ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಭಾನುವಾರ ಸಂಜೆಯಿಂದ ರಾತ್ರಿಯಿಡೀ ಸುರಿದ ಭಾರೀ ಮಳೆಗೆ(Bengaluru rain) ಉದ್ಯಾನನಗರಿ ಅಕ್ಷರಶಃ ನಲುಗಿ ಹೋಗಿದೆ. ಬಹುತೇಕ ಪ್ರದೇಶಗಳು ಜಲಾವೃತವಾಗಿದ್ದು ರಸ್ತೆಗಳು ಹೊಳೆಯಂತಾಗಿದ್ದವು.
ನಿನ್ನೆ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಮಾರತಹಳ್ಳಿಯ ಸುತ್ತಮುತ್ತ ಅಪಾರ್ಟ್ ಮೆಂಟ್ ಬೇಸ್ ಮೆಂಟ್ ಗೆ ನೀರು ನುಗ್ಗಿ ವಾಹನಗಳು ತೇಲುತ್ತಿರುವುದು.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಭಾನುವಾರ ಸಂಜೆಯಿಂದ ರಾತ್ರಿಯಿಡೀ ಸುರಿದ ಭಾರೀ ಮಳೆಗೆ(Bengaluru rain) ಉದ್ಯಾನನಗರಿ ಅಕ್ಷರಶಃ ನಲುಗಿ ಹೋಗಿದೆ. ಬಹುತೇಕ ಪ್ರದೇಶಗಳು ಜಲಾವೃತವಾಗಿದ್ದು ರಸ್ತೆಗಳು ಹೊಳೆಯಂತಾಗಿದ್ದವು.
ರಾತ್ರಿ 10 ಗಂಟೆಯಿಂದಲೂ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಬೆಂಗಳೂರಿನ ಹಲವು ಬಡಾವಣೆಗಳು ಮಳೆ ನೀರಿನಿಂದ ಜಲಾವೃತಗೊಂಡಿದ್ದರೆ, ಹಲಸೂರು, ಜೀವನ್ ಭೀಮಾ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬೆಳ್ಳಂದೂರ ಕ್ರಾಸ್ ಜಲಾವೃತಗೊಂಡಿದೆ.ಮೆಜೆಸ್ಟಿಕ್ ಸುತ್ತಮುತ್ತ ಕೆರೆಯಂತಾಗಿದ್ದವು.
ಕಳೆದ ರಾತ್ರಿ ಬೆಂಗಳೂರಿನಲ್ಲಿ 131.6 ಮಿಲಿ ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಮಹಾಲಕ್ಷ್ಮೀ ಲೇಔಟ್ನ ತರಕಾರಿ ಮಾರ್ಕೆಟ್ ಬಳಿ ಎರಡು ಬೃಹತ್ ಮರಗಳು ಕಾರುಗಳ ಮೇಲೆ ಬಿದ್ದಿವೆ. ಎರಡು ಕಾರುಗಳು ಸಂಪೂರ್ಣ ಜಖಂ ಆಗಿದ್ದು, ಬಿಬಿಎಂಪಿ ಅರಣ್ಯ ಸಿಬ್ಬಂದಿ ರಾತ್ರಿಯೇ ತೆರವು ಮಾಡಿದ್ದಾರೆ.ಇನ್ನು ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ವಾಹನ ಸವಾರರು ಪರದಾಟ ನಡೆಸುವಂತಾಗಿದೆ. ಜನರು ಬಿಬಿಎಂಪಿ, ಸರ್ಕಾರದ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ.
ಬೆಳ್ಳಂದೂರು ಕ್ರಾಸ್, ಸರ್ಜಾಪುರ ರಸ್ತೆಯ ರೈನ್ಬೋ ಲೇಔಟ್ ಮತ್ತೆ ಜಲಾವೃತಗೊಂಡಿದೆ. ನಿವಾಸಿಗಳು ಜಲದಿಗ್ಬಂಧನದಲ್ಲಿದ್ದಾರೆ. ರೈನ್ ಬೋ ಲೇಔಟ್ನ ಅಪಾರ್ಟ್ಮೆಂಟ್ ಬೇಸ್ಮೆಂಟ್ಗೆ ನೀರು ನುಗ್ಗಿದೆ.ಸರ್ಜಾಪುರ ರಸ್ತೆಯ ವಿಪ್ರೋ ಕಂಪನಿ ಸೇರಿ ಇಡೀ ಏರಿಯಾಗೆ ನೀರು ನುಗ್ಗಿದೆ. ಶಾಂತಿನಗರ, ಹೆಬ್ಬಾಳ ರಸ್ತೆಯಲ್ಲಿ ನೀರು ನಿಂತು ಪರಿಣಾಮ ವಾಹನ ಸವಾರರು ಪರದಾಟ ನಡೆಸುವಂತಾಗಿದೆ.
