ಐಸಿಸ್ ಉಗ್ರ ಸಂಘಟನೆ ಜೊತೆ ನಂಟು: ರಾಜ್ಯದಲ್ಲಿ ಶಂಕಿತ ಉಗ್ರರ ಬಂಧನ

 ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದಡಿ ಶಿವಮೊಗ್ಗ ಪೊಲೀಸರ ವಿಶೇಷ ತನಿಖಾ ತಂಡವು ಇಬ್ಬರನ್ನು ಬಂಧಿಸಿದ್ದು ಮತ್ತೊಬ್ಬನಿಗಾಗಿ ಶೋಧ ನಡೆಸಿದೆ.

By : Rekha.M
Online Desk

ಶಿವಮೊಗ್ಗ: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದಡಿ ಶಿವಮೊಗ್ಗ ಪೊಲೀಸರ ವಿಶೇಷ ತನಿಖಾ ತಂಡವು ಇಬ್ಬರನ್ನು ಬಂಧಿಸಿದ್ದು ಮತ್ತೊಬ್ಬನಿಗಾಗಿ ಶೋಧ ನಡೆಸಿದೆ.

ಶಂಕಿತ ಉಗ್ರರು ಸ್ಫೋಟಕಗಳನ್ನು ಹೊಂದಿದ್ದು ರಾಜ್ಯಾದ್ಯಂತ ವಿದ್ವಂಸಕ ಕೃತ್ಯ ನಡೆಸಲು ಯೋಜಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. 

ಶಿವಮೊಗ್ಗದ ಸಿದ್ದೇಶ್ವರನಗರದ ಸೈಯದ್ ಯಾಸೀನ್, ತೀರ್ಥಹಳ್ಳಿಯ ಸೊಪ್ಪುಗಡ್ಡೆ ನಿವಾಸಿ ಶಾರೀಕ್ ಹಾಗೂ ಮಂಗಳೂರಿನ ಮಾಜ್ ಮುನೀರ್ ವಿರುದ್ಧ ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಸ್ವಂತವಾಗಿ ಪ್ರಕರಣ ದಾಖಲಿಸಿದ್ದಾರೆ.

ಕಿಂಗ್‌ಪಿನ್ ಯಾಸಿನ್‌ನನ್ನು ಬಂಧಿಸಲಾಗಿದ್ದು ನಿಕಟವಾಗಿ ವಿಚಾರಣೆ ನಡೆಸಲಾಗುತ್ತಿದೆ. ಯಾಸಿನ್ ಎಲೆಕ್ಟ್ರಿಕಲ್ ಇಂಜಿನಿಯರ್ ಎಂದು ಮೂಲಗಳು ತಿಳಿಸಿವೆ.

ಕಳೆದ ಆಗಸ್ಟ್ 15ರಂದು ನಡೆದ ಪ್ರೇಮಸಿಂಗ್ ಚಾಕು ಇರಿತ ಪ್ರಕರಣದ ಹಿನ್ನೆಲೆಯಲ್ಲಿ ಭದ್ರಾವತಿ ಡಿವೈಎಸ್ಪಿ ಜಿತೇಂದ್ರ ಅವರನ್ನ ತನಿಖಾ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಡಿವೈಎಸ್ಪಿ ಜಿತೇಂದ್ರ ಅವರು ತಮ್ಮ ತನಿಖೆಯ ವೇಳೆ ಆರೋಪಿ ಜಬೀವುಲ್ಲಾ ಮೊಬೈಲ್ ಪರಿಶೀಲನೆ ನಡೆಸಿದಾಗ ಉಗ್ರ ಸಂಘಟನೆಗಳ ಜತೆ ನಿರಂತರ ಸಂಪರ್ಕ ಹೊಂದಿರುವ ಮಾಹಿತಿ ಹೊರಬಿದ್ದಿದೆ. ಜಬೀವುಲ್ಲಾ ಮೇಲೆ ಮೂಲಭೂತವಾದಿಗಳು ಪ್ರಭಾವಿ ಬೀರಿದ್ದರು ಎನ್ನಲಾಗಿದೆ.

ಶಂಕಿತರ ಬಂಧನ ಕುರಿತಂತೆ ಪ್ರತಿಕ್ರಿಯಿಸಿರುವ ಶಿವಮೊಗ್ಗದ ಎಸ್ ಪಿ ಬಿಂ ಲಕ್ಷ್ಮೀ ಪ್ರಸಾದ್ ಅವರು, ಐಸಿಸ್‌ ನಂಟು ಆರೋಪದಲ್ಲಿ ಇಬ್ಬರ ಬಂಧನವಾಗಿದೆ. 7 ದಿನಗಳ ಕಾಲ ಇಬ್ಬರನ್ನೂ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ವಿಚಾರಣೆ ನಡೆಸಲಾಗುತ್ತದೆ. ತಲೆಮರೆಸಿಕೊಂಡಿರುವ ಮತ್ತೊಬ್ಬನಿಗಾಗಿ ಶೋಧ ನಡೆದಿದೆ ಎಂದು ಸ್ಪಷ್ಟಪಡಿಸಿದರು.

ಮೂವರು ಐಎಸ್ ಜೊತೆ ಸಂಪರ್ಕ ಹೊಂದಿದ್ದರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಧಿತರ ಚಟುವಟಿಕೆಗಳ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ. ಅವರು ಶಿವಮೊಗ್ಗ ಮತ್ತು ತೀರ್ಥಹಳ್ಳಿಯಿಂದ ಮಂಗಳೂರಿಗೆ ಸಂಪರ್ಕ ಹೊಂದಿದ್ದಾರೆ. ಶಿವಮೊಗ್ಗ ಜಿಲ್ಲೆಯವರಾದ ಜ್ಞಾನೇಂದ್ರ ಅವರು ಬಂಧಿತರಲ್ಲಿ ಒಬ್ಬರಿಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕವಿದೆ ಎಂದು ಹೇಳಿದ್ದಾರೆ.










Post a Comment

Previous Post Next Post