ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದ ಕೆಜಿಎಫ್ ಬಾಬು ಇದೀಗ ಚಿಕ್ಕಪೇಟೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜನರ ಗಮನವನ್ನು ಸೆಳೆಯುವ ನಿಟ್ಟಿನಲ್ಲಿ ಈಗಾಗಲೇ ಕ್ಷೇತ್ರದಲ್ಲಿ ಸಮಾಜಮುಖಿ ಕೆಲಸ ಕಾರ್ಯಗಳನ್ನು ಶುರು ಮಾಡಿಕೊಂಡಿದ್ದಾರೆ.
ಕೆಜಿಎಫ್ ಬಾಬು ಮತ್ತು ಆರ್ ವಿ ದೇವರಾಜ್ಕೆಜಿಎಫ್ ಬಾಬು ನಡೆಯಿಂದ ಎಚ್ಚೆತ್ತಿರುವ ಆರ್.ವಿ.ದೇವರಾಜ್ ಈಗಾಗಲೇ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗಮನಕ್ಕೂ ತಂದು ಈ ಸಂಬಂಧ ಚರ್ಚಿಸಿದ್ದಾರೆ. ಸುಮಾರು 40 ಸಾವಿರ ಅಲ್ಪ ಸಂಖ್ಯಾತ ಸಮುದಾಯದ ಮತದಾರರನ್ನು ಹೊಂದಿರುವ ಚಿಕ್ಕಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಮತ್ತೊಬ್ಬ ಮುಸ್ಲಿಂ ಮುಖಂಡ ಮನ್ಸೂರ್ ಖಾನ್ ಕೂಡ ಆಸಕ್ತಿ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಟಿಕೆಟ್ ವಾರ್ ಆರಂಭವಾಗುತ್ತದೆ ಎಂಬುದಕ್ಕೆ ಈ ಎಲ್ಲಾ ಬೆಳವಣಿಗೆಗಳು ಪುಷ್ಠಿ ನೀಡುತ್ತಿವೆ.
ಪ್ರತಿ ಕ್ಷೇತ್ರದಲ್ಲೂ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಬಣದ ಆಪ್ತರು ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಾರೆ. ಆದರೆ ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಲು ಎಲ್ಲಾ ಸಮಯದಲ್ಲಿಯೂ ಸಾಧ್ಯವಾಗುವುದಿಲ್ಲ ಎಂಬುದೂ ಸತ್ಯ, ಈಗಾಗಲೇ ಹಲವು ಆಕಾಂಕ್ಷಿಗಳು ತಮಗೆ ಒಂದು ಕ್ಯಾಂಪ್ ನ ಬೆಂಬಲವಿದೆ ಎಂದು ಹೇಳಿದ್ದಾರ.
ಆದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಒಗ್ಗಟ್ಟಿನಿಂದ ಕೆಲಸ ಮಾಡಲು ಪ್ರಯತ್ನಿಸುತ್ತಿರುವಾಗ, ಇದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿದೆ.
ಕೆಆರ್ ಪುರಂ, ಯಶವಂತಪುರ ಮತ್ತು ಆರ್‌ಆರ್‌ನಗರ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಪ್ರತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳಿದ್ದಾರೆ. . ಶಿವಾಜಿನಗರ ಕ್ಷೇತ್ರದಿಂದ ರೋಷನ್ ಬೇಗ್ ನಿರ್ಗಮಿಸಿದ ನಂತರ ಮೊದಲ ಬಾರಿಗೆ ರಿಜ್ವಾನ್ ಅರ್ಷದ್ ಗೆಲುವು ಕಂಡಿದ್ದರು. ಸದ್ಯಕ್ಕೆ ರಿಜ್ವಾನ್ ಸೇಫ್.
ಗಾಂಧಿನಗರದಿಂದ ದಿನೇಶ್ ಗುಂಡೂರಾವ್, ಸರ್ವಜ್ಞನಗರದಿಂದ ಕೆಜೆ ಜಾರ್ಜ್, ಶಾಂತಿನಗರದಿಂದ ಎನ್‌ಎ ಹ್ಯಾರಿಸ್, ವಿಜಯನಗರದಿಂದ ಎಂ ಕೃಷ್ಣಪ್ಪ, ಬ್ಯಾಟರಾಯನಪುರದಿಂದ ಕೃಷ್ಣ ಬೈರೇಗೌಡ, ಪುಲಕೇಶಿನಗರದಿಂದ ಅಖಂಡ ಶ್ರೀನಿವಾಸ್ ಮೂರ್ತಿ, ಬಿಟಿಎಂನಿಂದ ರಾಮಲಿಂಗಾರೆಡ್ಡಿ, ಜಯನಗರದಿಂದ ಸೌಮ್ಯಾರೆಡ್ಡಿ ಹಾಲಿ ಶಾಸಕರಾಗಿದ್ದು ತಮ್ಮ ಕ್ಷೇತ್ರಗಳಲ್ಲಿ ಪ್ರಬಲರಾಗಿದ್ದಾರೆ. ಹೀಗಾಗಿ ಆ ಕ್ಷೇತ್ರಗಳ ಟಿಕೆಟ್ ನಿಸ್ಸಂಶಯವಾಗಿ ಅವರಿಗೆ ಫಿಕ್ಸ್ ಆಗಿದೆ.
ಕಾಂಗ್ರೆಸ್ ಕೂಡ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಮೊದಲೇ ಘೋಷಿಸಲು ಚಿಂತನೆ ನಡೆಸಿದ್ದು, ಚುನಾವಣಾ ತಯಾರಿಗೆ ಕೆಲ ತಿಂಗಳುಗಳ ಕಾಲಾವಕಾಶ ಸಿಗಲಿದೆ. ಆದರೆ ಮತ್ತೊಂದೆಡೆ ಇದು ಹೊರಗುಳಿದಿರುವ ಆಕಾಂಕ್ಷಿಗಳಿಗೆ ಬಂಡಾಯ ಮಾಡಲು ಅವಕಾಶ ನೀಡುತ್ತದೆ ಎನ್ನಲಾಗಿದೆ.
ಕಾಂಗ್ರೆಸ್ ಹಿರಿಯ ನಾಯಕ ರೆಹಮಾನ್ ಖಾನ್ ಇತ್ತೀಚೆಗೆ ಕೆಜಿಎಫ್ ಬಾಬುಗೆ ಅಧಿಕೃತ ಶಿಸ್ತಿನ ನೋಟಿಸ್ ನೀಡಿರುವುದು ಆಂತರಿಕ ಕಲಹದ ಸಮಸ್ಯೆಯನ್ನು ತಡೆಯಲು ಪಕ್ಷವು ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂಬುದನ್ನು ತೋರುತ್ತಿದೆ.
Post a Comment