ಸೈಬರ್‍ಕ್ರೈಂಗಳಿಂದ ಪಾರಾಗಲುಸೈಬರ್ ಸೆಕ್ಯೂರಿಟಿ ಅವಶ್ಯ

 


ತಂತ್ರಜ್ಞಾನ ದುರ್ಬಳಕೆಯಿಂದಾ ಗುವ ಸೈಬರ್ ಕ್ರೈಂಗಳಿಂದ ಪಾರಾಗಲು, ಸೈಬರ್ ಸೆಕ್ಯೂರಿಟಿ ಅತ್ಯಗತ್ಯವಾಗಿದೆ. ಹಾಗೆಯೇ ಸೈಬರ್ ಕ್ರೈಂ ಪ್ರಕರಣಗಳನ್ನು ಭೇದಿಸುವಲ್ಲಿ ಕರ್ನಾಟಕ ರಾಜ್ಯ ಪೊಲೀಸರು ದೇಶದಲ್ಲಿಯೇ ಮಾದರಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮೈಸೂರಿನ ಇಲವಾಲದಲ್ಲಿರುವ ಮೈರಾ ಸ್ಕೂಲ್ ಆಫ್ ಬಿಸಿನೆಸ್‍ನಲ್ಲಿ ‘ಸೈಬರ್‍ವರ್ಸ್ ಲ್ಯಾಬ್, ಕಾಪ್ ಕನೆಕ್ಟ್ ಅಪ್ಲಿಕೇಶನ್ ಮತ್ತು ಸೈಬರ್ ಹೈಜೀನ್’ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದೊಂದು ಹೊಸ ಜಗತ್ತು. ತಂತ್ರಜ್ಞಾನ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಪ್ರತಿ ಕ್ಷಣವೂ ಸಾವಿರಾರು ತಂತ್ರಾಂಶಗಳ ಆವಿಷ್ಕಾರ ನಡೆಯುತ್ತಿದೆ. ತಂತ್ರಜ್ಞಾನದ ಬಳಕೆ ಸಕರಾತ್ಮಕ ಹಾಗೂ ನಕರಾತ್ಮಕ ವಾಗಿಯೂ ಇರುತ್ತದೆ. ನಾವುಗಳು ಮುಖ್ಯವಾಗಿ ತಂತ್ರಜ್ಞಾನದ ಮೂಲವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ತಂತ್ರಾಂಶ ದಿಂದಾಗುವ ಒಳಿತು-ಕೆಡುಕುಗಳು ಬಳಕೆದಾರರ ಭಾವನೆಗಳು, ಅಭಿವ್ಯಕ್ತದ ಮೇಲೆ ನಿರ್ಧಾರವಾಗಿರುತ್ತವೆ. ಭಾವನೆ ಗಳಿಂದ ವಿಚಾರ, ವಿಚಾರಗಳಿಂದ ಅಕ್ಷರ, ಅಕ್ಷರದಿಂದ ಭಾಷೆ, ಭಾಷೆಯಿಂದ ಜ್ಞಾನ, ಜ್ಞಾನದಿಂದ ತಂತ್ರಜ್ಞಾನ, ತಂತ್ರಜ್ಞಾನದಿಂದ ತಂತ್ರಾಂಶ ವಾಗಿದೆ. ಆದ್ದರಿಂದ ತಂತ್ರಾಂಶಗಳ ಬಳಕೆಗೂ ಮುನ್ನಾ ತಂತ್ರಜ್ಞಾನದ ಮೂಲವನ್ನು ಅರ್ಥಮಾಡಿಕೊಳ್ಳಬೇಕು. 
ಇದಕ್ಕೆ ಮೊದಲು ನಾವುಗಳು ಮಾನವ ವಿಜ್ಞಾನವನ್ನು ಅಧ್ಯಯನ ಮಾಡಿ, ಅರ್ಥ ಮಾಡಿಕೊಳುವುದು ಅವಶ್ಯವಾಗಿದೆ ಎಂದರು. 10 ವರ್ಷದ ಹಿಂದೆ ಸೈಬರ್ ಲಾ ಬಗ್ಗೆ ಮಾತನಾಡುತ್ತಲೇ ಇರಲಿಲ್ಲ. ಡಿಜಿಟಲೀಕರಣ ಬೆಳೆದಂತೆ ಭದ್ರತೆಯ ಅಗತ್ಯವೂ ಹೆಚ್ಚಾಗುತ್ತಿದೆ. ನಾನು ಗೃಹ ಮಂತ್ರಿಯಾಗಿದ್ದಾಗ ಎಪಿಎಂಸಿ ಖಾತೆಯಿಂದ 50 ಕೋಟಿ ರೂ., ಎಗರಿಸಲಾಗಿತ್ತು. ಕೂಡಲೇ ಎಚ್ಚೆತ್ತು ನಡೆಸಿದ ಕಾರ್ಯಾಚರಣೆ ಯಿಂದಾಗಿ ಸುಮಾರು 20-25 ಕೋಟಿ ರೂ.,ನಷ್ಟು ವಾಪಸ್ಸಾಗಿದ್ದು, ಇನ್ನೂ ತನಿಖೆಗಳು ನಡೆಯುತ್ತಲೇ ಇವೆ. ಪ್ರಪಂಚದಲ್ಲೇ ಬೃಹದಾಕಾರವಾಗಿ ಬೆಳೆದಿರುವ ಡಾರ್ಕ್ ವೆಬ್ ಬೇದಿಸುವ ತಂತ್ರಾಂಶವನ್ನು ಕಂಡು ಹಿಡಿದಿದ್ದು, ದೇಶದಲ್ಲಿಯೇ ಕರ್ನಾಟಕ ಪೊಲೀಸರು ಮಾತ್ರವೇ ಈ ಸಾಧನೆ ಮಾಡಿದ್ದಾರೆ ಎಂಬುದು ಹೆಮ್ಮೆಯ ವಿಷಯವಾಗಿದೆ.
ಮೈಸೂರು ರಾಜಮನೆತನದ ಕೊಡುಗೆ: ನಾಡಿಗೆ ಅಪಾರ ಕೊಡುಗೆ ನೀಡಿರುವ ಮೈಸೂರು ಸಂಸ್ಥಾನ ಪ್ರಸ್ತುತ ದಿನಗಳಲ್ಲಿಯೂ ಜನಪರವಾಗಿದೆ ಎಂಬುದಕ್ಕೆ ಸೈಬರ್‍ವರ್ಸ್ ಲ್ಯಾಬ್ ಸ್ಥಾಪನೆ ಪ್ರತ್ಯಕ್ಷ ಉದಾಹರಣೆಯಾಗಿದೆ. ಮುಂಬರುವ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಎದುರಾಗಬಹುದಾದ ಸೈಬರ್ ಅಪರಾಧ ಪ್ರಕರಣಗಳನ್ನು ಬೇಧಿಸಲು ಪೂರ್ವ ಸಿದ್ದತೆಯ ರೂಪದಲ್ಲಿ ಸೈಬರ್‍ವರ್ಸ್ ಲ್ಯಾಬ್ ಹಾಗೂ ಕಾಪ್ ಕನೆಕ್ಟ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೈಬರ್ ಸೆಕ್ಯೂರಿಟಿಯಲ್ಲಿ 3 ಟ್ರಿಲಿಯನ್ ವಹಿವಾಟು!: ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಮಾತನಾಡಿ, ಡಿಜಿಟಲ್ ಪ್ರಪಂಚದಲ್ಲಿ ಸೈಬರ್ ಸೆಕ್ಯೂರಿಟಿಯಿಂದಲೇ 3 ಟ್ರಿಲಿಯನ್ ವಹಿವಾಟು ನಡೆಯುತ್ತಿದೆ. ವ್ಯಾಪಾರ-ವಹಿವಾಟುಗಳು ಡಿಜಿಟಲೀಕರಣವಾಗುತ್ತಿದ್ದು, ಮಾಹಿತಿ ಸಂರಕ್ಷಣೆ ಮಾಡುವುದು ಮುಖ್ಯವಾಗಿದ್ದು, ಸೈಬರ್ ಸೆಕ್ಯೂರಿಟಿ ಅಗತ್ಯವಾಗಿದೆ ಎಂದು ಹೇಳಿದರು.