ಬೆಂಗಳೂರಿನ ಮಾರತಹಳ್ಳಿ-ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆಯ ಬಳಿ ಜಲಾವೃತಗೊಂಡ ರಸ್ತೆಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಸ್ಥಳೀಯ ಭದ್ರತಾ ಸಿಬ್ಬಂದಿ ನಿನ್ನೆ ರಕ್ಷಿಸಿದ್ದಾರೆ.ಬೆಂಗಳೂರಿನಲ್ಲಿ ಮಳೆಗೆ ಸಿಲುಕಿ ಸಂಕಷ್ಟದಲ್ಲಿರುವವರಿಗೆ ಆಹಾರ ಒದಗಿಸಲು ಅಕ್ಷಯ ಪತ್ರ ಫೌಂಡೇಶನ್ ಮುಂದೆ ಬಂದಿದೆ.
ಇನ್ನೂ 3 ದಿನ ಮಳೆ, ಹೈ ಅಲರ್ಟ್ ಘೋಷಣೆ: ಮುಂದಿನ ಮೂರು ದಿನ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರಿ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD )ಯ ಬೆಂಗಳೂರು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ. ಕಳೆದ ಎರಡು ವಾರದಿಂದ ಸಿಲಿಕಾನ್ ಸಿಟಿಯಲ್ಲಿ ದಿನ ಬಿಟ್ಟು ದಿನ ಮಳೆ ಮುಂದುವರಿದಿದೆ. ಇದೀಗ ಸೆಪ್ಟಂಬರ್ 7ರವರೆಗೆ ಸಾಧಾರಣದಿಂದ ಭಾರಿ ಮಳೆ ಸುರಿಯುವ ಲಕ್ಷಣಗಳು ಇದ್ದು, ಮೂರು ದಿನವೂ ಬೆಂಗಳೂರು 'ಯೆಲ್ಲೋ ಅಲರ್ಟ್' ಎಚ್ಚರಿಕೆ ಪಡೆದಿದೆ.
ಕೇವಲ 24 ಗಂಟೆಗಳಲ್ಲಿ ಸುಮಾರು 83 ಮಿಮೀ ಮಳೆಯಾಗಿದ್ದು, ಇದು 2014ರ ನಂತರ ನಗರದಲ್ಲಿ ಸುರಿದಿರುವ ಅತಿಹೆಚ್ಚಿನ ಮಳೆಯಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆಯು ಹೇಳಿದೆ. ಭಾನುವಾರ ಮುಂಜಾನೆ ತುಸು ಬಿಡುವುಕೊಟ್ಟಿದ್ದ ಮಳೆ ಸೂರ್ಯ ಪಶ್ಚಿಮದತ್ತ ಸಾಗಿದಂತೆ ಮತ್ತೆ ಚುರುಕಾಯಿತು.
ರಾತ್ರೀ ಇಡೀ ಸುರಿದ ಭಾರೀ ಮಳೆಗೆ ನೆಲಮಂಗಲದ ಮುಕ್ತನಾತೇಶ್ವರ ದೇವಾಲಯದ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಅಮಾನಿಕೆರೆ, ಹಾಗೂ ಬಿನ್ನಮಂಗಲದ ಕೆರೆಗಳು ಕೋಡಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಎಂಜಿ ರಸ್ತೆ ಸಂಪರ್ಕ ಕಡಿತಗೊಳಿಸಲಾಗಿದೆ ಹಾಗೂ ಜನಪ್ರಿಯ ಅಪಾರ್ಟ್‍ಮೆಂಟ್ ರಸ್ತೆ ಕೂಡ ಜಲಾವೃತಗೊಂಡಿದೆ.
ಅಮಾನಿಕೆರೆ ಹಾಗೂ ಬಿನ್ನಮಂಗಲದ ಕೆರೆಗಳು ಕೋಡಿ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಗೆ ಕೆರೆಯ ನೀರು ನುಗ್ಗಿದ್ದು, ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಅಲ್ಲದೇ ನೂರಾರು ವಾಹನಗಳು ಮಳೆಯ ನೀರಿನಲ್ಲಿ ಮುಳುಗಡೆಯಾಗಿದೆ. ನೆಲಮಂಗಲ ಬೆಂಗಳೂರು ಸರ್ವಿಸ್ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಮತ್ತೊಂದೆಡೆ ಅಡಕಮಾರನಹಳ್ಳಿಯ ಜೈನ್ ಟೆಂಪಲ್ ಕೂಡ ನಾಲ್ಕೈದು ಅಡಿ ನೀರಿನಿಂದ ಜಲಾವೃತವಾಗಿದೆ
ಮೈಸೂರು, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಹಾರಾಷ್ಟ್ರ ಮತ್ತು ಬೆಳಗಾವಿ ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಉತ್ತರ ಕರ್ನಾಟಕ ಭಾಗದ ನದಿಗಳು ತುಂಬಿ ಹರಿಯುತ್ತಿದ್ದು, ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿವೆ. ನಿನ್ನೆಯ ಭಾರೀ ಮಳೆಗೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸಹ ಪ್ರವಾಹ ರೀತಿಯ ಪರಿಸ್ಥಿತಿ ಉಂಟಾಗಿದೆ.
Post a Comment