ನಗರದಲ್ಲಿ ಮಳೆ ಸುರಿದರೆ ಆಗುವ ಅನಾಹುತಗಳನ್ನು ತಪ್ಪಿಸಲು ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಅಕ್ರಮ ಕಟ್ಟಡಗಳು, ನಿವಾಸದ ಮನೆಗಳನ್ನು ತೆರವುಗೊಳಿಸುವ ತನ್ನ ಎರಡನೇ ದಿನದ ಕಾರ್ಯಾಚರಣೆಯನ್ನು ಬಿಬಿಎಂಪಿ ಇಂದು ಮಂಗಳವಾರ ಮುಂದುವರಿಸಿದೆ.
ಬಿಬಿಎಂಪಿಯಿಂದ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ
ಬೆಂಗಳೂರು: ನಗರದಲ್ಲಿ ಮಳೆ ಸುರಿದರೆ ಆಗುವ ಅನಾಹುತಗಳನ್ನು ತಪ್ಪಿಸಲು ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಅಕ್ರಮ ಕಟ್ಟಡಗಳು, ನಿವಾಸದ ಮನೆಗಳನ್ನು ತೆರವುಗೊಳಿಸುವ ತನ್ನ ಎರಡನೇ ದಿನದ ಕಾರ್ಯಾಚರಣೆಯನ್ನು ಬಿಬಿಎಂಪಿ ಇಂದು ಮಂಗಳವಾರ ಮುಂದುವರಿಸಿದೆ.
ರಾಜಕಾಲುವೆ ಒತ್ತುವರಿಯಾಗಿರುವ ಕಟ್ಟಡಗಳ ಬಗ್ಗೆ ಬಿಬಿಎಂಪಿ ಪಟ್ಟಿ ಮಾಡಿದ್ದು, 600 ಒತ್ತುವರಿ ಕಟ್ಟಡಗಳ ತೆರವಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ರಾಜಕಾಲುವೆ ಒತ್ತುವರಿ ಕಾರ್ಯ ಮುಂದುವರೆದಿದ್ದು, ಮಹದೇವಪುರ ಭಾಗದಲ್ಲಿ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ಮಾಡುತ್ತಿದೆ. ಪ್ರತಿಷ್ಠಿತ ವಿಲ್ಲಾಗಳು, ಶಿಕ್ಷಣ ಸಂಸ್ಥೆ, ಮನೆಗಳು ಒತ್ತುವರಿ ಕಾರ್ಯಾಚರಣೆಗೆ ನೆಲಸಮವಾಗುತ್ತಿವೆ.
ಮಹದೇವಪುರದ ಬಸವನಗರದಲ್ಲಿನ ಗೋಪಾಲನ್ ಕಾಲೇಜ್ ಆಡಳಿತ ಮಂಡಳಿಯಿಂದ ರಾಜಕಾಲುವೆ ಒತ್ತುವರಿ ಸ್ಥಳದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮೈದಾನ ನಿರ್ಮಾಣ ಮಾಡಲಾಗುತ್ತಿದೆ. ಮಳೆ ಬಂದಾಗೊಮ್ಮೆ ಮೈದಾನ ಬಳಿಯ ಜಾಗದಲ್ಲಿ ಪ್ರವಾಹ ಉಂಟಾಗಿತ್ತು. ಸದ್ಯ ಒತ್ತುವರಿ ಜಾಗದಲ್ಲಿ ಅಧಿಕಾರಿಗಳು ಮಾರ್ಕಿಂಗ್ ಮಾಡುತ್ತಿದ್ದಾರೆ. ಅದೇ ರೀತಿಯಾಗಿ ದೊಡ್ಡಾನೆಗುಂದಿ ರಸ್ತೆಯ ಬಾಗ್ಮನೆ ವರ್ಲ್ಡ್ ಟೆಕ್ನಾಲಜಿ ಸೆಂಟರ್ನಿಂದ ರಾಜಕಾಲುವೆ ಒತ್ತುವರಿ ಮಾಡಲಾಗುತ್ತಿದೆ. ಒತ್ತುವರಿ ತೆರವು ಮಾಡಲು ಬಂದ ಜೆಸಿಬಿಯನ್ನು ಟೆಕ್ ಪಾರ್ಕ್ನ ಸಿಬ್ಬಂದಿ ತಡೆದು ನಿಲ್ಲಿಸಿದ್ದಾರೆ.
