ನವದೆಹಲಿ: ಒಬ್ಬ ವ್ಯಕ್ತಿಗೆ ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸುವ, ಆಚರಿಸುವ ಹಕ್ಕು ಇದೆ, ಆದರೆ ಸಮವಸ್ತ್ರ ಧರಿಸುವ ಶಾಲೆಯವರೆಗೆ ಅದನ್ನು ತೆಗೆದುಕೊಂಡು ಹೋಗುವ ಔಚಿತ್ಯವನ್ನು ಸುಪ್ರೀಂ ಕೋರ್ಟ್ ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಕುರಿತ ವಿಚಾರಣೆ ವೇಳೆ ಪ್ರಶ್ನಿಸಿದೆ.
ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದಕ್ಕೆ ನಿಷೇಧ ಹೇರಿ ರಾಜ್ಯ ಸರ್ಕಾರ ಹೊರಡಿಸಿದ್ದ ನಿಯಮವನ್ನು ಪುರಸ್ಕರಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ರೀತಿ ಪ್ರಶ್ನಿಸಿದೆ. ಸಮವಸ್ತ್ರ ಧರಿಸುವ ಶಾಲೆಯಲ್ಲಿ ಹಿಜಾಬ್ ಏಕೆ ಎಂದು ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ನಿನ್ನೆ ಪ್ರಶ್ನಿಸಿದೆ.
ನಿಮ್ಮ ನಿಮ್ಮ ಧಾರ್ಮಿಕ ಸಂಪ್ರದಾಯಗಳನ್ನು ಆಚರಿಸುವ ಹಕ್ಕು ನಿಮಗಿದೆ. ಆದರೆ ನೀವು ಧರಿಸಬೇಕಾದ ಉಡುಪಿನ ಭಾಗವಾಗಿ ಸಮವಸ್ತ್ರವನ್ನು ಹೊಂದಿರುವ ಶಾಲೆಗೆ ನಿಮ್ಮ ಧಾರ್ಮಿಕ ಸಂಪ್ರದಾಯಗಳನ್ನು ತೆಗೆದುಕೊಂಡು ಹೋಗಬಹುದೇ ಎಂಬುದು ಪ್ರಶ್ನೆ ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ನೇತೃತ್ವದ ನ್ಯಾಯಪೀಠ ಕೇಳಿದೆ. ಕೆಲವು ಅರ್ಜಿದಾರರ ಪರ ವಾದ ಮಂಡಿಸುತ್ತಿದ್ದ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರಿಗೆ ಸುಪ್ರೀಂ ಕೋರ್ಟ್ ಈ ಪ್ರಶ್ನೆಯನ್ನು ಕೇಳಿದೆ.
ರಾಜ್ಯವು ಶಾಲಾ-ಕಾಲೇಜುಗಳಿಗೆ ನಿಯಮಗಳನ್ನು ರೂಪಿಸುವ ವಿಷಯಗಳಲ್ಲಿ ಡ್ರೆಸ್ ಕೋಡ್ ಇಲ್ಲ ಎಂಬ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರ ವಾದವನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠ, ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲದಿದ್ದರೆ ವಿದ್ಯಾರ್ಥಿಗಳು ಮಿಡಿ-ಮಿನಿಸ್ಕರ್ಟ್‌ಗಳಲ್ಲಿ ಬರಬಹುದೇ ಎಂದು ಕೇಳಿತು.
ನಿರ್ದಿಷ್ಟ ಅಧಿಕಾರವಿಲ್ಲದಿದ್ದರೆ, 161 ನೇ ವಿಧಿ ಅನ್ವಯವಾಗುತ್ತದೆ, ಸಮವಸ್ತ್ರವನ್ನು ಸೂಚಿಸುವ ಅಧಿಕಾರವಿಲ್ಲದಿದ್ದರೆ, ಹುಡುಗಿಯರು ಮಿಡಿ ಮಿನಿಸ್ಕರ್ಟ್‌ಗಳು ಏನು ಬೇಕಾದರೂ ಬರಬಹುದೇ ಯಾವುದೇ ನಿಯಮಗಳು ಜಾರಿಯಿಲ್ಲದಿದ್ದರೆ, ರಾಜ್ಯದ ಕಾರ್ಯನಿರ್ವಾಹಕ ಅಧಿಕಾರವು ಕಾರ್ಯರೂಪಕ್ಕೆ ಬರುತ್ತದೆ. ಹೈಕೋರ್ಟ್ ಹೇಳಿದ್ದನ್ನು ನಾವು ಪಾಲಿಸಬೇಕಾಗಿಲ್ಲ. ಕಾಯ್ದೆಯು ಯಾವುದೇ ಡ್ರೆಸ್ ಕೋಡ್ ನ್ನು ನಿಷೇಧಿಸದಿದ್ದರೆ ಅಥವಾ ಸೂಚಿಸದಿದ್ದರೆ, ರಾಜ್ಯ ಸರ್ಕಾರದ ಕಾರ್ಯನಿರ್ವಾಹಕ ಅಧಿಕಾರ ಬರುತ್ತದೆಯೇ ಅಥವಾ ಇಲ್ಲವೇ ಎಂದು ನ್ಯಾಯಪೀಠ ಕೇಳಿತು.
ಕಳೆದ ಫೆಬ್ರವರಿ 5ರಂದು ಹೊರಡಿಸಿದ್ದ ಸರ್ಕಾರದ ಆದೇಶದಲ್ಲಿ ಇಸ್ಲಾಂ ಧರ್ಮದ ಹಿಜಾಬ್ ಅಥವಾ ಯಾವುದೇ ಧಾರ್ಮಿಕ ಪದ್ಧತಿ ಬಿಂಬಿಸುವ ವಸ್ತ್ರಗಳನ್ನು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಧರಿಸಿಕೊಂಡು ಹೋಗಬಾರದು ಎಂದು ಆದೇಶ ತಂದಿತ್ತು.
Post a Comment