ಮೈಸೂರಿನಲ್ಲಿ ಸ್ಥಾಪನೆಯಾಗಿರುವ ಸೈಬರ್‍ವರ್ಸ್ ಲ್ಯಾಬ್ ದೇಶದಲ್ಲಿಯೇ 8ನೇಯದ್ದಾಗಿದೆ. ಇಲ್ಲಿಯೇ ಸೆಮಿಕಂಡಕ್ಟರ್ ಘಟಕ ಸ್ಥಾಪನೆಯಾಗುತ್ತಿರುವ ಹಿನ್ನೆಲೆ ಮೈಸೂರು ದೇಶದ ಗಮನ ಸೆಳೆದಿದೆ. ಸೆಮಿಕಂಡಕ್ಟರ್ ಸ್ಥಾಪನೆಗಾಗಿ ರಾಜ್ಯ ಸರ್ಕಾರ 6000 ಕೋಟಿ ರೂ.ಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ಲೊಬಲ್ ಟೆಕ್ನಾಲಜಿ ಸೆಂಟರ್ ಸ್ಥಾಪನೆ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಸೈಬರ್‍ವರ್ಸ್ ಫೌಂಡೇಷನ್ ಸಲಹಾ ಮಂಡಳಿ ಅಧ್ಯಕ್ಷ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಅಧ್ಯಕ್ಷರಾದ ತ್ರಿಷಿಕಾ ಕುಮಾರಿ ಒಡೆಯರ್, ಐಟಿ-ಬಿಟಿ ಮತ್ತು ಎಸ್‍ಟಿ ಇಲಾಖೆಯ ಎಸಿಎಸ್ ಡಾ.ಇ.ವಿ.ರಮಣ ರೆಡ್ಡಿ, ಕೆಡಿಇಎಂನ ಅಧ್ಯಕ್ಷ ಬಿ.ವಿ.ನಾಯ್ಡು, ಕೆಡಿಇಎಂನ ಸಿಇಒ ಸಂಜೀವ್ ಗುಪ್ತಾ ಮತ್ತಿತರರು ಉಪಸ್ಥಿತರಿದ್ದರು.



Post a Comment

Previous Post Next Post