ಮಳೆ ನೀರು ನಿಂತು ವ್ಯಾಪಕ ಸುದ್ದಿಯಾದ ಪ್ರತಿಷ್ಠಿತ ರೈನ್ ಬೋ ಡ್ರೈವ್ ಲೇಔಟ್ ವಿಲ್ಲಾಗಳಿಗೆ ಜಾಗ ತೆರವುಗೊಳಿಸುವಂತೆ ಬೆಂಗಳೂರು ಪೂರ್ವ ತಹಶೀಲ್ದಾರ್ ನೋಟಿಸ್ ಜಾರಿ ಮಾಡಿದ್ದಾರೆ. 15ಕ್ಕೂ ಹೆಚ್ಚು ವಿಲ್ಲಾಗಳಿಗೆ ತಹಶೀಲ್ದಾರ್ ನೋಟಿಸ್ ಜಾರಿಗೊಳಿಸಿದ್ದಾರೆ. ಮಳೆಯಿಂದ ರೈನ್ಬೋ ಡ್ರೈವ್ ಲೇಔಟ್ ಜಲಾವೃತಗೊಂಡಿತ್ತು.
ರೈನ್ಬೋ ಡ್ರೈವ್ ಲೇಔಟ್ನಲ್ಲಿ ಜಿಲ್ಲಾಡಳಿತ ಸರ್ವೆ ನಡೆಸಿದ್ದು, ಕಾಲುವೆ ಒತ್ತುವರಿ ಮಾಡಿ ವಿಲ್ಲಾಗಳನ್ನ ನಿರ್ಮಿಸಿರುವುದು ಪತ್ತೆಯಾಗಿದೆ. ಇದೀಗ ವಿಲ್ಲಾಗಳನ್ನ ತೆರವುಗೊಳಿಸುವಂತೆ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಶಾಂತಿನಿಕೇತನ ಲೇ ಔಟ್ ನ ಮುನ್ನೆಕೋಲಾದಲ್ಲಿ ಬುಲ್ಡೋಜರ್ ಮೂಲಕ ಬಿಬಿಎಂಪಿ ಮನೆಯನ್ನು ಕೆಡವುತ್ತಿರುವುದು ಕಾಣಬಹುದು. ಬಿಬಿಎಂಪಿಯ ತೆರವು ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯರೊಬ್ಬರು, ನಾನಿಲ್ಲಿ 32 ವರ್ಷಗಳಿಂದಿದ್ದೇವೆ. ಮನೆ ಅಥವಾ ಕಟ್ಟಡ ನಿರ್ಮಿಸುವಾಗ ಬಿಬಿಎಂಪಿ ಪ್ಲಾನ್ ಅನುಮೋದನೆ ನೀಡುತ್ತದೆ. ತಾಂತ್ರಿಕ ವಿಷಯಗಳನ್ನು ಪರೀಕ್ಷಿಸಿ ನೀಡುತ್ತದೆ. ಇಲ್ಲಿ ಜಾಗ ಖರೀದಿಸಿರುವ ಮಾಲೀಕರಿಗೆ ರಾಜಕಾಲುವೆ ಎಂದರೇನು, ಎಲ್ಲಿ ಹಾದುಹೋಗುತ್ತದೆ ಎಂದು ಗೊತ್ತಿರುವುದಿಲ್ಲ. ಇಲ್ಲಿ ಸರ್ಕಾರ, ಬಿಬಿಎಂಪಿಯ ತಪ್ಪಿದೆ ಹೊರತು ಮಾಲೀಕರು ಮುಗ್ಧರು ಎಂದು ಪ್ರತಿಕ್ರಿಯಿಸಿದ್ದಾರೆ.
Post a Comment