ನಿರ್ಲಕ್ಷ್ಯದಿಂದ ಚಾಲಕ ಕಾರಿನ ಬಾಗಿಲು ತೆರೆದಿದ್ದರಿಂದ ಹಿಂಬದಿಯಲ್ಲಿ ಬರುತ್ತಿದ್ದ ಬೈಕ್ ಸವಾರಿಗೆ ತಗುಲಿ ಎದುರಿನಿಂದ ಬರುತ್ತಿದ್ದ ಟ್ರಕ್‌ನ ಹಿಂಬದಿ ಚಕ್ರಕ್ಕೆ ಸಿಲುಕಿರುವ ಭಯಾನಕ ವಿಡಿಯೊವನ್ನು ಪೊಲೀಸ್ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಸೆರೆಯಾಗಿದ್ದ ಅಪಘಾತದ ದೃಶ್ಯಸಣ್ಣ ರಸ್ತೆಯ ಬದಿಯಲ್ಲಿ ಕಾರು ನಿಲ್ಲಿಸಿ ಡೋರ್ ತೆಗೆಯುವಾಗ ತುಂಬಾ ಎಚ್ಚರ ವಹಿಸುವ ಅಗತ್ಯವಿದೆ. ಕಾರು ಚಾಲಕರ ಅಜಾಗರೂಕತೆಯ ವರ್ತನೆಯು ಅಲ್ಲಿ ಹಾದುಹೋಗುವ ಬೈಕ್ ಸವಾರರ ಪ್ರಾಣಕ್ಕೆ ಸಂಚಕಾರ ತಂದೊಡ್ಡಬಹುದು. ಹೀಗಾಗಿ, ನಿಮ್ಮ ಕಾರಿನ ಬಾಗಿಲು ತೆರೆಯುವ ಮುನ್ನ ಸನ್ನೆ ಮಾಡಿ ಅಥವಾ ವಾಹನ ಯಾವುದು ಬರುತ್ತಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಿ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಭೀಕರ ಅಪಘಾತದ ದೃಶ್ಯ ಸೆರೆಯಾಗಿದ್ದು, ಬೈಕ್ ಸವಾರರೊಬ್ಬರು ರಸ್ತೆಯ ಬದಿಯಲ್ಲಿ ಬರುತ್ತಿರುತ್ತಾರೆ. ಈ ವೇಳೆ ಅಲ್ಲೇ ನಿಂತಿದ್ದ ಕಾರಿನ ಬಾಗಿಲು ತೆರೆಯಲಾಗುತ್ತದೆ. ಅಜಾಗರೂಕತೆಯಿಂದ ಕಾರಿನ ಬಾಗಿಲು ತೆರೆದಿದ್ದರಿಂದ ಹಿಂಬದಿಯಲ್ಲಿ ಬರುತ್ತಿದ್ದ ಬೈಕ್‌ಗೆ ತಗುಲಿ ನಡು ರಸ್ತೆಗೆ ಬೈಕ್ ಮತ್ತು ಸವಾರರು ಬೀಳುತ್ತಾರೆ.
ಕಾರು ಚಾಲಕನ ನಿರ್ಲಕ್ಷ್ಯದ ಪರಿಣಾಮವಾಗಿ ಮೋಟಾರ್ ಸೈಕಲ್ ಎದುರಿಗೆ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿಯಾಗಿ ಹಿಂಬದಿ ಚಕ್ರದ ಅಡಿಯಲ್ಲಿ ಸಿಲುಕುತ್ತಾರೆ. ನಂತರ, ಕಾರಿನ ಚಾಲಕ ಮತ್ತು ಹಲವಾರು ಜನರು ಬೈಕ್ ಸವಾರನ ಸಹಾಯಕ್ಕೆ ಧಾವಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಈ ವಿಡಿಯೋವನ್ನು ಬೆಂಗಳೂರು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಕಲಾ ಕೃಷ್ಣಸ್ವಾಮಿ ಹಂಚಿಕೊಂಡಿದ್ದಾರೆ.
'ನೀವು ನಿಮ್ಮ ವಾಹನದ ಬಾಗಿಲು ತೆರೆಯುವಾಗ ದಯವಿಟ್ಟು ಎಚ್ಚರವಹಿಸಿ ಮತ್ತು ಮಾರಣಾಂತಿಕ ಅವಘಡಗಳನ್ನು ತಪ್ಪಿಸಿ' ಎಂದು ಡಿಸಿಪಿ ಬರೆದಿದ್ದಾರೆ.
ವಿಶ್ವದ ವಾಹನ ಪ್ರಮಾಣದಲ್ಲಿ ಶೇ 1ರಷ್ಟನ್ನು ಮಾತ್ರ ಹೊಂದಿರುವ ಭಾರತದಲ್ಲಿ ರಸ್ತೆ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆ ಜಾಗತಿಕವಾಗಿ ಶೇ 11ರಷ್ಟಿದೆ ಎಂದು ವಿಶ್ವಬ್ಯಾಂಕ್‌ನ ವರದಿಯೊಂದು ಹೇಳಿದೆ.
ದೇಶದಲ್ಲಿ ವರ್ಷಕ್ಕೆ ಸುಮಾರು 4.5 ಲಕ್ಷ ಅಪಘಾತಗಳು ಸಂಭವಿಸುತ್ತಿದ್ದು, 1.5 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ. ಇಲ್ಲಿ ಪ್ರತಿ ಗಂಟೆಗೆ 53 ರಸ್ತೆ ಅಪಘಾತಗಳು ಆಗುತ್ತಿವೆ. ಈ ಕಾರಣಕ್ಕೆ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರು ಸಾಯುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಕಳೆದ ದಶಕದಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳಿಂದಾಗಿ 15 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದರೆ, 50 ಲಕ್ಷ ಜನರು ಗಾಯಗೊಂಡಿದ್ದಾರೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿನ ರಸ್ತೆ ಸುರಕ್ಷತೆ ಅವಕಾಶಗಳು ಮತ್ತು ಸವಾಲುಗಳ (2019) ಕುರಿತ ವಿಶ್ವಬ್ಯಾಂಕ್‌ನ ವರದಿಯಲ್ಲಿ ಈ ಅಂಕಿ ಅಂಶಗಳನ್ನು ನೀಡಲಾಗಿದೆ.
Post a Comment