ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಕಣ ರಂಗೇರಿದ್ದು, ಮಹತ್ವದ ಬೆಳವಣಿಗೆಯಲ್ಲಿ ನಿನ್ನೆಯಷ್ಟೇ ನಾಮಪತ್ರ ಸಂಗ್ರಹಿಸಿದ್ದ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಕಣ ರಂಗೇರಿದ್ದು, ಮಹತ್ವದ ಬೆಳವಣಿಗೆಯಲ್ಲಿ ನಿನ್ನೆಯಷ್ಟೇ ನಾಮಪತ್ರ ಸಂಗ್ರಹಿಸಿದ್ದ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಹೌದು.. ನಿನ್ನೆ ತಮ್ಮ ನಾಮಪತ್ರಗಳನ್ನು ಸಂಗ್ರಹಿಸಿದ್ದ ದಿಗ್ವಿಜಯ ಸಿಂಗ್ ಅವರು ಇಂದು ಬೆಳಗ್ಗೆ ಮತ್ತೋರ್ವ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ನಿನ್ನೆ ತಡರಾತ್ರಿ ನಡೆದ ಸಭೆಯ ನಂತರ, ಕಾಂಗ್ರೆಸ್ ಹಿರಿಯ ನಾಯಕ ಕೆಸಿ ವೇಣುಗೋಪಾಲ್ ಅವರು ಖರ್ಗೆ ಅವರನ್ನು ಸ್ಪರ್ಧಿಸಲು ನಾಯಕತ್ವ ಬಯಸುತ್ತದೆ ಎಂದು ತಿಳಿಸಿದ ಹಿನ್ನಲೆಯಲ್ಲಿ ದಿಗ್ವಿಜಯ್ ಸಿಂಗ್ ಸ್ಪರ್ಧೆಯಿಂದ ಹಿಂದೆ ಸರಿದ್ದಾರೆ ಎನ್ನಲಾಗಿದೆ.
ಖರ್ಗೆ ಹಾದಿ ಸುಗಮ
ದಿಗ್ವಿಜಯ್ ಸಿಂಗ್ ಹಿಂದೆ ಸರಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗಾಗಿ ಕೇಳಿಬಂದ ಪ್ರಮುಖರ ಪಟ್ಟಿಯಲ್ಲಿ ಖರ್ಗೆ ಇದೀಗ ಅಗ್ರ ಗಣ್ಯರಾಗಿದ್ದು, ಸಿಂಗ್ ಹೊರಗುಳಿದ ಬಳಿಕ ಅವರ ಹಾದಿ ಸುಗಮವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಕಾಂಗ್ರೆಸ್ ಪಕ್ಷದ ಅಧಿನಾಯಕರದ್ದೇ ಎಂದೂ ಹೇಳಲಾಗಿದೆ. ಈ ಹಿಂದೆ ಸಾಂಸ್ಥಿಕ ಬದಲಾವಣೆಗೆ ಒತ್ತಾಯಿಸಿ 2020 ರಲ್ಲಿ ಸೋನಿಯಾ ಗಾಂಧಿ ಅವರಿಗೆ ಸ್ಫೋಟಕ ಪತ್ರವನ್ನು ಬರೆದಿದ್ದ "ಜಿ-23" ಭಿನ್ನಮತೀಯರ ಗುಂಪಿನ ಪ್ರಮುಖ ಸದಸ್ಯ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ಕೂಡ ಪಕ್ಷದ ಉನ್ನತ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಂಗ್ ಗೆ ಪರ್ಯಾಯ ಸ್ಥಾನ?
ಇನ್ನು ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಮುಖ್ಯಸ್ಥರಾದರೆ ಸಿಂಗ್ ಅವರನ್ನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಬಹುದು ಎಂಬ ವಾದ ಕೂಡ ಕಾಂಗ್ರೆಸ್ ನಲ್ಲಿ ಕೇಳಿಬರುತ್ತಿದೆ. ಪಕ್ಷದ ಉನ್ನತ ಹುದ್ದೆಗೆ ಸ್ಪರ್ಧಿಸಿದರೆ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವಂತೆ ಕೇಳಿದ ಗೆಹ್ಲೋಟ್ ಅವರ ಪ್ರಕರಣದಂತೆ 'ಒಬ್ಬ ವ್ಯಕ್ತಿ, ಒಂದು ಹುದ್ದೆ' ಸೂತ್ರವು ಖರ್ಗೆಗೆ ಅನ್ವಯಿಸುತ್ತದೆ ಎನ್ನಲಾಗಿದೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ನಿನ್ನೆ ಸೋನಿಯಾ ಗಾಂಧಿಯವರಲ್ಲಿ ಕ್ಷಮೆಯಾಚಿಸಿದ ನಂತರ ಗೆಹ್ಲೂಟ್ ಕೂಡ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್ ನಿಂದ ಹೊರಗುಳಿದಿದ್ದರು.
20 ವರ್ಷಗಳ ನಂತರ ಗಾಂಧಿಯೇತರರು ಸ್ಪರ್ಧಿಸುತ್ತಿರುವ ಮೊದಲ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಇದಾಗಿದ್ದು, ಪಕ್ಷದ ಮುಖ್ಯಸ್ಥರಾಗಲು ಇತರ ಹಿರಿಯ ನಾಯಕರಿಗೆ ದಾರಿ ಮಾಡಿಕೊಡಲು ಗಾಂಧಿ ಕುಟುಂಬದ ನಾಯಕರು ಸ್ಪರ್ಧಿಸಲು ನಿರಾಕರಿಸಿದ್ದಾರೆ. ತಿರುವನಂತಪುರಂ ಸಂಸದ ಶಶಿ ತರೂರ್ ಕೂಡ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ. ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆಗೆ ಸಕಲ ಸಿದ್ಧತೆ ಮಾಡಲಾಗಿದ್ದು, ಪಕ್ಷದ ಮುಖಂಡರು ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸಬಹುದು. ಅಕ್ಟೋಬರ್ 17 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 19 ರಂದು ಫಲಿತಾಂಶ ಪ್ರಕಟವಾಗಲಿದೆ.
Post a Comment