ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭ: ಸಚಿವ ಉಮೇಶ್ ಕತ್ತಿಗೆ ಸಂತಾಪ, ಭಾವುಕರಾದ ಸಿಎಂ ಬೊಮ್ಮಾಯಿ

 ಕರ್ನಾಟಕ ವಿಧಾನಸಭೆ ಕಲಾಪ ಆರಂಭವಾಗಿದ್ದು, ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪಿದ ಆಹಾರ, ಅರಣ್ಯ ಸಚಿವ ಉಮೇಶ್ ಕತ್ತಿಗೆ ಸಂತಾಪ ಸೂಚಿಸಲಾಯಿತು.

ವಿಧಾನಸಭೆ ಅಧಿವೇಶನ

By : Rekha.M
Online Desk

ಬೆಂಗಳೂರು: ಕರ್ನಾಟಕ ವಿಧಾನಸಭೆ ಕಲಾಪ ಆರಂಭವಾಗಿದ್ದು, ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪಿದ ಆಹಾರ, ಅರಣ್ಯ ಸಚಿವ ಉಮೇಶ್ ಕತ್ತಿಗೆ ಸಂತಾಪ ಸೂಚಿಸಲಾಯಿತು.

ಕಲಾಪ ಆರಂಭವಾಗುತ್ತಿದ್ದಂತೆಯೇ ನಿಧನರಾದ ಜನಪ್ರತಿನಿಧಿಗಳಿಗೆ ಸಂತಾಪ ಸೂಚಿಸಲಾಯಿತು. ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪಿದ ಆಹಾರ, ಅರಣ್ಯ ಸಚಿವ ಉಮೇಶ್ ಕತ್ತಿ ಮತ್ತು ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕ ಜಿ. ವಿ. ಶ್ರೀರಾಮ ರೆಡ್ಡಿ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಂಡಿದ್ದು, ಉಮೇಶ್ ಕತ್ತಿಗೆ ಸಂತಾಪ ಸೂಚಿಸುವಾಗ ಅವರು ನಡೆದು ಬಂದ ಹಾದಿಯನ್ನು ವಿವರಿಸುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾದರು.

ಉಮೇಶ್ ಕತ್ತಿ ನೆನೆದ ಸಿದ್ದರಾಮಯ್ಯ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ಸೂಚನೆ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು. 'ಉಮೇಶ್ ಕತ್ತಿ ನನಗೆ ಸಹ ಉತ್ತಮ ಸ್ನೇಹಿತರಾಗಿದ್ದರು. ನಾನು ಜೆ. ಎಚ್. ಪಟೇಲರ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾಗ ಅವರು ಸಂಪುಟದಲ್ಲಿ ಸಚಿವರಾಗಿದ್ದರು. ತೋಟಗಾರಿಕೆ ಮತ್ತು ಬಂದರು ಖಾತೆಯನ್ನು ಅವರಿಗೆ ನೀಡಲಾಗಿತ್ತು. ಆ ಖಾತೆಗಳ ಬಗ್ಗೆ ಅವರಿಗೆ ಸಮಾಧಾನವಿರಲಿಲ್ಲ. ಹಲವು ಸಲ ಈ ಕುರಿತು ಅಸಮಾಧಾನ ತೋಡಿಕೊಂಡಿದ್ದರು. ಉಮೇಶ್ ಕತ್ತಿ ಅವರಿಗೆ ಆ ಮೇಲೆ ಜೆ. ಎಚ್. ಪಟೇಲ್ ಲೋಕೋಪಯೋಗಿ ಇಲಾಖೆ ನೀಡಿದರು. ಆಗ ನಾನು ಹಣಕಾಸು ಸಚಿವನಾಗಿದ್ದೆ. ಆಗ ಉಮೇಶ್ ಕತ್ತಿ ಯಾವಾಗಲೂ ಭೇಟಿ ಮಾಡಲು ಬರುತ್ತಿದ್ದರು. ಹಣ ಬಿಡುಗಡೆ ಮಾಡಿಕೊಡಿ, ಯೋಜನೆಗಳಿಗೆ ಹಣ ನೀಡಬೇಕು ಎಂದು ಬರುತ್ತಿದ್ದರು. ಹಣಕಾಸು ಪರಿಸ್ಥಿತಿ ನೋಡಿಕೊಂಡು ನಾನು ಸಹ ಅನುದಾನ ನೀಡುತ್ತಿದ್ದೆ ಎಂದು ಸಿದ್ದರಾಮಯ್ಯ ನೆನಪು ಮಾಡಿಕೊಂಡರು.

