ಸುಪ್ರೀಂ ಕೋರ್ಟ್ : ಹಿಜಾಬ್ ಧರಿಸುವುದನ್ನು ವ್ಯಂಗವಾಗಿ ಕಾಣದೆ , ಗೌರವಯುತವಾಗಿ ನೋಡಬೇಕು

 ಮಹಿಳೆಯರು ಹಿಜಾಬ್ ಧರಿಸುವುದನ್ನು ವ್ಯಂಗ್ಯವಾಗಿ ನೋಡದೆ ಗೌರವಯುತವಾಗಿ ಕಾಣಬೇಕೆಂದು ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿರುವ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ.

                        ಸಾಂದರ್ಭಿಕ ಚಿತ್ರ

By : Rekha.M 
Online Desk

ನವದೆಹಲಿ: ಮಹಿಳೆಯರು ಹಿಜಾಬ್(Hijab) ಧರಿಸುವುದನ್ನು ವ್ಯಂಗ್ಯವಾಗಿ ನೋಡದೆ ಗೌರವಯುತವಾಗಿ ಕಾಣಬೇಕೆಂದು ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ(Supreme court) ಮೇಲ್ಮನವಿ ಸಲ್ಲಿಸಿರುವ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ.

ಹಿಜಾಬ್ ಧರಿಸುವ ಮಹಿಳೆಯರನ್ನು ವ್ಯಂಗ್ಯಚಿತ್ರಗಳಂತೆ ನೋಡಬಾರದು. ಅವರನ್ನು ಗೌರವದಿಂದ ಕಾಣಬೇಕು. ಅವರು ಬಲವಾದ ಇಚ್ಛಾಶಕ್ತಿಯುಳ್ಳ ಮಹಿಳೆಯರು. ಇದರಿಂದ ಶಕ್ತಿ ಬರುತ್ತದೆ ಎಂದು ಅವರು ಭಾವಿಸುತ್ತಾರೆ. ಹಿಜಾಬ್ ಧರಿಸುವ ಮಹಿಳೆಯರ ಮೇಲೆ ನ್ಯಾಯಾಲಯದ ತೀರ್ಪು, ಕಾನೂನುಗಳನ್ನು ಹೇರಲು ಸಾಧ್ಯವಿಲ್ಲ ಎಂದು ಹಿರಿಯ ವಕೀಲ ಯೂಸುಫ್ ಮುಚ್ಚಲಾ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠದ ಮುಂದೆ ನಿನ್ನೆ ವಾದ ಮಂಡಿಸಿದ್ದು ಪ್ರಕರಣವನ್ನು  ಸಂವಿಧಾನ ಪೀಠಕ್ಕೆ ವರ್ಗಾಯಿಸುವಂತೆ ಒತ್ತಾಯಿಸಿದರು.

ತಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಕ್ಕುಗಳನ್ನು ಒಪ್ಪಿಕೊಳ್ಳದ ಕಾರಣ ಮುಸ್ಲಿಂ ಹೆಣ್ಣುಮಕ್ಕಳ ಹಕ್ಕು ಉಲ್ಲಂಘನೆಯನ್ನು ಎತ್ತಿ ತೋರಿಸುವ ಕೆಲವು ದಾಖಲೆಗಳನ್ನು ಉಲ್ಲೇಖಿಸಿದ ಹಿರಿಯ ವಕೀಲರು, ಕೇವಲ ಬಟ್ಟೆಯನ್ನು ತಲೆಯ ಮೇಲೆ ಧರಿಸಿದ್ದಕ್ಕಾಗಿ ಶಿಕ್ಷಣವನ್ನು ನಿರಾಕರಿಸಲಾಗುವುದಿಲ್ಲ. ಪೇಟ ಧರಿಸುವುದನ್ನು ನೀವು ವಿರೋಧಿಸುವುದಿಲ್ಲ. ಅದನ್ನು ಒಪ್ಪಿಕೊಳ್ಳುತ್ತೀರಿ ಎಂದಾದರೆ ಧಾರ್ಮಿಕ ವೈವಿಧ್ಯತೆಯನ್ನು ಸಹಿಸಿಕೊಳ್ಳುತ್ತೀರಿ ಎಂದರ್ಥ ಎಂದು ವಾದ ಮಂಡಿಸಿದರು.

ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಯೊಳಗೆ ಪ್ರವೇಶ ನಿರಾಕರಣೆಯು ಶಿಕ್ಷಣವನ್ನು ಪಡೆಯುವ ಮೂಲಭೂತ ಹಕ್ಕು, ವೈಯಕ್ತಿಕ ಘನತೆ, ಗೌಪ್ಯತೆ ಮತ್ತು ಧರ್ಮವನ್ನು ಆಚರಿಸುವ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಪೇಟ ಧರಿಸುವುದು, ಹಿಜಾಬ್ ಧರಿಸುವ ಹಕ್ಕುಗಳು ಪರರಸ್ಪರ ಪೂರಕವಾಗಿವೆ ಎಂಬುದು ಹಿಜಾಬ್ ಪರ ವಿದ್ಯಾರ್ಥಿನಿಯರ ಪರ ಹಿರಿಯ ವಕೀಲರ ವಾದವಾಗಿತ್ತು.

ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ ನ್ಯಾಯಪೀಠದ ಮುಖ್ಯಸ್ಥ ನ್ಯಾಯಮೂರ್ತಿ ಗುಪ್ತಾ ಅವರು, ಆತ್ಮಸಾಕ್ಷಿಯ ಹಕ್ಕು ಮತ್ತು ಧರ್ಮವನ್ನು ಆಚರಿಸುವ ಹಕ್ಕು ಪರಸ್ಪರ ಪ್ರತ್ಯೇಕವಾಗಿದೆ ಎಂದು ಹೈಕೋರ್ಟ್ ಕೇವಲ ಹೇಳಿದೆ ಎಂದರು.

ವಿಚಾರಣೆ ವೇಳೆ ಹಿರಿಯ ವಕೀಲ ಮುಚ್ಚಾಲಾ ಅವರು ಖುರಾನ್‌ನ ವ್ಯಾಖ್ಯಾನಕ್ಕೆ ಹೈಕೋರ್ಟ್ ಹೋಗಬಾರದಿತ್ತು ಎಂದು ವಾದಿಸಿದ್ದರು. ಅವರ ವಾದಗಳಿಗೆ ಪ್ರತಿಕ್ರಿಯಿಸಿದ ಪೀಠ, ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ ಎಂದು ವಾದಿಸಿದ್ದರಿಂದ ಹೈಕೋರ್ಟ್‌ಗೆ ಹಾಗೆ ಮಾಡದೆ ಬೇರೆ ದಾರಿಯಿಲ್ಲ ಎಂದು ಹೇಳಿದೆ. ಜನರ ಧಾರ್ಮಿಕ ಆಚರಣೆಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬಾರದು ಎಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಅದೇ ರೀತಿ ನ್ಯಾಯಾಲಯ ಜನರ ಮೇಲೆ ಧಾರ್ಮಿಕ ಆಚರಣೆಗಳನ್ನು ಹೇರುವಂತೆ ಕೂಡ ಇಲ್ಲ ಎಂದು ವಾದಿಸಿದರು.

ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್ ಅವರು ಹಿಜಾಬ್ ಧರಿಸುವುದು ಧರ್ಮ, ಸಂಸ್ಕೃತಿ, ಆತ್ಮಸಾಕ್ಷಿ, ಸಂಸ್ಕೃತಿ ಮತ್ತು ಘನತೆಗೆ ಸಂಬಂಧಿಸಿದ್ದು ಎಂದು ಹೇಳಿದರು. ಸಮವಸ್ತ್ರವನ್ನು ವಿನಿಯೋಗಿಸಬೇಕು ಎಂದು ನಾವು ಹೇಳುವುದಿಲ್ಲ ಆದರೆ ಸಮವಸ್ತ್ರದೊಂದಿಗೆ ಹೆಚ್ಚುವರಿಯಾಗಿ ಏನನ್ನಾದರೂ ಅನುಮತಿಸಬೇಕು ಎಂದು ಖುರ್ಷಿದ್ ಕೂಡ ಹೇಳಿದರು.

ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದ ಸುಪ್ರೀಂ ಕೋರ್ಟ್, ಸೆಪ್ಟೆಂಬರ್ 16 ರವರೆಗೆ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯನ್ನು ಮುಕ್ತಾಯಗೊಳಿಸಲು ಉದ್ದೇಶಿಸಿದೆ ಎಂದು ಸುಳಿವು ನೀಡಿದೆ





Post a Comment

Previous Post Next Post