ಸಮರ್ಥ ನಾಯಕತ್ವಕ್ಕೆ ಹೊಸ ಭಾಷ್ಯ ಬರೆದ ಶಾಸ್ತ್ರೀಜಿ


 ಮನುಷ್ಯನ ಬಾಹ್ಯಚಹರೆಗಳು ಕೆಲವೊಮ್ಮೆ ಅವನನ್ನು ತಪ್ಪಾಗಿ ಗ್ರಹಿಸುವಂತೆ ಮಾಡಿ ಬಿಡುತ್ತವೆ. ಲಾಲ್ ಬಹಾದುರ್ ಶಾಸ್ತ್ರಿ ಯವರ ವಿಚಾರದಲ್ಲೂ ಹೀಗೇ ಆಯಿತೆನ್ನಬೇಕು. ಅವರ ಕೃಶ ಹಾಗೂ ಕುಳ್ಳು ಶರೀರ, ಸೌಮ್ಯವರ್ತನೆ, ಸರಳತೆ, ನಮ್ರತೆ, ನಿರಾಡಂಬರತೆ ಮೊದಲಾದವು ಅವರನ್ನು ಬಹುತೇಕರು ಕೀಳಂದಾಜು ಮಾಡುವಂತೆ ಮಾಡಿಬಿಟ್ಟವೇನೋ ಎನಿಸುತ್ತದೆ.

ಆದರೆ ಅವರು ಭಾರತದ ಎರಡನೇ ಪ್ರಧಾನಮಂತ್ರಿ ಆಗಿದ್ದೇ ಆಗಿದ್ದು, ಅವರ ಗಟ್ಟಿಮನಸ್ಸು, ಖಚಿತ ನಿಲುವು, ಘನ ವ್ಯಕ್ತಿತ್ವ ಅನಾವರಣಗೊಂಡವು. ಹೀಗೆ ಒಂದು ಕಾಲಕ್ಕೆ ಶಾಸ್ತ್ರಿಯವರನ್ನು ತಪ್ಪಾಗಿ ಅಂದಾಜಿಸಿದ್ದವರೂ, ಅವರು ಪ್ರಧಾನಿಯಾಗಿ ನಡೆದುಕೊಂಡ ರೀತಿ, ತಳೆದ ದಿಟ್ಟ ನಿರ್ಧಾರ, ಅವರಲ್ಲಿ ಹರಳುಗಟ್ಟಿದ್ದ ಮಹೋನ್ನತ ಆದರ್ಶ ಮತ್ತು ಆತ್ಮವಿಶ್ವಾಸವನ್ನು ಮನಗಂಡು ಅವರ ಮೇಲೆ ಅಪಾರ ಗೌರವ ತಳೆಯುವಂತಾಯಿತು. 1965ರಲ್ಲಿ ಸಂಭವಿಸಿದ ಭಾರತ-ಪಾಕಿಸ್ತಾನ ಯುದ್ಧದ ವೇಳೆ ಅವರು ತಳೆದ ಸಂದರ್ಭೋಚಿತ ದಿಟ್ಟ ನಿರ್ಧಾರಗಳು, ಎದುರಾಳಿಗಳಿಗೆ ಕೊಟ್ಟ ಪ್ರತಿಯೊಂದು ಏಟು, ಕೈಗೊಂಡ ಕಠಿಣ ಕ್ರಮಗಳು ಅವರೊಬ್ಬ ಮಹಾ ಮೇಧಾವಿ, ಮುತ್ಸದ್ದಿ ಎಂಬುದನ್ನು ಜಗತ್ತಿಗೇ ಸಾರಿದವು.