ಅಲ್ಲದೆ ಉಮೇಶ್ ಕತ್ತಿ ಜೊತೆಗಿನ ಸ್ನೇಹದ ಬಗ್ಗೆ ನೆನೆಪು ಮಾಡಿಕೊಂಡ ಸಿದ್ದರಾಮಯ್ಯ 'ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ನಾನು ಬೆಳಗಾವಿಗೆ ಪ್ರಚಾರಕ್ಕೆ ಹೋಗಿದ್ದೆ. ಆಗ ಮನೆಗೆ ಊಟಕ್ಕೆ ಬರಲೇಬೇಕು ಎಂದು ಉಮೇಶ್ ಕತ್ತಿ ಒತ್ತಾಯಿಸಿದರು. ಆಗ ಅವರು ಬೇರೆ ಪಕ್ಷದಲ್ಲಿದ್ದರು. ಅವರ ಮನೆಗೆ ಹೋಗಿ ಊಟ ಮಾಡಿ ಎರಡು ಗಂಟೆಗಳ ಕಾಲ ಇದ್ದು, ರಾಜ್ಯ, ದೇಶದ ರಾಜಕೀಯದ ಬಗ್ಗೆ ಚರ್ಚೆ ನಡೆಸಿದ್ದೆವು. ಕತ್ತಿ ಉತ್ತಮ ವ್ಯಕ್ತಿ, ಬೆಳಗಾವಿ ರಾಜಕೀಯದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದರು. ಬೆಳಗಾವಿಯಲ್ಲಿ ಮುಂಚೂಣಿಯಲ್ಲಿರುವ ನಾಯಕರಾಗಿದ್ದರು. ಸಹಕಾರಿ ಕ್ಷೇತ್ರದಲ್ಲಿ ಅವರಿಗೆ ಅಪಾರವಾದ ಜ್ಞಾನವಿತ್ತು. ಅವರು ಆ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಉಮೇಶ್ ಕತ್ತಿ ಉತ್ತಮ ಜ್ಞಾನ ಹೊಂದಿದ್ದರು. ಆದ್ದರಿಂದ ವಿವಿಧ ಇಲಾಖೆಗಳ ಹೊಣೆಯನ್ನು ಅವರಿಗೆ ನೀಡಿದರೂ ಸಹ ಅದನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದರು ಎಂದು ನೆನಪಿಸಿಕೊಂಡರು.

ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಬೇಡ ಎಂದು ಹೇಳಿದ್ದೆ
ಬೆಳಗಾವಿ ಜಿಲ್ಲೆಯಲ್ಲು ವರ್ಣರಂಜಿತ ವ್ಯಕ್ತಿತ್ವವನ್ನು ಉಮೇಶ್ ಕತ್ತಿ ಹೊಂದಿದ್ದರು. ಎಲ್ಲಾ ಪಕ್ಷದವರ ಜೊತೆ ಉತ್ತಮ ಸ್ನೇಹ ಹೊಂದಿದ್ದ ಉಮೇಶ್ ಕತ್ತಿ ಅವರನ್ನು ಅಜಾತ ಶತ್ರು ಎಂದು ಕರೆಯಬಹುದು. ಅವರಿಗೆ ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕು ಎಂಬ ಒಲವಿತ್ತು. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ, ಅದಕ್ಕೆ ಆದ್ಯತೆ ನೀಡಬೇಕು, ಅಭಿವೃದ್ಧಿಗೆ ಹಣ ನೀಡಬೇಕು ಎಂಬ ಮಾತುಗಳನ್ನು ಆಡುತ್ತಿದ್ದರು. ಆದರೆ ಬೇರೆ ರಾಜ್ಯವಾಗಬೇಕು ಎಂದು ಕೇಳಬೇಡ ಎಂದು ಹೇಳಿದ್ದೆ. ಪ್ರತ್ಯೇಕ ರಾಜ್ಯ ಕೇಳುವುದು ಸರಿಯಾದ್ದಲ್ಲ ಎಂದು ನಾನು ಹಲವು ಬಾರಿ ಉಮೇಶ್ ಕತ್ತಿ ಅವರಿಗೆ ವೈಯಕ್ತಿಕವಾಗಿಯೂ ಹೇಳಿದ್ದೇನೆ. ವಿಧಾನಸಭೆಯಲ್ಲಿಯೂ ಹೇಳಿದ್ದೆ. ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಹೊಂದಿದ್ದರು. ಅವರನ್ನು ಕಳೆದುಕೊಂಡ ಬಳಿಕ ಉತ್ತರ ಕರ್ನಾಟಕ ಭಾಗದಕ್ಕೆ ಪ್ರಮುಖ ನಾಯಕರನ್ನು ಕಳೆದುಕೊಂಡು ಅನ್ಯಾಯವಾಗಿದೆ ಎಂದು ನಾನು ಭಾವಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಒಂದೊಳ್ಳೆ ರೂಂ ಕೊಡಿಸು ಎಂದಿದ್ದೆ: ಮಾಧುಸ್ವಾಮಿ
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ ಸಂತಾಪ ಸೂಚನೆ ನಿರ್ಣಯದ ಮೇಲೆ ಮಾನಾಡಿ, '1989 ರಿಂದ ಉಮೇಶ್ ಕತ್ತಿ ಮತ್ತು ನಾನು ಈ ಸದನದ ಸದಸ್ಯರಾದೆವು. ಸದಾ ನಗುವಿನೊಂದಿಗೆ ಮಾತನಾಡುತ್ತಿದ್ದರು. ಬೆಳಗಾವಿಯಲ್ಲಿ ಕಲಾಪ ನಡೆಯುವಾಗ ಒಂದೊಳ್ಳೆ ರೂಂ ಕೊಡಿಸು ಎಂದು ಉಮೇಶ್ ಕತ್ತಿ ಅವರನ್ನು ಕೇಳಿದೆ. ಆಗ ಅವರು ಕೈಗೆ 10 ರೂ. ಇಟ್ಟರು. ಯಾಕಪ್ಪ ನನಗೆ 10 ರೂ. ಎಂದು ಕೇಳಿದೆ. ರೂಮಿಗೆ 5 ರೂ. ಮತ್ತು 5 ರೂ.ಗೆ ಊಟ ಸಿಗತ್ತದೆ. ಬಸ್‌ ನಿಲ್ದಾಣದಲ್ಲಿ ಅಷ್ಟು ಸಾಕು ನಿನಗೆ ಹೋಗು. ನಿನಗೆ ಯಾಕೆ ರೂಮು ಎಂದು ಹೇಳುವಷ್ಟು ಆತ್ಮೀಯತೆ ಇತ್ತು ಎಂದು ಉಮೇಶ್ ಕತ್ತಿ ಅವರನ್ನು ಸಚಿವ ಮಾಧುಸ್ವಾಮಿ ನೆನಪಿಸಿಕೊಂಡರು. 

