ಬೆಂಗಳೂರು: ತೆರೆದ ಚರಂಡಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಚಿತ್ರದುರ್ಗ ಮೂಲದ ವ್ಯಕ್ತಿ ಸಾವು

 ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮೂರು ತಿಂಗಳಿಗೂ ಹೆಚ್ಚು ಕಾಲ ತೆರೆದಿದ್ದ ಚರಂಡಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

         ಪ್ರಾತಿನಿಧಿಕ ಚಿತ್ರ

By : Rekha.M

ಬೆಂಗಳೂರು: ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮೂರು ತಿಂಗಳಿಗೂ ಹೆಚ್ಚು ಕಾಲ ತೆರೆದಿದ್ದ ಚರಂಡಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಚಿತ್ರದುರ್ಗ ಮೂಲದ ವೆಂಕಟೇಶ್ ಕೆ (31) ಎಂದು ಗುರುತಿಸಲಾಗಿದ್ದು, ನೆಲಗದರನಹಳ್ಳಿಯ ನಿರ್ಮಾಣ ಸ್ಥಳದಲ್ಲಿ ಟ್ರ್ಯಾಕ್ಟರ್ ಚಾಲಕರಾಗಿದ್ದರು.

ಭಾನುವಾರ ರಾತ್ರಿ 11.30ರ ಸುಮಾರಿಗೆ ಪೀಣ್ಯದ ಟಿ.ದಾಸರಹಳ್ಳಿಯಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಕಾಲು ಜಾಗಿ ತೆರೆದ ಚರಂಡಿಗೆ ಬಿದ್ದಿದ್ದಾರೆ. ಈ ವೇಳೆ ವೆಂಕಟೇಶ್ ಅವರನ್ನು ದಾರಿಹೋಕರು ರಕ್ಷಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ.

ಈ ಸಂಬಂಧ ಸಹಾಯಕ ಎಂಜಿನಿಯರ್ ಮತ್ತು ಇತರ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ಕೈಗೆತ್ತಿಕೊಂಡಿರುವ ಪೊಲೀಸರು, ಮೂರು ತಿಂಗಳ ಹಿಂದೆ ಚರಂಡಿಯ ಹೂಳು ತೆಗೆಯಲು ಸ್ಲ್ಯಾಬ್‌ಗಳನ್ನು ತೆಗೆಯಲಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಂಡ ನಂತರ ಚರಂಡಿ ಮುಚ್ಚಿಲ್ಲ ಎಂದು ತಿಳಿಸಿದ್ದಾರೆ.

ರುಕ್ಮಿಣಿನಗರ ಮತ್ತು ವಿದ್ಯಾನಗರದ ನಿವಾಸಿಗಳು ತೆರೆದ ಚರಂಡಿಯನ್ನು ಮುಚ್ಚುವಂತೆ ಅಥವಾ ಬ್ಯಾರಿಕೇಡ್ ಹಾಕುವಂತೆ ಬಿಬಿಎಂಪಿಗೆ ಒತ್ತಾಯಿಸಿದ್ದರು. ಆದರೆ ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ವೆಂಕಟೇಶ್ ಚರಂಡಿಗೆ ಜಾರಿದ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಪರಿಶೀಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಗಳಿಗೆ ನೋಟಿಸ್ ಜಾರಿ

ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಪೊಲೀಸರು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಪ್ರತ್ಯಕ್ಷದರ್ಶಿ ರಾಮಯ್ಯ ಅವರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ. ವೆಂಕಟೇಶ್ ಅವರ ಶವವನ್ನು ಮಂಗಳವಾರ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಅವರ ಸಂಬಂಧಿಕರು ಟಿ ದಾಸರಹಳ್ಳಿಯ ಬಿಬಿಎಂಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವಕೀಲ ಎಂ.ಆರ್.ಬಾಲಕೃಷ್ಣ ಮಾತನಾಡಿ, ಪೊಲೀಸರು ಪ್ರಕರಣ ದಾಖಲಿಸಿಕೊಂಡ ಕೂಡಲೇ ಬಿಬಿಎಂಪಿ ಅಧಿಕಾರಿಗಳನ್ನು ಬಂಧಿಸಬೇಕಿತ್ತು ಎಂದಿದ್ದಾರೆ.





Post a Comment

Previous Post Next Post