ಅದರ ಒಂದೆರಡು ಝಲಕ್‌ಗಳು ಹೀಗಿವೆ: ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯಲ್ಲಿ ನಿಂತು ಭಾರತೀಯ ಸೈನಿಕರಿಗೆ ಅಭಿನಂದಿಸಿದ ಶಾಸ್ತ್ರಿಯವರು ಪಾಕಿಸ್ತಾನಕ್ಕೆ ಕಡಕ್ ಸಂದೇಶ ನೀಡುತ್ತ, ‘ನಮ್ಮ ಸೀಮಿತ ಸಂಪನ್ಮೂಲಗಳನ್ನು ಬಳಸಿ ಕೊಂಡು ಅಭಿವೃದ್ಧಿಯತ್ತ ಗಮನ ಹರಿಸಿದ್ದೇವೆ. ಗಡಿಯಲ್ಲಿ ಪ್ರಚೋದನೆ ಮಾಡುವಲ್ಲಿ, ಕಲಹದ ವಾತಾವರಣ ನಿರ್ಮಿಸುವಲ್ಲಿ ಭಾರತಕ್ಕೆ ಆಸಕ್ತಿಯಿಲ್ಲ.

ಹಾಗಾಗಿ ಸುಖಾಸುಮ್ಮನೆ ನಮ್ಮ ತಂಟೆಗೆ ಬರಬೇಡಿ. ಒಂದು ವೇಳೆ ನೀವೇನಾದರೂ ಗಡಿದಾಟಿ ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ. ನೀವು ನಮ್ಮತ್ತ ಇಟ್ಟಿಗೆ ಎಸೆದರೆ, ನಾವು ನಿಮಗೆ ಕಲ್ಲಿನಿಂದ ಹೊಡೆಯುತ್ತೇವೆ!’ ಎಂದು ಎಚ್ಚರಿಕೆ ನೀಡಿದ್ದರು.
೧೯೬೫ರ ಯುದ್ಧದ ಸಮಯದಲ್ಲಿ ಭಾರತದಲ್ಲಿ ಆಹಾರದ ಸಮಸ್ಯೆ ತಲೆದೋರಿ, ಅಮೆರಿಕದಿಂದ ಗೋಧಿಯನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ರೂಪುಗೊಂಡಿತ್ತು. ಯುದ್ಧ ನಿಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಜಾನ್ಸನ್ ಒಡ್ಡಿದ ಬೆದರಿಕೆಗೆ ಶಾಸ್ತ್ರಿಜಿ ಬಗ್ಗಲಿಲ್ಲ.

ಕುಪಿತರಾದ ಜಾನ್ಸನ್ ಭಾರತಕ್ಕೆ ಗೋಧಿ ಕಳಿಸುವುದನ್ನು ನಿಲ್ಲಿಸಿಬಿಟ್ಟರು. ಅದಕ್ಕೆ ಎದೆಗುಂದದ ಶಾಸ್ತ್ರಿ, ‘ನೀವು ಕಳಿಸುವ ಗೋಧಿಯನ್ನು ನಮ್ಮ ಹಂದಿಗಳೂ ತಿನ್ನುವುದಿಲ್ಲ, ನಿಮ್ಮ ಗೊಡ್ಡು ಬೆದರಿಕೆಗೆ ನಾವು ಬಗ್ಗುವುದೂ ಇಲ್ಲ’ ಎಂದು ದಿಟ್ಟ ಉತ್ತರ ನೀಡಿದರು. ಇದಾದ ಕೆಲವೇ ದಿನಗಳಲ್ಲಿ ಶಾಸ್ತ್ರಿಯವರು ಕೆನಡಾಕ್ಕೆ ಭೇಟಿ ನೀಡಿದರೂ, ಪಕ್ಕದ ಅಮೆರಿಕದೆಡೆಗೆ ತಿರುಗಿಯೂ ನೋಡಲಿಲ್ಲ. ಇದಲ್ಲವೇ ದೇಶಪ್ರೇಮ, ಇದಲ್ಲವೇ ಸ್ವಾಭಿಮಾನ?! ಇಂಥ ನಿದರ್ಶನಗಳನ್ನು ಓದಿದಾಗ, ನೆಹರು ನಂತರ ಶಾಸ್ತ್ರಿ ಯವರು ಭಾರತದ ‘ಕರ್ಣಧಾರತ್ವ’ ವಹಿಸಿಕೊಂಡಿದ್ದು ನಮ್ಮ ಸುದೈವವೇ ಆಗಿತ್ತು ಎನಿಸುತ್ತದೆಯಲ್ಲವೇ? ಶಾಸ್ತ್ರಿ ಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಭಾರತದ ಎದುರು ೨ ಪ್ರಮುಖ ಸವಾಲುಗಳಿದ್ದವು- ಒಂದು ಆಹಾರದ ಕೊರತೆ, ಮತ್ತೊಂದು ಪಾಕಿಸ್ತಾನದ ಕಿರುಕುಳ.