ಇಂದು ಕಾರ್ಮಿಕರ ಬಗ್ಗೆ, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಬಗ್ಗೆ ಮಾತನಾಡುವವರು ಕಡಿಮೆ. ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕ ಜಿ. ವಿ. ಶ್ರೀರಾಮ ರೆಡ್ಡಿ ಇಂಥವರ ಪರವಾಗಿ ಮಾತನಾಡುತ್ತಿದ್ದರು ಎಂದು ಜೆ. ಸಿ. ಮಾಧುಸ್ವಾಮಿ ನೆನಪಿಸಿಕೊಂಡರು.

ಕಾಂಗ್ರೆಸ್ ಸದಸ್ಯ ಆರ್. ವಿ. ದೇಶಪಾಂಡೆ ಸಚಿವ ಉಮೇಶ್ ಕತ್ತಿ ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿ, '1985ರ ಉಪ ಚುನಾವಣೆಯಲ್ಲಿ ಪ್ರಚಾರ ನಡೆಸಿದ ಬಗ್ಗೆ ನೆನಪು ಮಾಡಿಕೊಂಡರು. ಉಮೇಶ್ ಕತ್ತಿ ನಿಧನರಾದಾಗ ನಾನು ಸಾಗರದಲ್ಲಿದ್ದೆ. ಆದ ಕಾರಣ ನಾನು ಬೆಳಗಾವಿಗೆ ಹೋಗಲಾಗಲಿಲ್ಲ. ರಮೇಶ್ ಕತ್ತಿ ಜೊತೆ ನಾನು ಮಾತನಾಡಿ ಸಂತಾಪ ಹೇಳಿದೆ ಎಂದರು. ಸಚಿವ ಉಮೇಶ್ ಕತ್ತಿ ಸಂತಾಪ ಸೂಚಕ ನಿರ್ಣಯದ ಮೇಲೆ ಜೆಡಿಎಸ್ ಶಾಸಕ ಸಿ. ಎಸ್. ಪುಟ್ಟರಾಜು ಮಾತನಾಡಿ, '2004ರಲ್ಲಿ ನಾನು ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದಾಗ ಉಮೇಶ್ ಕತ್ತಿ ಅವರು ಶಾಸಕರಾಗಿರಲಿಲ್ಲ. ಅವರು ಅದೊಂದೆ ಚುನಾವಣೆಯಲ್ಲಿ ಸೋಲು ಕಂಡಿದ್ದು ಎಂದು ನೆನಪಿಸಿಕೊಂಡರು.







Post a Comment

Previous Post Next Post