ಕೇಂದ್ರ ಸರ್ಕಾರ ಸೆಪ್ಟೆಂಬರ್ 14ನ್ನು ಹಿಂದಿ ದಿವಸ (Hindi Diwas) ಎಂದು ಆಚರಿಸುವುದನ್ನು ವಿರೋಧಿಸಿ ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು, ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.
ಜೆಡಿಎಸ್ ವತಿಯಿಂದ ವಿಧಾನಸೌಧ ಗಾಂಧಿ ಪ್ರತಿಮೆ ಮುಂದೆ ನಡೆದ ಪ್ರತಿಭಟನೆ
ಬೆಂಗಳೂರು: ಕೇಂದ್ರ ಸರ್ಕಾರ ಸೆಪ್ಟೆಂಬರ್ 14ನ್ನು ಹಿಂದಿ ದಿವಸ (Hindi Diwas) ಎಂದು ಆಚರಿಸುವುದನ್ನು ವಿರೋಧಿಸಿ ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು, ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.
ಈಗಾಗಲೇ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇಂದು ಹಿಂದಿ ದಿವಸ ಆಚರಿಸದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದರು.
ಕನ್ನಡಕ್ಕೆ ಮೊದಲ ಪೂಜೆ: ಹಿಂದಿ ದಿವಸ ಆಚರಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವ ಭಾಷೆಯ ಕಲಿಕೆಯನ್ನು ವಿರೋಧಿಸುವುದಿಲ್ಲ. ಯಾವ ಭಾಷೆಯ ಹೇರಿಕೆಯನ್ನೂ ಸಹಿಸುವುದಿಲ್ಲ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪೂಜೆ. ಕೇಂದ್ರದ ಬಿಜೆಪಿ ಸರ್ಕಾರ ಹಿಂದಿ ದಿವಸ ಆಚರಣೆ ಮಾಡಿ ಹಿಂದಿ ಭಾಷೆ ಹೆಸರಲ್ಲಿ RSS ಹಿಂದುತ್ವ ಹೇರಿಕೆ ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಹಿಂದಿ ಭಾಷೆ ಹೇರಿಕೆ, ಹಿಂದಿ ದಿನ ಆಚರಣೆ ವಿರೋಧಿಸಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಹಮ್ಮಿಕೊಂಡಿತ್ತು. ಹಿಂದಿ ದಿವಸ್‌ಗೆ ಜೆಡಿಎಸ್ ಸಂಪೂರ್ಣ ವಿರೋಧಿಸುತ್ತದೆ. ಕೇಂದ್ರ ಸರ್ಕಾರ, ಕೇಂದ್ರ ಗೃಹ ಸಚಿವರು ಪದೇ ಪದೇ ಹಿಂದಿ ಹೇರುವ ಕುತಂತ್ರದ ಹಿಡನ್ ಅಜೆಂಡಾ. ಇದನ್ನ ವಿರೋಧಿಸಿ ಇಂದು ಪ್ರತಿಭಟನೆ ನಡೆಸುತ್ತೇವೆ. ಹಿಂದಿ ದಿವಸ್‌ಗೆ ನಮ್ಮ ಸಂಪೂರ್ಣ ವಿರೋಧ ಇದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದ ಮೇಲೆ ನಾವೆಲ್ಲಾ ಒಂದು ಕುಟುಂಬದಂತಿದ್ದೇವೆ. ಆದರೆ ದೇಶದ ಸಮಸ್ಯೆಗಳಿಗೆ ಸ್ಪಂದಿಸದ ಕೇಂದ್ರ ಗೃಹ ಸಚಿವ ಭಾವನಾತ್ಮಕ ವಿಚಾರಗಳ ಮೂಲಕ ಕೆಣಕುತ್ತಿದ್ದಾರೆ. ಆದರೆ ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡದ ಕತ್ತು ಇಸುಕುತ್ತಿದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಮ್ಮ ತಾಯಿ, ನಮ್ಮ ನಾಡು, ನಮ್ಮ ಭಾಷೆ. ದಿಲ್ಲಿ ಹಿಂದಿ ಭಾಷೆ, ಹೈಕಮಾಂಡ್ ಗುಲಾಮಗಿರಿ ಇಲ್ಲಿ ನಡೆಯಲ್ಲ. ನಮ್ಮ ಭಾಷೆ ನಮ್ಮ ಗೌರವ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದ್ರು. ಭಾರತ ಜನನಿಯ ತನುಜಾತೆ ಅಂತ ಕುವೆಂಪು ಹಾಡಿದ ನಾಡು ನಮ್ಮದು. ಬಸವರಾಜ ಬೊಮ್ಮಾಯಿ ದುಡ್ಡನ್ನ ತೆಗೆದುಕೊಂಡು ಹಿಂದಿ ಅವ್ವನ ಆಚರಣೆ ಮಾಡಲು ಹೊರಟಿದ್ದಾರೆ. ಬಸವ ಅಂದ್ರೆ ಕನ್ನಡ. ಹಿಂದಿ ಭಾಷೆ ಆಚರಣೆ ಮಾಡೋದ್ರ ವಿರುದ್ಧ ಎಲ್ಲಾ ಜಿಲ್ಲೆಯಲ್ಲಿ ಸತ್ಯಾಗ್ರಹ ಆರಂಭಿಸಿದ್ದೇವೆ ಎಂದರು.
ಯಾದಗಿರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಹಿಂದಿ ದಿವಸ ಆಚರಿಸದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ, ದೇಶದ 22 ಭಾಷೆಗಳಿಗೆ ರಾಷ್ಟ್ರೀಯ ಸ್ಥಾನಮಾನವಿದೆ. ಅದರಲ್ಲಿ ಕನ್ನಡ ಮತ್ತು ಹಿಂದಿಯೂ ಸೇರಿವೆ. ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಉಲ್ಲೇಖ ಮಾಡಿಲ್ಲ ಎಂದು ಹೇಳಿದೆ.
Post a Comment