ಇವೆರಡನ್ನೂ ಎದುರಿಸಲು ಕಟಿಬದ್ಧರಾದ ಶಾಸ್ತ್ರಿ, ದೇಶದ ಗೌರವ ಮತ್ತು ಸ್ವಾಭಿಮಾನವನ್ನು ಮತ್ತೊಂದು ದೇಶದ ಬಳಿ ಅಡವಿಟ್ಟು ಭಿಕ್ಷೆ ಬೇಡಬಾರದೆಂದು ಶಪಥಗೈದರು. ಅದರನ್ವಯ, ಒಂದು ಹೊತ್ತು ಉಪವಾಸ ಮಾಡುವಂತೆ ದೇಶದ
ಜನತೆಯಲ್ಲಿ ಕೇಳಿಕೊಂಡರು. ಅವರ ವಿನಂತಿಗೆ ದೇಶದೆಲ್ಲೆಡೆ ಅಭೂತಪೂರ್ವ ಪ್ರತಿಸ್ಪಂದನ ದೊರಕಿತು. ಇದರ ಜತೆಜತೆಗೆ ಆಹಾರಧಾನ್ಯಗಳ ಬೆಲೆ ಇಳಿಸುವ ಕೆಲಸಕ್ಕೆ ಕೈಹಾಕಿದ ಅವರು ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ನೀಡಿದರು. ದೇಶದ ಗ್ರಾಮಗಳು ಅಭಿವೃದ್ಧಿಯಾಗ ಬೇಕು, ದೇಶವಾಸಿಗಳು ಸ್ವಾವಲಂಬಿಗಳಾಗಬೇಕು ಎಂದು ಬಯಸಿ ಹಸಿರುಕ್ರಾಂತಿ ಮತ್ತು ಕ್ಷೀರಕ್ರಾಂತಿಗೆ ಬಲವಾದ ಭೂಮಿಕೆಯನ್ನು ನಿರ್ಮಿಸಿದರು.

ಕೋಟ್ಯಂತರ ಭಾರತೀಯರ ಸ್ವಾಭಿಮಾನದ ಪ್ರತೀಕವಾಗಿ ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆ ಮೊಳಗಿಸಿದರು. ನೋಡನೋಡುತ್ತಿದ್ದಂತೆ ಕೃಷಿ ಮತ್ತು ಹೈನುಗಾರಿಕೆಯಲ್ಲಿ ಭಾರತ ಸ್ವಾವಲಂಬಿಯಾಯಿತು, ಕೈಗಾರಿಕಾ ಕ್ಷೇತ್ರವೂ ಗಣನೀಯ ವಾಗಿ ಚೇತರಿಸಿಕೊಂಡಿತು. ಶಾಸ್ತ್ರಿಯವರು ಒಬ್ಬ ಅಪ್ಪಟ ದೇಶಪ್ರೇಮಿಯಾಗಿದ್ದುದು, ದೇಶಕ್ಕೆ ಏನಾದರೂ ಒಳಿತು
ಮಾಡ ಬೇಕೆಂಬ ತುಡಿತ ಅವರಲ್ಲಿ ಸದಾ ಜ್ವಲಿಸುತ್ತಿದ್ದುದೇ ಇವೆಲ್ಲಕ್ಕೂ ಮೂಲಕಾರಣ.

