ಬಳ್ಳಾರಿ: ಕಳೆದ ಮೂರು ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಕೆರೆಗಳು ಪೂರ್ಣಗೊಂಡಿವೆ.
ಮಹಾನಗರ ಪಾಲಿಕೆ ವ್ಯಾಪ್ತಿಯ ಜಾಗೃತಿ ನಗರದಲ್ಲಿರುವ ನಲ್ಲಚೆರುವು ಹತ್ತಿರದ ಕುಂಟೆಯೊಂದರಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ನೀರಿನ ಕುಂಟೆ ಭರ್ತಿಯಾಗಿ ನೀರು ಯಥೇಚ್ಛವಾಗಿ ಸಂಗ್ರಹಣೆಗೊಂಡಿದೆ. ಬುಧವಾರ ಮುಂಜಾನೆ ಸಹಜವಾಗಿ ಜನರು ಮನೆಯಿಂದ ಆಚೆ ಬಂದಾಗ ಮೊಸಳೆಯೊಂದು ನೀರಿನಲ್ಲಿ ಗೋಚರಿಸುವುದು ಕಂಡು ಆತಂಕ ಗೊಂಡಿದ್ದಾರೆ.
ಈ ಕುಂಟೆಯ ಬಳಿಯೇ ಶಾಲೆಯೊಂದಿದ್ದು ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಜೊತೆಗೆ ಟೀಚರ್ಸ್ ಕಾಲೋನಿ ಹಾಗೂ ಭಟ್ಟಿ ಪ್ರದೇಶ ಇರುವುದರಿಂದ ಇಲ್ಲಿ ದೈನಂದಿನ ಚಟುವಟಿಕೆಗಳಲ್ಲಿ ಮಗ್ನರಾಗಿರುವ ಜನರಿಗೆ ಮೊಸಳೆ ಕಾಣಿಸಿಕೊಂಡು ಆತಂಕ ಉಂಟು ಮಾಡಿದೆ. ಹತ್ತಿರದಲ್ಲಿಯೇ ಅಬ್ದುಲ್ ತವಾಫ್ ಮಸೀದಿಯೂ ಇದೆ. ಪ್ರಾರ್ಥನೆಗಾಗಿ ಆಗಮಿಸುವ ಭಕ್ತರಿಗೂ ಆತಂಕ ಎದುರಾಗಿದೆ. ಸುತ್ತ ಮುತ್ತಲೂ ಮನೆಗಳಿದ್ದು ಯಾವುದೇ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯುವ ಸಂಭವವಿದೆ. ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಮೊಸಳೆ ಹಿಡಿದು ಬೇರೆಡೆ ಸಾಗಿಸುವಂತೆ ಸ್ಥಳೀಯ ನಾಗರಿಕರು ಕೋರಿದ್ದಾರೆ. ಈ ಕುರಿತಂತೆ ಮಾಧ್ಯಮದವರು ಅರಣ್ಯ ಇಲಾಖೆ ಅಧಿಕಾರಿ ರಾಘವೇಂದ್ರ ಅವರನ್ನು ಸಂಪರ್ಕಿಸಿದ್ದು, ಕೂಡಲೇ ತಮ್ಮ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ ಮೊಸಳೆ ಹಿಡಿಯುವುದಾಗಿ ಭರವಸೆ ನೀಡಿದ್ದಾರೆ.
Post a Comment