ಬೆಂಗಳೂರು: ವಿಜಿನಾಪುರದ 29 ವರ್ಷದ ವ್ಯಕ್ತಿಯೊಬ್ಬ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸಬ್ ಇನ್‌ಸ್ಪೆಕ್ಟರ್ ತನ್ನನ್ನು 12 ದಿನಗಳಿಗೂ ಹೆಚ್ಚು ಕಾಲ ಅಕ್ರಮವಾಗಿ ಬಂಧಿಸಿ, ಮೂರು ದಿನಗಳ ಕಾಲ ತನ್ನ ಖಾಸಗಿ ಅಂಗಗಳಿಗೆ ವಿದ್ಯುತ್ ಶಾಕ್ ನೀಡುವ ಮೂಲಕ ಥರ್ಡ್ ಡಿಗ್ರಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾನೆ.
ವಿಜಿನಾಪುರದ ಆರ್‌ಆರ್ ಲೇಔಟ್ ನಿವಾಸಿ ಎ.ರಾಜೇಶ್ ಅವರು ಈ ಸಂಬಂಧ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಮತ್ತು ಬೆಂಗಳೂರು ಪೊಲೀಸ್ ಮುಖ್ಯಸ್ಥ ಪ್ರತಾಪ್ ರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ.
ರಾಮಮೂರ್ತಿನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಪಿಎಸ್‌ಐ ತಾನು ಮಾಡದ ಅಪರಾಧವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ರಾಜೇಶ್ ತಮ್ಮ ಎರಡು ಪುಟಗಳ ದೂರಿನಲ್ಲಿ ಆರೋಪಿಸಿದ್ದಾರೆ.
ಕೆಲ ತಿಂಗಳ ಹಿಂದೆ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ತಾನು ಭಾಗಿಯಾಗಿರುವ ಶಂಕೆಯ ಮೇರೆಗೆ ಪೊಲೀಸರು ಸೆಪ್ಟೆಂಬರ್ 4 ರಿಂದ 15ರವರೆಗೆ ನನ್ನನ್ನು ಬಂಧಿಸಿದ್ದರು. ಹೀಗಾಗಿ ಇಬ್ಬರು ಆರೋಪಿಗಳು ಮತ್ತು ಇತರ ಆರು ಪೊಲೀಸರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಅವರು ಒತ್ತಾಯಿಸಿದ್ದಾರೆ.
ನನಗೆ ಚಿತ್ರಹಿಂಸೆ ನೀಡಿದ ಬಳಿಕ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಬೈಕ್‌ನಿಂದ ಬಿದ್ದು ಗಾಯವಾಗಿದೆ ಎಂದು ವೈದ್ಯರಿಗೆ ಹೇಳುವಂತೆ ಒತ್ತಾಯಿಸಿದ್ದಾರೆ ಎಂದು ರಾಜೇಶ್ ಆರೋಪಿಸಿದ್ದಾರೆ.
ಈಮಧ್ಯೆ, ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಭೀಮಾಶಂಕರ್ ಎಸ್ ಗುಳೇದ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಈ ಆರೋಪಗಳನ್ನು ನಿರಾಕರಿಸಿದ್ದು, ದೂರುದಾರರು ಕೊಲೆ ಯತ್ನ ಪ್ರಕರಣದಲ್ಲಿ ಬೇಕಾಗಿದ್ದಾರೆ. ಪೊಲೀಸರ ವಿರುದ್ಧ ಸುಳ್ಳು ಮತ್ತು ಆಧಾರ ರಹಿತ ಆರೋಪಗಳನ್ನು ಮಾಡಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದಿದ್ದಾರೆ.
ಆರೋಪಿಗೆ ಬಂಧನ ಭೀತಿ
ಸದರಿ ವ್ಯಕ್ತಿ ಕೊಲೆ ಯತ್ನ ಪ್ರಕರಣದಲ್ಲಿ ಬೇಕಾಗಿದ್ದಾನೆ. ಬಂಧನದ ಭೀತಿಯಿಂದ ಪೊಲೀಸರ ವಿರುದ್ಧ ಆರೋಪ ಮಾಡುತ್ತಿದ್ದಾನೆ. 2018 ರಲ್ಲಿ ರಾಮಮೂರ್ತಿ ನಗರ ಪೊಲೀಸರು ಚಾರ್ಜ್ ಶೀಟ್ ಮಾಡಿರುವ ಜಗನ್ ಎಂದು ಗುರುತಿಸಲಾದ ಇನ್ನೊಬ್ಬ ವ್ಯಕ್ತಿ ಈತನನ್ನು ಬೆಂಬಲಿಸುತ್ತಿದ್ದಾನೆ ಎಂದು ಗುಳೇದ್ ಹೇಳಿದರು. ರಾಮಮೂರ್ತಿನಗರ ಪೊಲೀಸ್ ಇನ್ಸ್‌ಪೆಕ್ಟರ್ ಮೆಲ್ವಿನ್ ಫ್ರಾನ್ಸಿಸ್ ಅವರನ್ನು ಸಂಪರ್ಕಿಸಿದಾಗ, ಪೊಲೀಸರ ವಿರುದ್ಧ ಮಾಡಿರುವ ಆರೋಪಗಳು ಆಧಾರರಹಿತವಾಗಿವೆ. ದೂರುದಾರರು ಮೂರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದಾರೆ ಮತ್ತು ಬಂಧನದಿಂದ ತಪ್ಪಿಸಿಕೊಳ್ಳಲು ಮಾರ್ಗಗಳನ್ನು ಹುಡುಕುತ್ತಿದ್ದಾರೆ ಎಂದು ಅವರು ಹೇಳಿದರು.
Post a Comment