1964ರಲ್ಲಿ ಅವರು ಭಾರತದ ಪ್ರಧಾನಮಂತ್ರಿಯಾಗಿ ಮಾಡಿದ ಸ್ವಾತಂತ್ರ್ಯೋತ್ಸವದ ಭಾಷಣದಲ್ಲೇ ಇದಕ್ಕೆ ಪುರಾವೆ ದೊರಕಿತ್ತು. ಅದರ ತುಣುಕು ಹೀಗಿದೆ: ‘ಮೊದಲಿಗೆ ನಾವು ಆಂತರಿಕವಾಗಿ ಬಲಿಷ್ಠರಾಗಬೇಕು, ಬಡತನ-ನಿರುದ್ಯೋಗಗಳನ್ನು ತೊಡೆದುಹಾಕಬೇಕು. ಆಗ ಮಾತ್ರವೇ ಜಗತ್ತು ನಮ್ಮನ್ನು ಗೌರವಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಬೇಕಿರುವುದು
ರಾಷ್ಟ್ರೀಯ ಏಕತೆ. ಕೋಮುದಳ್ಳುರಿ, ಪ್ರಾಂತೀಯ ಗಲಭೆ ಮತ್ತು ಭಾಷಾ ಸಂಘರ್ಷಗಳು ದೇಶವನ್ನು ದುರ್ಬಲಗೊಳಿಸುತ್ತವೆ. ಅದಕ್ಕಾಗಿ ನಾವು ರಾಷ್ಟ್ರೀಯ ಭಾವೈಕ್ಯವನ್ನು ರೂಪಿಸಬೇಕು. ನಿಮ್ಮೆಲ್ಲರಲ್ಲೂ ನನ್ನ ಮನವಿ ಇಷ್ಟೇ- ನಾವೆಲ್ಲರೂ ರಾಷ್ಟ್ರೀಯ ಏಕತೆಗಾಗಿ ಕೆಲಸ ಮಾಡೋಣ.

ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆಯುವ ಮೂಲಕ ಸಶಕ್ತ-ಸಮೃದ್ಧ ಭಾರತವನ್ನು ನಿರ್ಮಿಸೋಣ’ ಎಂದು ಶಾಸ್ತ್ರಿಯವರು ಜನತೆಗೆ ಸಂದೇಶ ನೀಡಿದರು. ರಾಷ್ಟ್ರ ಭಕ್ತಿಯ ಕಿಚ್ಚು ಅದಾವ ಪರಿಯಲ್ಲಿ ಅವರಲ್ಲಿ ಉಜ್ವಲವಾಗಿ ಬೆಳಗುತ್ತಿತ್ತು ಎಂಬುದು ಇದರಿಂದ ನಮಗೆ ತಿಳಿಯುತ್ತದೆ. ಸಮರ್ಥ ನಾಯಕನಿಗೆ ಇರಬೇಕಾದ ಎಲ್ಲ ಗುಣಗಳ ಆಗರವಾಗಿದ್ದ ಶಾಸ್ತ್ರಿಯವರು ಮೇಲ್ನೋಟಕ್ಕೆ ಸೌಮ್ಯಸ್ವಭಾವದವರಾಗಿ ಕಂಡರೂ ಕಠಿಣ ನಿರ್ಧಾರಗಳನ್ನು ತಳೆಯುವಾಗ ಯಾರನ್ನೂ ಕೇಳುತ್ತಿರಲಿಲ್ಲ. ಆ ಕ್ಷಣಕ್ಕೆ ಅತ್ಯಗತ್ಯವಾದ ವಿವೇಚನಾಪೂರ್ಣ ನಿರ್ಣಯವನ್ನೇ ಕೈಗೊಳ್ಳುತ್ತಿದ್ದರು.

