ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಮುಂಬರುವ ವರ್ಷವೂ 3 ಸಾವಿರ ಕೋಟಿ ರು. ಹಂಚಿಕೆ ಮಾಡಲಾಗುವುದು.
ಸಿಎಂ ಬೊಮ್ಮಾಯಿಕಲಬುರಗಿ: ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಮುಂಬರುವ ವರ್ಷವೂ 3 ಸಾವಿರ ಕೋಟಿ ರು. ಹಂಚಿಕೆ ಮಾಡಲಾಗುವುದು. ಕಲಬುರಗಿಯಲ್ಲಿ ಜವಳಿ ಪಾರ್ಕ್‌ಗೆ ಶೀಘ್ರ ಅಡಿಗಲ್ಲು ಹಾಕಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಮಂಡಳಿಗೆ ಹಣ ಘೋಷಣೆ ಮಾಡಿತ್ತು. ಆದರೆ ಬಿಡುಗಡೆ ಮಾಡಿರಲಿಲ್ಲ. ನಮ್ಮದು ನುಡಿದಂತೆ ನಡೆಯುವ ಸರ್ಕಾರವಾಗಿದ್ದು, ಘೋಷಿತ ಅನುದಾನ ಬಿಡುಗಡೆ ಮಾಡಿದ್ದೇವೆ ಎಂದರು.
ಕಲಬುರಗಿ, ವಿಜಯಪುರದಲ್ಲಿ ಜವಳಿ ಪಾರ್ಕ್ ಆರಂಭಿಸಲಾದ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಎರಡೂ ಕಡೆ ಪಾರ್ಕ್ ಆರಂಭಕ್ಕೆ ಮಂಜೂರಾತಿ ನೀಡಲಿದ್ದು, ಶೀಘ್ರ ಕಲಬುರಗಿಗೆ ಮತ್ತೆ ಬಂದು ಅಡಿಗಲ್ಲು ಹಾಕಲಿದ್ದೇನೆ ಎಂದರು.
ಬೀದರ್-ಶ್ರೀರಂಗಪಟ್ಟಣ ಹೆದ್ದಾರಿಯು ಬಳ್ಳಾರಿಯಿಂದ ಕಲಬುರಗಿವರೆಗೆ ಅಭಿವೃದ್ಧಿ ಆಗಿಲ್ಲ. ಇದನ್ನು ಸರ್ಕಾರಿ, ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡು ನಾಲ್ಕು ಪಥದ ರಸ್ತೆಯನ್ನು ನಿರ್ಮಿಸಲಾಗುವುದು. ಇದರಿಂದ ಕಲಬುರಗಿಯಿಂದ ಬಳ್ಳಾರಿ ಮೂಲಕ ಬೆಂಗಳೂರಿಗೆ ತೆರಳುವವರಿಗೆ ಸಾಕಷ್ಟು ಸಮಯ ಉಳಿತಾಯವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಎರಡು ಹೊಸ ಯೋಜನೆಗಳನ್ನು ಘೋಷಿಸಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಪ್ರತಿ ಗ್ರಾಮದ ಒಂದೊಂದು ಸ್ತ್ರೀ ಶಕ್ತಿ ಸಂಘಗಳಿಗೆ ತಲಾ 10 ಲಕ್ಷ ರು. ನೆರವು ನೀಡಲಾಗುವುದು. ಯುವ ಶಕ್ತಿ ಯೋಜನೆಯಡಿ ಪ್ರತಿ ಗ್ರಾಮದಲ್ಲಿ ಎರಡು ಯುವ ಶಕ್ತಿ ಸಂಘಗಳಿಗೆ 1 ಲಕ್ಷ ನೆರವು ನೀಡಲಾಗುವುದು. ಜೊತೆಗೆ ಇವರು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲು ಒಪ್ಪಂದ ಮಾಡಿಕೊಳ್ಳಲಾಗುವುದು ಎಂದರು.
ಕಲಬುರಗಿಯಲ್ಲಿ ಜವಳಿ ಪಾರ್ಕ್, ಬೀದರ್ ನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಸಂಶೋಧನೆಗೆ ಸಿಪೆಟ್, ರಾಯಚೂರು, ಕೊಪ್ಪಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣ, ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಹಾಗೂ ಯಾದಗಿರಿಯಲ್ಲಿ ಫಾರ್ನಾಸ್ಯುಟಿಕಲ್ ಕೈಗಾರಿಕೆ ಆರಂಭಿಸಲಾಗುವುದು ಎಂದರು.
Post a Comment