ನವದೆಹಲಿ: ನವದೆಹಲಿಯಲ್ಲಿ ನವೀಕರಿಸಲಾದ “ಕರ್ತವ್ಯ ಪಥ’ದ(ಸೆಂಟ್ರಲ್ ವಿಸ್ತಾ ಅವೆನ್ಯೂ) ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ.
ಪ್ರಧಾನ ಮಂತ್ರಿಗಳ ನೂತನ ಕಚೇರಿ ಸೇರಿದಂತೆ ಪ್ರಧಾನಿ ಕಾರ್ಯಾಲಯ ಗಳನ್ನು ಒಳಗೊಂಡಿರುವ “ಕರ್ತವ್ಯ ಪಥ’ವನ್ನು ಗುರುವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತಾ ಪುನರ್ ಅಭಿವೃದ್ಧಿ ಯೋಜನೆಯ ಮೊದಲ ಕಾಮಗಾರಿ ಇದಾಗಿದೆ.
“ಕರ್ಥವ್ಯ ಪಥ’ದ ಸುತ್ತಮುತ್ತಲಿನ ಉದ್ಯಾನಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. 101 ಎಕರೆ ಜಾಗದಲ್ಲಿ ಹುಲ್ಲುಹಾಸು ಅಭಿವೃದ್ಧಿಪಡಿಸಲಾಗಿದೆ. ಈ ಆವರಣದಲ್ಲಿ ಒಟ್ಟು 4,087 ಮರಗಳು ಇವೆ. ಸುತ್ತಲಿನ ತೋಟಗಳಲ್ಲಿ ಗಿಡಗಳು ಮತ್ತು ಹುಲ್ಲನ್ನು ಬೆಳಸಲಾಗಿದೆ. ನವದೆಹಲಿಯ ವಿಜಯ್ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗಿನ ನವೀಕರಿಸಲಾದ ಮಾರ್ಗದಲ್ಲಿ ನಡಿಗೆದಾರರಿಗೆ ಅನುಕೂಲವಾಗುವಂತೆ 4 ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿದೆ.
300 ಸಿಸಿಟಿವಿಗಳ ಅಳವಡಿಕೆ:
ಇಡೀ ಆವರಣದಲ್ಲಿ 422 ಕೆಂಪು ಗ್ರಾನೈಟ್‌ನ ಆಸನಗಳನ್ನು ನಿರ್ಮಿಸಲಾಗಿದೆ. 300 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. 1,117 ಕಾರುಗಳು ಮತ್ತು 35 ಬಸ್‌ಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. 50 ಮಂದಿ ಭದ್ರತಾ ಸಿಬ್ಬಂದಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸ ಲಿದ್ದಾರೆ.
16.5 ಕಿ.ಮೀ. ನಡಿಗೆ ಪಥ ನಿರ್ಮಾಣ:
ಕರ್ತವ್ಯ ಪಥ ಹಾಗೂ ಸುತ್ತಲೂ ಕೆಂಪು ಬಣ್ಣದ ಗ್ರಾನೈಟ್‌ನಿಂದ 16.5 ಕಿ.ಮೀ. ನಡಿಗೆ ಪಥ ನಿರ್ಮಿಸಲಾಗಿದೆ. ಮಾರ್ಗದುದ್ದಕ್ಕೂ 133 ಬೀದಿ ದೀಪಗಳು ಹಾಗೂ ಉದ್ಯಾನವನಗಳಲ್ಲಿ 800ಕ್ಕೂ ಹೆಚ್ಚು ಬೀದಿ ದೀಪಗಳನ್ನು ಅಳವಡಿಸಲಾಗಿದೆ.
74 ಐತಿಹಾಸಿಕ ಕಂಬಗಳು ಮೇಲ್ದರ್ಜೆಗೆ:
ಕರ್ಥವ್ಯ ಪಥದ ಮಾರ್ಗದುದ್ದಕ್ಕೂ 74 ಐತಿಹಾಸಿಕ ಕಂಬಗಳನ್ನು ಮೇಲ್ದರ್ಜೆಗೇರಿಸಲಾಗಿದೆ.
ಮಾರ್ಗ ಬದಲಾವಣೆ:
ಸೆ.8ರಂದು ಕರ್ಥವ್ಯ ಪಥದ ಉದ್ಘಾಟನೆ ಹಿನ್ನೆಲೆಯಲ್ಲಿ ಆ ಮಾರ್ಗದ ಸುತ್ತಮುತ್ತಲಿನ ರಸ್ತೆಗಳನ್ನು ಅಂದು ಸಂಜೆ 6ರಿಂದ 9 ಗಂಟೆವರೆಗೆ ಬಂದ್ ಮಾಡಲಾಗಿದೆ.
ಗುರುವಾರದಂದು ಕರ್ಥವ್ಯ ಪಥದ ಸುತ್ತಮುತ್ತಲಿನ ಸರ್ಕಾರಿ ಕಚೇರಿಗಳಿಗೆ ಮಧ್ಯಾಹ್ನ 4 ಗಂಟೆ ನಂತರ ರಜೆ ಘೋಷಿಸಲಾಗಿದೆ.
Post a Comment