1965ರ ಆಗಸ್ಟ್ 31ರ ಘಟನೆ ಇದಕ್ಕೊಂದು ಉದಾಹರಣೆ. ಅಂದು ರಾತ್ರಿ ಸುಮಾರು ೮ ಗಂಟೆಯ ಸಮಯ ಭಾರತೀಯ
ವಾಯುಪಡೆ, ನೌಕಾಪಡೆ ಮತ್ತು ಭೂಸೇನೆಯ ಮುಖ್ಯಸ್ಥರು ಪ್ರಧಾನಿ ಶಾಸ್ತ್ರಿಯವರ ಆಗಮನವನ್ನೇ ನಿರೀಕ್ಷಿಸುತ್ತಿದ್ದರು. ಅವರನ್ನೆಲ್ಲ ಬರಮಾಡಿಕೊಂಡ ಶಾಸ್ತ್ರಿಯವರು ಕೇವಲ ಏಳು ನಿಮಿಷಗಳಲ್ಲಿ ಸಭೆ ಮುಗಿಸಿದರು. ಹಾಗಾದರೆ ಅಲ್ಲಿ ನಡೆದಿ ದ್ದಾದರೂ ಏನು? ತಂಟೆಕೋರ ಪಾಕ್‌ಸೇನೆಯು ಛಾಂಬ್ ಸೆಕ್ಟರ್‌ನಲ್ಲಿ ಅಂತಾರಾಷ್ಟ್ರೀಯ ಗಡಿದಾಟಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲು ಇನ್ನಿಲ್ಲದ ಹುನ್ನಾರ ನಡೆಸಿತ್ತು. ಸೇನಾ ಮುಖ್ಯಸ್ಥರು ಈ ವಿಷಯವನ್ನು ಶಾಸ್ತ್ರಿಯವರಿಗೆ ಅರುಹಿದ್ದರು. ಆಗ ಶಾಸ್ತ್ರಿಯವರು, ‘ಕೂಡಲೆ ಸೇನಾದಾಳಿಗೆ ಮುಂದಾಗಿ, ಪಾಕ್‌ಸೇನೆಯನ್ನು ಹಿಮ್ಮೆಟ್ಟಿಸಿ. ವಾಯುದಾಳಿಯನ್ನೂ ನಡೆಸಿ. ಒಮ್ಮೆ ಆಕ್ರಮಣ ಶುರುವಾದರೆ ಲಾಹೋರ್‌ವರೆಗೂ ಅದು ಮುನ್ನುಗ್ಗಬೇಕು.

ಛಾಂಬ್ ಕೈಜಾರುವ ಮೊದಲು ಲಾಹೋರನ್ನು ವಶಪಡಿಸಿಕೊಳ್ಳಿ. ಜಗತ್ತಿಗೆ ಉತ್ತರಿಸುವ ಜವಾಬ್ದಾರಿ ನನ್ನದು. ಹೋರಾಟ ನಿಮ್ಮದು’ ಎಂದು ಹೇಳಿ, ಸೇನಾಮುಖ್ಯಸ್ಥರಿಗೆ ಮುಕ್ತಸ್ವಾತಂತ್ರ್ಯ ನೀಡಿ ಪ್ರಧಾನಿ ನಿವಾಸದಿಂದ ಹೊರಬಂದಿದ್ದರು. ಶಾಸ್ತ್ರಿಯವರಿಗಿದ್ದ ಗಂಡು ತೇಜಸ್ಸು ಮತ್ತು ಗುಂಡಿಗೆಗೆ ಇದು ದ್ಯೋತಕ. ಎರಡನೆಯ ಮಹಾಯುದ್ಧದ ನಂತರ ಭುಗಿಲೆದ್ದ
ಅತಿದೊಡ್ಡ ಸಂಘರ್ಷವಾಗಿತ್ತು ಅದು. ಶಾಸ್ತ್ರಿಯವರಿಗೆ ಆ ಸಮಯದಲ್ಲಿ ಭಾರತದ ರಕ್ಷಣೆಯಷ್ಟೇ ಮುಖ್ಯವಾಗಿದ್ದರಿಂದ, ಸಂಪುಟಸಭೆ ಕರೆಯಲಿಲ್ಲ, ಯಾರನ್ನೂ ಕೇಳಲಿಲ್ಲ.

