'ಸ್ವರ್ಣ ಶಿಖರ' ಅರ್ಪಣೆ : ರಾಮಜನ್ಮ ಭೂಮಿ ಅಯೋದ್ಯೆಯಲ್ಲಿ ಗರ್ಭಗುಡಿಗೆ ಕರ್ನಾಟಕದ ಭಕ್ತರಿಂದ 'ಸ್ವರ್ಣ ಶಿಖರ'

 ‌ರಾಮಜನ್ಮಭೂಮಿ ಅಯೋಧ್ಯೆಯಲ್ಲಿ  ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ರಾಮಮಂದಿರಕ್ಕೆ ಕರ್ನಾಟಕದಿಂದ ಸ್ವರ್ಣ ಶಿಖರ ಅರ್ಪಿಸುವುದಾಗಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದ್ದಾರೆ.

                ರಾಮ ಮಂದಿರ

By : Rekha.M
Online Desk

ಉಡುಪಿ: ‌ರಾಮಜನ್ಮಭೂಮಿ ಅಯೋಧ್ಯೆಯಲ್ಲಿ  ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ರಾಮಮಂದಿರಕ್ಕೆ ಕರ್ನಾಟಕದಿಂದ ಸ್ವರ್ಣ ಶಿಖರ ಅರ್ಪಿಸುವುದಾಗಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದ್ದಾರೆ.

ರಾಮ ಮಂದಿರ ಟ್ರಸ್ಟ್‌ ಅಧ್ಯಕ್ಷ ಮಹಾಂತ ನೃತ್ಯಗೋಪಾಲ್‌ ದಾಸ್‌ಜೀ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿಗಳಾದ ಚಂಪತ್‌ ರಾಯ್‌ , ಕೋಶಾಕಾರಿ ಗೋವಿಂದಗಿರಿ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮತ್ತಿತರರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ರಾಮಮಂದಿರದ ಪ್ರಧಾನ ಗರ್ಭಗುಡಿಯ ಶಿಖರಕ್ಕೆ ರಾಮಭಕ್ತ ಹನುಮನ ಪವಿತ್ರ ನೆಲವಾಗಿರುವ ಕರ್ನಾಟಕದಿಂದ ಸ್ವರ್ಣ ಶಿಖರವನ್ನು ಅರ್ಪಿಸಬೇಕು ಎಂಬುದು ಕರ್ನಾಟಕದ ಜನರ ಇಂಗಿತವಾಗಿದೆ. ಮಂದಿರದ ವಾಸ್ತು ವಿನ್ಯಾಸಕ್ಕೆ ಅನುಗುಣವಾಗಿ ಸ್ವರ್ಣ ಶಿಖರವನ್ನು ರಾಜ್ಯದ ಭಕ್ತರ ಸಹಕಾರದಿಂದ ನಿರ್ಮಿಸಿ, ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಕರ್ನಾಟಕದ ಹಂಪಿಯಿಂದ ಸ್ವರ್ಣ ಶಿಖರ ಯಾತ್ರೆಯನ್ನು ರಾಜ್ಯಾದ್ಯಂತ ಸಂಚರಿಸಲಾಗುತ್ತದೆ. ಇದಾದ ಬಳಿಕ ಅಯೋಧ್ಯೆಗೆ ತಲುಪಿಸುವ ಇಚ್ಛೆ ಇದೆ ಎಂದು ನಾಡಿನ ಜನರ ಪರವಾಗಿ ಶ್ರೀಗಳು ಸಭೆಗೆ ತಿಳಿಸಿದರು.

ಅದರ ಜೊತೆಗೆ ಮುಂದಿನ ವರ್ಷಾಂತ್ಯಕ್ಕೆ ನಡೆಯುವ ನೂತನ ಮಂದಿರ ಸಮರ್ಪಣೆ ಹಾಗೂ ಶ್ರೀರಾಮನ ಪ್ರತಿಷ್ಠಾ ಮಹೋತ್ಸವಕ್ಕೆ ದಿನಾಂಕ ನಿಗದಿ ಪಡಿಸಿದ ಬಳಿಕ  ದೇಶದ ಭಕ್ತರನ್ನು ಈ ಉತ್ಸವಕ್ಕೆ  ಆಹ್ವಾನಿಸುವ ಸಲುವಾಗಿಯೂ ಒಂದು ಯಾತ್ರೆಯನ್ನು ಕೈಗೊಳ್ಳಬಹುದೆಂಬ ಅಭಿಪ್ರಾಯವನ್ನೂ  ಶ್ರೀಗಳು ವ್ಯಕ್ತಪಡಿಸಿದರು

ಮಂದಿರದಲ್ಲಿ ನೀಲಿ ಮಿಶ್ರಿತ ಶ್ವೇತ ಶಿಲೆಯಲ್ಲಿ ಶಿಲ್ಪಶಾಸ್ತ್ರೋಕ್ತ ರೀತಿಯಲ್ಲಿ ಶ್ರೀರಾಮನ ವಿಗ್ರಹ ನಿರ್ಮಿಸಿ ಪ್ರತಿಷ್ಠಾಪಿಸಲಾಗುವುದು ಎಂದು ಟ್ರಸ್ಟ್‌ ಸಭೆಯಲ್ಲಿ ನಿರ್ಣಯಿಸಲಾಯಿತು.‌ ಹಾಗೆಯೇ ಮಂದಿರಕ್ಕಾಗಿ ಮಹಾರಾಷ್ಟ್ರದಿಂದ ಸಾಗುವನಿ ಮರವನ್ನು ತರಿಸಿಕೊಳ್ಳುವುದು ಹಾಗೂ ಅದರ ಖರ್ಚು-ವೆಚ್ಚದ ಕುರಿತು ಚರ್ಚಿಸಲಾಯಿತು.





Post a Comment

Previous Post Next Post