ಹುತಾತ್ಮ ಅರಣ್ಯ ಸಿಬ್ಬಂದಿ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭಾನುವಾರ ಘೋಷಣೆ ಮಾಡಿದ್ದಾರೆ.
ಸಿಎಂ ಬೊಮ್ಮಾಯಿ
ಬೆಂಗಳೂರು: ಹುತಾತ್ಮ ಅರಣ್ಯ ಸಿಬ್ಬಂದಿ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭಾನುವಾರ ಘೋಷಣೆ ಮಾಡಿದ್ದಾರೆ.
ಭಾನುವಾರ ಅರಣ್ಯ ಹುತಾತ್ಮರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹುತಾತ್ಮ ಸಿಬ್ಬಂದಿಗೆ ಮೊದಲು 20 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಇದನ್ನು ಬಿ.ಎಸ್.ಯಡಿಯೂರಪ್ಪನವರು 30 ಲಕ್ಷಕ್ಕೆ ಏರಿಕೆ ಮಾಡಿದರು. ಇನ್ಮುಂದೆ 50 ಲಕ್ಷ ರೂ. ಪರಿಹಾರ ನೀಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಅಂತೆಯೇ ಅರಣ್ಯ ಇಲಾಖೆ ನೇಮಕಾತಿ ಸಂಬಂಧಿಸಿದ ಎಲ್ಲ ಕೆಲಸ ಸುಲಭವಾಗಿ ಮಾಡುತ್ತೇವೆ. ಅರಣ್ಯವನ್ನು ನೀವು ರಕ್ಷಣೆ ಮಾಡಿ, ನಾವು ನಿಮ್ಮನ್ನ ರಕ್ಷಿಸುತ್ತೇವೆ. ಇಕೋ ಸೆನ್ಸಿಟಿವ್ ವಲಯಗಳ ಹೆಚ್ಚಳಕ್ಕೆ ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತದೆ. ಹೊಸ ವಿಧಾನದಲ್ಲಿ ನೈಸರ್ಗಿಕ ಸಂಪತ್ತು ರಕ್ಷಿಸುವ ಕೆಲಸ ಆಗ್ತಿದೆ. ಇಚ್ಛಾಶಕ್ತಿ ತೋರಿದ್ರೆ ಅರಣ್ಯ ಭೂಮಿ ವಲಯ ಹೆಚ್ಚಿಸಬಹುದು ಎಂದು ಸಿಎಂ ಹೇಳಿದರು.
ಶೇ.21% ರಿಂದ 30% ಅರಣ್ಯ ವಲಯ ಹೆಚ್ಚಳ ಮಾಡಬೇಕು ಅಂತ ಗುರಿ ಇಟ್ಟುಕೊಳ್ಳಲಾಗಿದೆ. ಸ್ವಲ್ಪ ಇಚ್ಚಾಶಕ್ತಿ ಪ್ರದರ್ಶನ ಮಾಡಿದರೆ ಅರಣ್ಯ ಭೂಮಿ ವಲಯ ಹೆಚ್ಚಳ ಮಾಡಬಹುದು. ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗಳ ತಡೆಗೆ ಕ್ರಮಕೊಳ್ಳಲಾಗುವುದು. ಕಾಡಾನೆಗಳ ಹಾವಳಿಯಿಂದ ಪ್ರಾಣಹಾನಿ, ಬೆಳೆ ನಷ್ಟ ಆಗಿದೆ. ಕಾಡಾನೆ ಹಾವಳಿ ತಡೆಯಲು ಹೊಸ ವಿಧಾನ ಬಳಕೆಗೆ ಅನುದಾನ ನೀಡಲಾಗುತ್ತಿದೆ. ರಾಜ್ಯ ಸರ್ಕಾರದಿಂದ 100 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಹೇಳಿದರು.
ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಸಂರಕ್ಷಿಸಲು ವಿಶೇಷ ಯೋಜನೆ ರೂಪಿಸಲಾಗಿದೆ. ಮಾನವ-ಪ್ರಾಣಿ ಸಂಘರ್ಷವನ್ನು ಕಡಿಮೆ ಮಾಡಲು ಅರಣ್ಯ ಇಲಾಖೆ ಶ್ರಮಿಸಬೇಕು. ಗರಿಷ್ಠ ಸಂಖ್ಯೆಯ ಘಟನೆಗಳು ಆನೆಗಳನ್ನು ಒಳಗೊಂಡಿರುತ್ತವೆ ಮತ್ತು ಜನರನ್ನು ರಕ್ಷಿಸುವ ವ್ಯವಸ್ಥೆಯನ್ನು ರೂಪಿಸಲು ಸರ್ಕಾರವು 100 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಬಂಡೀಪುರದಲ್ಲಿ ಬೇಲಿ ಹಾಕುವ ಪ್ರಯೋಗ ನಡೆಯುತ್ತಿದೆ ಎಂದರು.
ಅರಣ್ಯ ನಮ್ಮ ಬದುಕಿನ ಒಂದು ಭಾಗ
ಅರಣ್ಯ ರಕ್ಷಣೆ ಮಾಡುತ್ತ ಹುತಾತ್ಮರಾದ ಎಲ್ಲರಿಗೂ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅರಣ್ಯ ಕೇವಲ ನಿಸರ್ಗದ ಭಾಗವಲ್ಲ, ನಮ್ಮ ಬದುಕಿನ ಒಂದು ಭಾಗ. ಅರಣ್ಯ ಮತ್ತು ನಾಗರೀಕತೆಗೆ ಸಂಬಂಧ ಇಲ್ಲ ಎನ್ನುವ ರೀತಿ ನಾವು ವರ್ತಿಸುತ್ತಿದ್ದೇವೆ. ನಮ್ಮೆಲ್ಲರ ಪುಣ್ಯ ಭಾಗ ನಮ್ಮ ದೇಶದಲ್ಲಿ ಅರಣ್ಯ ಇದೆ ಬೆಳೆಸುವುದಕ್ಕೆ ಅವಕಾಶವಿದೆ. ಪಶ್ಚಿಮ ಘಟ್ಟ ಇಲ್ಲದೆ ನಮ್ಮ ರಾಜ್ಯ ಊಹಿಸಲು ಸಾಧ್ಯವಿಲ್ಲ. ಪಶ್ಚಿಮ ಘಟ್ಟ ಇಲ್ಲದಿದ್ದರೆ ಸಮುದ್ರದ ನೀರು ಮಳೆಯಾಗಿ ನಮ್ಮನ್ನು ತಲುಪುತ್ತಿರಲಿಲ್ಲ. ರಾಜ್ಯದ ಉದ್ದಗಲಕ್ಕೂ ನೀರಿನ ಸಂಪತ್ತು ನೋಡುವುದಕ್ಕೆ ಪಶ್ಚಿಮ ಘಟ್ಟದಿಂದಲೇ ಸಾಧ್ಯವಾಗಿದೆ. ವಾತಾವರಣ ಬದಲಾಗುತ್ತಿದೆ, ಪ್ರವಾಹಗಳು ಬರುತ್ತಿವೆ. ಮಳೆಯ ಸಮಯ ಪ್ರಮಾಣ ಬದಲಾಗಿದೆ. ಪರಿಸರದಲ್ಲಿನ ಅಸಮತೋಲನ ನಾವು ಸರಿ ಮಾಡಬೇಕಿದೆ. ಇದು ಅನಿವಾರ್ಯ, ಭವಿಷ್ಯದ ದೃಷ್ಟಿಯಿಂದ ಅಗತ್ಯ ಇದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡದಿದ್ದರೆ ಮೋಸ ಮಾಡಿದಂತ್ತಾಗುತ್ತದೆ. ಮುಂದಿನ ಪೀಳಿಗೆಯ ಹಕ್ಕನ್ನ ಕಸಿದುಕೊಂಡಂತಾಗುತ್ತದೆ. ಇಂಥ ಸಂದರ್ಭದಲ್ಲಿ ಅರಣ್ಯ ರಕ್ಷಕರು ಶೌರ್ಯ ತೋರಿದ್ದಾರೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
Post a Comment