ವಿಶ್ವಸಂಸ್ಥೆಯ ಕದ ತಟ್ಟಲಿಲ್ಲ, ಅಂತಾರಾಷ್ಟ್ರೀಯ ಒತ್ತಡಗಳ ಬಗ್ಗೆಯೂ ಯೋಚಿಸಲಿಲ್ಲ. ವಿಶ್ವನಾಯಕರು ಏನನ್ನುತ್ತಾರೋ ಎಂಬ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಏಳೇ ಏಳು ನಿಮಿಷಗಳಲ್ಲಿ ಎದೆ ಝಲ್ಲೆನಿಸುವ ನಿರ್ಣಯ ಕೈಗೊಂಡಿದ್ದರು. ತನ್ನನ್ನು ನಾಯಕನೆಂದು ಹೇಳಿಕೊಳ್ಳುವ ಒಬ್ಬ ಅಸಮರ್ಥನಿಗೆ ಈ ಸನ್ನಿವೇಶವನ್ನು ಹೋಲಿಸಿ ನೋಡಿ. ಆ ಕ್ಷಣಕ್ಕೆ ತಬ್ಬಿಬ್ಬಾಗಿ ಏನುಮಾಡಲೂ ತೋಚದೆ, ಸಂಪುಟಸಭೆ ಕರೆದು, ಅವರು ತಲೆಗೊಂದು ಮಾತನಾಡಿ, ಕೊನೆಗೂ ನಿರ್ಣಯಕ್ಕೆ ಬರಲು ಸಾಧ್ಯವಾಗದೆ ಜಮ್ಮು-ಕಾಶ್ಮೀರ ಶಾಶ್ವತವಾಗಿ ನಮ್ಮ ಕೈತಪ್ಪಿಹೋಗುವಂತೆ ಮಾಡಿಬಿಡುತ್ತಿದ್ದರು.

ಜಮ್ಮು ಮತ್ತು ಕಾಶ್ಮೀರ ಇನ್ನೇನು ನಮ್ಮ ಕೈವಶ ಆಗಲಿದೆ ಎನ್ನುವಷ್ಟರಲ್ಲಿ ಅಕಾಲಿಕ ಕದನ ವಿರಾಮ ಘೋಷಿಸಿ ಆ ಸಮಸ್ಯೆ ಯನ್ನು ವಿಶ್ವಸಂಸ್ಥೆಯ ಬಾಗಿಲಿಗೆ ಒಯ್ದ ನೆಹರುರನ್ನು ಒಮ್ಮೆ ಕಲ್ಪಿಸಿಕೊಂಡರೆ, ಶಾಸ್ತ್ರಿಯವರ ಎತ್ತರ ಮತ್ತು ನೆಹರುರ ಕುಬ್ಜ ವ್ಯಕ್ತಿತ್ವದ ಪರಿಚಯವಾಗುತ್ತದೆ. ಸಮರ್ಥ ನಾಯಕ ಎನಿಸಿಕೊಂಡವನು ಆಪತ್ಕಾಲದಲ್ಲಿ ಹೇಗೆ ವರ್ತಿಸುತ್ತಾನೆ ಎಂಬುದಕ್ಕೆ ಲಾಲ್ ಬಹಾದುರ್ ಶಾಸ್ತ್ರಿಯವರು ಬಹುದೊಡ್ಡ ಮಾದರಿಯಾಗಿ ನಮ್ಮೆದುರು ನಿಲ್ಲುವುದು ಹೀಗೆ.

