ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರು 600ರೂ ಬಾಕಿ ಹಣ ಕೇಳಿದ್ದಕ್ಕೇ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ರಾಮನಗರ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರು 600ರೂ ಬಾಕಿ ಹಣ ಕೇಳಿದ್ದಕ್ಕೇ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರದ ಅಚ್ಚಲು ಕಾಲೋನಿಯಲ್ಲಿ ಕೆಂಪಮ್ಮ ಪೆಟ್ಟಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಕೆಂಪಮ್ಮ (45) ಮಹಿಳೆ ಅಂಗಡಿಯಲ್ಲೇ ಅಕ್ರಮವಾಗಿ ಬಿಯರ್ ಗಳನ್ನು ಮಾರಾಟ ಮಾಡುತ್ತಿದ್ದರು. ಶೀಘ್ರ ಹಣ ಗಳಿಸುವ ಉದ್ದೇಶದಿಂದ ಆಕೆ ಈ ಕೆಲಸ ಮಾಡುತ್ತಿದ್ದರು. ಆದರೆ ವಿಪರ್ಯಾಸವೆಂದರೆ ಆಕೆಯ ಗ್ರಾಹಕರೇ ಆಕೆಯನ್ನು ಹೆಣವಾಗಿಸಿದ್ದಾರೆ.
ಗ್ರಾಹಕರೊಬ್ಬರು ಆಕೆಯನ್ನು ಕೊಲೆ ಮಾಡಿದ್ದು, ಹತ್ಯೆ ಬಳಿಕ ಆಕೆಯ ಮೈಮೇಲಿದ್ದ ಒಡವೆಗಳನ್ನು ಕದ್ದು ಪರಾರಿಯಾಗಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕ ಸೇರಿದಂತೆ ಗ್ರಾಹಕ ಹಾಗೂ ಆತನ ಇಬ್ಬರು ಸಹಚರರನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ.
ಹತ್ಯೆಗೀಡಾದವರನ್ನು ರಾಮನಗರ ನಿವಾಸಿ ಕೆಂಪಮ್ಮ ಎಂದು ಗುರುತಿಸಲಾಗಿದೆ. ಸೆ.8ರಂದು ಸಂಜೆ 4.45ರ ಸುಮಾರಿಗೆ ಮೇಯಿಸಲು ಬಿಟ್ಟಿದ್ದ ದನಗಳನ್ನು ವಾಪಸ್ ಕರೆತರಲು ಹೋದ ಕೆಂಪಮ್ಮ ಅವರನ್ನು ಆರೋಪಿಗಳು ಕೊಲೆ ಮಾಡಿದ್ದರು. ಆಕೆಯನ್ನು ಕೊಂದ ಬಳಿಕ ಆಕೆ ಧರಿಸಿದ್ದ ಚಿನ್ನಾಭರಣವನ್ನು ದೋಚಿದ್ದರು. ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಅರ್ಕಾವತಿ ಕೆರೆಗೆ ಎಸೆದಿದ್ದರು. ಆರೋಪಿಗಳು ಆಕೆಯನ್ನು ಹಿಂಬದಿಯಿಂದ ಕೆಳಕ್ಕೆ ತಳ್ಳಿ ತಂತಿಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದರು.
ತುಂಬಾಹೊತ್ತಾದರೂ ಪತ್ನಿ ಮನೆಗೆ ಬಾರದೆ ಇದ್ದಾಗ ಪತಿ ಕೆಂಚಪ್ಪ (50) ಕರೆ ಮಾಡಿದ್ದಾನೆ. ಮೊಬೈಲ್ ಎರಡ್ಮೂರು ಬಾರಿ ರಿಂಗಣಿಸಿತು, ನಂತರ ಸ್ವಿಚ್ ಆಫ್ ಆಗಿತ್ತು. ಬಳಿಕ ಕೆಂಚಪ್ಪ ಮತ್ತು ಅವರ ಪುತ್ರರು ಅನುಮಾನಿಸಿ ಆಕೆಯನ್ನು ಹುಡುಕಿಕೊಂಡು ಹೋದಾಗ ಕೆರೆಯ ಏರಿ ಮೇಲೆ ಪ್ಲಾಸ್ಟಿಕ್ ಚೀಲವೊಂದು ಕಂಡಿತು. ಚೀಲವನ್ನು ಬಿಚ್ಚಿದಾಗ ಕೆಂಪಮ್ಮನ ಶವ ಪತ್ತೆಯಾಗಿತ್ತು. ಬಳಿಕ ಪೊಲೀಸ್ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಖಾಸಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಅಚಲು ಕಾಲೋನಿ ನಿವಾಸಿಗಳಾದ ಜಿ.ಲಿಂಗರಾಜು (19), ಸಿ ರವಿ (20) ಎಂಬಾತರನ್ನು ಬಂಧಿಸಿದ್ದಾರೆ. ಮೂರನೇ ಆರೋಪಿ 17 ವರ್ಷ ಪ್ರಾಯದ ಅಪ್ರಾಪ್ತನಾಗಿದ್ದು, ಪೊಲೀಸರು ಅವರಿಂದ 51,000 ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಪೋಲಿಸರ ವಿಚಾರಣೆ ವೇಳೆ ಕೊಲೆ ಮಾಡಿದ್ದಾಗಿ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ ಎಂದು ರಾಮನಗರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ತಿಳಿಸಿದರು.
Post a Comment