ಅಧಿಕಾರದ ಅಮಲು ತಲೆಗೇರಿರುವ ಬಿಜೆಪಿಗೆ ಬೆಂಗಳೂರು ಡ್ರಗ್ಸ್ ಸಿಟಿಯಾಗುತ್ತಿರುವುದು ಕಾಣುತ್ತಿಲ್ಲ: ಕಾಂಗ್ರೆಸ್

 ಪ್ರಧಾನಿಗಳು ಬೆಂಗಳೂರಿಗೆ ಬಂದಾಗ ಅವರು ಸಂಚರಿಸುವ ರಸ್ತೆಗೆ ಸಿಂಗಾರ ಮಾಡಲು 26 ಕೋಟಿ ಖರ್ಚು ಮಾಡುತ್ತಾರೆ. ಆದರೆ ಜನ ಸಮಸ್ಯೆಗೆ ಸಿಲುಕಿರುವ ಪ್ರದೇಶದಲ್ಲಿ ಅಭಿವೃದ್ಧಿಗೆ ಖರ್ಚು ಮಾಡುತ್ತಿಲ್ಲ. ಸರ್ಕಾರ ಎಲ್ಲಿದೆ ಎಂದು ಜನ ಪ್ರಶ್ನಿಸುತ್ತಿದ್ದಾರೆ?

                                 ಕೃಷ್ಣ ಬೈರೇಗೌಡ

By : Rekha.M
Online Desk

ಬೆಂಗಳೂರು: ಪ್ರಧಾನಿಗಳು ಬೆಂಗಳೂರಿಗೆ ಬಂದಾಗ ಅವರು ಸಂಚರಿಸುವ ರಸ್ತೆಗೆ ಸಿಂಗಾರ ಮಾಡಲು 26 ಕೋಟಿ ಖರ್ಚು ಮಾಡುತ್ತಾರೆ. ಆದರೆ ಜನ ಸಮಸ್ಯೆಗೆ ಸಿಲುಕಿರುವ ಪ್ರದೇಶದಲ್ಲಿ ಅಭಿವೃದ್ಧಿಗೆ ಖರ್ಚು ಮಾಡುತ್ತಿಲ್ಲ. ಸರ್ಕಾರ ಎಲ್ಲಿದೆ ಎಂದು ಜನ ಪ್ರಶ್ನಿಸುತ್ತಿದ್ದಾರೆ? ಎಂದು ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ ಹರಿಹಾಯ್ದಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರಧಾನಿಗಾಗಿ ಖರ್ಚು ಮಾಡಲು ಹಣವಿದೆ, ರಾಜಕಾಲುವೆ ಮಾಡಲು, ರಸ್ತೆ ಗುಂಡಿ ಮುಚ್ಚಲು ಹಣವಿಲ್ಲವೇ? ಬಿಜೆಪಿ ಸರ್ಕಾರಕ್ಕೆ ಮೋದಿ ಹಾಗೂ ಅಮಿತ್ ಶಾ ಅವರ ಅಭಯ ಹಸ್ತದಿಂದ ಈ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ.

ಇವರು 50% ಅಲ್ಲ 100% ಹಣ ತಿಂದರೂ ಯಾವುದೇ ಇಡಿ, ಐಟಿ, ಆದಾಯ ತೆರಿಗೆ ಇಲಾಖೆ ರೈಡ್ ಆಗುವುದಿಲ್ಲ, ಯಾವುದೇ ಕೇಸ್ ದಾಖಲಾಗುವುದಿಲ್ಲ ಎಂಬ ಅಭಯ ಸಿಕ್ಕಿದೆ. ಹೀಗಾಗಿ ಅವರು ಭ್ರಷ್ಟಾಚಾರವನ್ನು ಗಗನಕ್ಕೆ ಮುಟ್ಟಿಸಿದ್ದಾರೆ. ಇವರನ್ನು ಪ್ರಶ್ನೆ ಕೇಳುವವರೆ ರಕ್ಷಣೆಗೆ ನಿಂತಿದ್ದಾರೆ. ಇಡಿ, ಸಿಬಿಐ, ಐಟಿ ಅಫ್ಪಿತಪ್ಪಿಯೂ ಬಿಜೆಪಿಯವರನ್ನು ಪ್ರಶ್ನಿಸುವುದಿಲ್ಲ. ಈ ಸಂಸ್ಥೆಗಳು ರಾಜಕೀಯ ಅಸ್ತ್ರವಾಗಿವೆ. ಈ ಭ್ರಷ್ಟಾಚಾರಕ್ಕೆ ಅಮಿತ್ ಶಾ, ಹಾಗೂ ಮೋದಿ ಅವರ ಆಶೀರ್ವಾದವಿದೆ ಎಂದು ಆರೋಪಿಸಿದರು.

