ಹೊರಡಿಸಬೇಕು, ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಬೇಕು, ಮಳೆಯಿಂದ ಹಾನಿ ಹಾಗೂ ಪರಿಹಾರ ವಿತರಣೆ ದಾಖಲಿಸುವಂತೆ ತಹಸೀಲ್ದಾರ್ ಗೆ ಸೂಚಿಸಬೇಕು ಎಂದರು.

ರಾಜ್ಯದಲ್ಲಿ ವಿವಿಧೆಡೆ ಸುರಿದ ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು, ಮನೆ ಹಾಗೂ ಬೆಳೆ ಹಾನಿಗೆ ಪರಿಹಾರ ವಿತರಿಸಲು ಅನುದಾನದ ಕೊರತೆ ಇಲ್ಲ ಎಂದು ಅವರು ತಿಳಿಸಿದರು. ಕೂಡಲೇ ಜಂಟಿ ಸರ್ವೇ ನಡೆಸಿದ ನಂತರ ಈ ವಾರದೊಳಗೆ ಮಳೆ ಸಂಬಂಧಿತ ಹಾನಿಗೆ ಪರಿಹಾರವನ್ನು ಒದಗಿಸಬೇಕು. ಕೂಡಲೇ ಪರಿಹಾರ ಕಾರ್ಯ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಒಟ್ಟು ರೂ. 635. 13 ಕೋಟಿ ಹಣವಿರುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ.


Post a Comment

Previous Post Next Post