ಯಾವ ಆಧಾರದ ಮೇಲೆ ಸಿದ್ದರಾಮಯ್ಯನವರು ಆರ್ ಎಸ್ಎಸ್ ನಿಷೇಧಿಸಬೇಕೆಂದು ಕೇಳುತ್ತಾರೆ : ಸಿಎಂ ಬೊಮ್ಮಾಯಿ ಸೇರಿ ಬಿಜೆಪಿ ನಾಯಕರ ಪ್ರಶ್ನೆ

ಪಿಎಫ್ಐ ಸಂಘಟನೆಯನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿಯವರ ಆರ್ ಎಸ್ಎಸ್ ಸಂಘಟನೆಯನ್ನು ಕೂಡ ನಿಷೇಧಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದರು.

                                                 ಸಿದ್ದರಾಮಯ್ಯ

By : Rekha.M
Online Desk


ಬೆಂಗಳೂರು: ಪಿಎಫ್ಐ ಸಂಘಟನೆಯನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿಯವರ ಆರ್ ಎಸ್ಎಸ್ ಸಂಘಟನೆಯನ್ನು ಕೂಡ ನಿಷೇಧಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದರು. ಸಾರ್ವಜನಿಕ ಶಾಂತಿ ಕದಡುವ ಆರ್‌ಎಸ್‌ಎಸ್ ಮತ್ತು ಇತರ ಸಂಘಟನೆಗಳನ್ನು ನಿಷೇಧಿಸಬೇಕು ಎಂಬ ಕಾಂಗ್ರೆಸ್ ಸಿದ್ದರಾಮಯ್ಯನವರ ಬೇಡಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕರು, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದೇಶಭಕ್ತಿಯ ಚಟುವಟಿಕೆಗಳಿಗಾಗಿ ಆರ್ ಎಸ್ಎಸ್ (RSS)ನ್ನು ನಿಷೇಧಿಸಬೇಕೆ, ಅದನ್ನು ನಿಷೇಧಿಸಲು ಯಾವುದಾದರೂ ನಿಖರ ಆಧಾರವಿದೆಯೇ? ಸಿದ್ದರಾಮಯ್ಯನವರಿಗೆ ಆರ್ ಎಸ್ ಎಸ್ ಹೆಸರು ಹೇಳದಿದ್ದರೆ ರಾಜಕೀಯ ಮಾತನಾಡಲು ಸಾಧ್ಯವಾಗುವುದಿಲ್ಲ. ಬೆಕ್ಕು ಯಾವಾಗಲೂ ಇಲಿಯ ಮೇಲೆ ಕಣ್ಣಿಟ್ಟಿರುವಂತೆ ಸಿದ್ದರಾಮಯ್ಯನವರು ಆರ್‌ಎಸ್‌ಎಸ್‌ ಮೇಲೆಯೇ ಗಮನ ಹರಿಸುತ್ತಾರೆ ಎಂದರು. 

ಶಾಸಕ ಎಂ.ಪಿ.ರೇಣುಕಾಚಾರ್ಯ, ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ಅರ್ಹತೆ ಸಿದ್ದರಾಮಯ್ಯನವರಿಗೆ ಇಲ್ಲ, ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 175 ಪಿಎಫ್‌ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದರು ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್, ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವ ಕಾಂಗ್ರೆಸ್ ಅನ್ನು ನಿಷೇಧಿಸಬೇಕು ಎಂದು ಹೇಳಿದರು. ಅದಕ್ಕೆ ಕೆರಳಿ ಕೆಂಡವಾಗಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿ ಹೋರಾಡದಿದ್ದರೆ, ಸಾವರ್ಕರ್ ಅವರಂತೆ ಕ್ಷಮೆಯಾಚನೆಯ ಪತ್ರಗಳನ್ನು ಬರೆಯುವ ವ್ಯವಹಾರದಲ್ಲಿ ತೊಡಗಿದ್ದರೆ, ಭಾರತಕ್ಕೆ ಇನ್ನೂ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ ಎಂದರು. 

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಟ್ವೀಟ್ ಮಾಡಿ, ಬಿಜೆಪಿ ಮತ್ಎತು ಆರ್ ಎಸ್ ಎಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕೋಮುವಾದ ಮತ್ತು ದ್ವೇಷವು ಸಮಾಜಕ್ಕೆ ಹಾನಿಕಾರಕವಾಗಿದ್ದು, ಅದನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.


    Post a Comment

    Previous Post Next Post