ಇಂದು ನಾವೆಲ್ಲ ಬೆಂಗಳೂರಿನ ಪರಿಸ್ಥಿತಿ ನೋಡುತ್ತಿದ್ದೇವೆ. ಬೆಂಗಳೂರು ಪ್ರಪಂಚದಲ್ಲಿ ಐಟಿ ಕ್ಯಾಪಿಟಲ್, ಸ್ಟಾರ್ಟ್ ಅಪ್ ಕ್ಯಾಪಿಟಲ್, ವಿಜ್ಞಾನ ಹಾಗೂ ತಂತ್ರಜ್ಞಾನದ ಕೇಂದ್ರವಾಗಿ ಸೇವೆ ಸಲ್ಲಿಸಿತ್ತು. 2015-16ರಲ್ಲಿ ವರ್ಲ್ಡ್ ಮೋಸ್ಟ್ ಡೈನಾಮಿಕ್ ಸಿಟಿ ಆಗಿ ಹೊರಹೊಮ್ಮಿತ್ತು. ಆದರೆ ಇಂದು ಅತಿ ಹೆಚ್ಚು ರಸ್ತೆ ಗುಂಡಿ ನಗರ, ಮುಳುಗುತ್ತಿರುವ ನಗರವಾಗುತ್ತಿದೆ ಎಂದು ಆರೋಪಿಸಿದರು.

ಬೆಂಗಳೂರು ಡ್ರಗ್ಸ್ ನಗರ ಆಗುತ್ತಿರುವುದಕ್ಕೆ ಯಾರು ಕಾರಣ ಎಂಬ ಪ್ರಶ್ನೆಗೆ, ‘ಸರ್ಕಾರದ ಪ್ರಾಯೋಜಕತ್ವವೇ ಕಾರಣ. ಆರಂಭದಲ್ಲಿ ಸಿನಿಮಾ ತಾರೆಯರನ್ನು ಬಂಧಿಸಿ ನಾಟಕ ಮಾಡಿದರು. ನಂತರ ಡ್ರಗ್ಸ್ ಹಾವಳಿ ಕಡಿಮೆಯಾಗಿದೆಯೇ ಅಥವಾ ಐದು ಪಟ್ಟು ಹೆಚ್ಚಾಗಿದೆಯೇ? ಬಿಜೆಪಿಯವರು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಈ ನಾಟಕ ಮಾಡಿದ್ದರು‌’ ತಲೆಗೆ ಅಧಿಕಾರದ ಅಮಲು ಏರಿರುವ ಬಿಜೆಪಿ ಕಣ್ಣಿಗೆ ಇದು ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕೆಪಿಸಿಸಿ ಸಂವಹನ ಮತ್ತು ಸಾಮಾಜಿಕ ಜಾಲ ತಾಣದ ಅಧ್ಯಕ್ಷರಾದ ‌ಪ್ರಿಯಾಂಕ್ ಖರ್ಗೆ, ‘ರಾಜ್ಯದಲ್ಲಿ ಡ್ರಗ್ಸ್ ನಿಗ್ರಹ ಕಾಯ್ದೆ ಅಡಿ 2018ರಲ್ಲಿ 1,030 ಪ್ರಕರಣ ದಾಖಲಾಗಿದ್ದರೆ, ಕಳೆದ ಎರಡು ವರ್ಷಗಳಲ್ಲಿ 5,587 ಪ್ರಕರಣಗಳು ದಾಖಲಾಗಿವೆ. ಡ್ರಗ್ಸ್ ಪ್ರಕರಣಗಳ ಸಂಖ್ಯೆ ಶೇ 462ರಷ್ಟು ಹೆಚ್ಚಾಗಿದೆ. ಇದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಏರಿಕೆ’ ಎಂದರು.




    Post a Comment

    Previous Post Next Post