ಜಮ್ಮು-ಕಾಶ್ಮೀರದ ವಿಷಯದಲ್ಲಿ ಶಾಸ್ತ್ರಿಯವರಿಗೆ ಖಚಿತ ನಿಲುವಿತ್ತು. ಈ ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ
ನೀಡಿದ್ದಕ್ಕೆ ಅವರಿಗೆ ತೀವ್ರ ಅಸಮಾಧಾನವಿತ್ತು. ಅದು ಭಾರತದ ಏಕತೆ ಮತ್ತು ಸಮಗ್ರತೆಗೆ ಬಹುದೊಡ್ಡ ಅಪಾಯ
ತಂದೊಡ್ಡಲಿದೆ ಎಂಬುದನ್ನು ಶಾಸ್ತ್ರಿ ಅಂದೇ ಚೆನ್ನಾಗಿ ಅರಿತಿದ್ದರು. ೧೯೬೪ರ ಸೆಪ್ಟೆಂಬರ್‌ನಲ್ಲಿ ಅಂದಿನ ಸಂಸದ
ಮಹಾವೀರ್ ಶಾಸ್ತ್ರಿಯವರು, ಸಂವಿಧಾನದ ೩೭೦ನೇ ವಿಧಿಯನ್ನು ರದ್ದುಪಡಿಸಬೇಕೆಂಬ ಪ್ರಸ್ತಾವನೆಯನ್ನು
ಲೋಕ ಸಭೆಯಲ್ಲಿ ಮಂಡಿಸಿದ್ದರು.

ಲಾಲ್ ಬಹಾದುರ್ ಶಾಸ್ತ್ರಿಯವರೂ ಇದಕ್ಕೆ ಸಿದ್ಧರಾಗಿದ್ದರು. ಆದರೆ ಕಿಂಚಿತ್ತೂ ರಾಷ್ಟ್ರಪ್ರೇಮ, ದೇಶಕಾಳಜಿಯಿಲ್ಲದ ಅಂದಿನ
ಕಾಂಗ್ರೆಸ್ಸಿಗರು ತೀವ್ರವಾಗಿ ವಿರೋಧಿಸಿದ್ದರಿಂದ ಆ ಪ್ರಸ್ತಾವನೆ ಬಿದ್ದುಹೋಯಿತು. ನಮ್ಮ ದುರದೃಷ್ಟವೆಂದರೆ, ಇಂಥ ಧೀಮಂತ ಮತ್ತು ಅಪ್ರತಿಮ ದೇಶಭಕ್ತನನ್ನು ನಾವು ಒಂದು ಅವಧಿಗಿರಲಿ, ಎರಡು ವರ್ಷವೂ ಪ್ರಧಾನಮಂತ್ರಿಯಾಗಿ ಉಳಿಸಿಕೊಳ್ಳಲಾಗಲಿಲ್ಲ. ಅಂಥ ಭಾಗ್ಯವನ್ನು ನಾವು ಪಡೆದುಬಂದಿರಲಿಲ್ಲ. ಅವರು ನಮ್ಮ ದೇಶದ ಸಾರಥ್ಯ ವಹಿಸಿದ್ದು ಒಂದೂವರೆ ವರ್ಷವಷ್ಟೇ. ಅಷ್ಟರಲ್ಲಿ ಅವರ ದಿವ್ಯ-ಭವ್ಯ ಚೇತನ ಸಂದೇಹಾಸ್ಪದವಾಗಿ ಪಂಚಭೂತಗಳಲ್ಲಿ ಲೀನವಾಗಿ ಹೋಯಿತು.

೧೯೦೪ರ ಅಕ್ಟೋಬರ್ ೨ ಅವರ ಜನ್ಮದಿನ. ಅವರ ಚಿಂತನೆಗಳನ್ನು ಮೆಲುಕುಹಾಕುವುದು ಮಾತ್ರವಲ್ಲದೆ, ಅವರಲ್ಲಿದ್ದ ರಾಷ್ಟ್ರಭಕ್ತಿ, ದಿಟ್ಟತನ ಮತ್ತು ನಾಯಕತ್ವ ಗುಣಗಳನ್ನು ನಾವೂ ಆವಾಹಿಸಿಕೊಳ್ಳಲು ಸಂಕಲ್ಪಿಸುವುದಕ್ಕೆ ಇದು ಪರ್ವಕಾಲ ವಾಗಲಿ ಎಂದು ಆಶಿಸೋಣ.

Post a Comment

Previous Post Next Post