ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಚುನಾವಣಾ ಆಯೋಗ ಕೇಂದ್ರ ಕಾನೂನು ಸಚಿವಾಲಯ ಹಾಗೂ ಸಚಿವ ಕಿರಣ್ ರಿಜಿಜು ಅವರಿಗೆ ಪತ್ರ ಬರೆದಿದ್ದು, ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆ ಮಿತಿಗೊಳಿಸುವ ಪ್ರಸ್ತಾಪ ಮಾಡಿದೆ.
ಭಾರತೀಯ ಚುನಾವಣಾ ಆಯೋಗ
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಚುನಾವಣಾ ಆಯೋಗ ಕೇಂದ್ರ ಕಾನೂನು ಸಚಿವಾಲಯ ಹಾಗೂ ಸಚಿವ ಕಿರಣ್ ರಿಜಿಜು ಅವರಿಗೆ ಪತ್ರ ಬರೆದಿದ್ದು, ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆ ಮಿತಿಗೊಳಿಸುವ ಪ್ರಸ್ತಾಪ ಮಾಡಿದೆ. ಚುನಾವಣಾ ನಿಧಿಯನ್ನು ಕಪ್ಪು ಹಣದಿಂದ ಮುಕ್ತಗೊಳಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ.
ಯಾವುದೇ ರಾಜಕೀಯ ಪಕ್ಷವು ಪಡೆಯುವ 2,000 ರುಗಿಂತಲೂ ಹೆಚ್ಚಿನ ಮೊತ್ತದ ದೇಣಿಗೆಯನ್ನು ಅನಾಮಧೇಯವಾಗಿ ಉಳಿಸುವಂತಿಲ್ಲ. ದೇಣಿಗೆ ಕೊಟ್ಟವರು ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಭಾರತೀಯ ಚುನಾವಣಾ ಆಯೋಗವು ಪ್ರಕಟಿಸಿರುವ ಕರಡು ತಿದ್ದುಪಡಿ ದಾಖಲೆಯು ಸಲಹೆ ಮಾಡುತ್ತದೆ.
ಈ ಸಂಬಂಧ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಕಾನೂನು ಸಚಿವ ಕಿರಣ್ ರಿಜಿಜು ಅವರಿಗೆ ಪತ್ರ ಬರೆದಿದ್ದು, ‘ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹಹ ವ್ಯವಸ್ಥೆ ಶುದ್ಧೀಕರಿಸಲು’ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಕುರಿತು ಪ್ರಸ್ತಾಪಿಸಿದ್ದಾರೆ.
‘ಮಾನ್ಯತೆ ಪಡೆಯದ ಪಕ್ಷಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಈ ಮೊದಲು ಚುನಾವಣಾ ಅಯೋಗವು ಮುಂದಾಗಿತ್ತು. ಇದೀಗ ಆಯೋಗವು ಮಾನ್ಯತೆ ಪಡೆದ ಪಕ್ಷಗಳ ಕಾರ್ಯವೈಖರಿಯನ್ನು ಸುಧಾರಿಸಲು ಮತ್ತು ಕಪ್ಪು ಹಣ ಹಾಗೂ ತೆರಿಗೆ ವಂಚನೆಯ ವಿರುದ್ಧ ಶಿಸ್ತುಕ್ರಮ ರೂಪಿಸಲು ಮುಂದಾಗಿದೆ’ ಎಂದು ಹೇಳಲಾಗಿದೆ.
20,000 ರು. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ದೇಣಿಗೆಗಳ ವಿವರಗಳನ್ನು ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ತಿಳಿಸಬೇಕು ಎಂಬ ಷರತ್ತು ಈಗಾಗಲೇ ಚಾಲ್ತಿಯಲ್ಲಿದೆ. ಹಣ ಸ್ವೀಕರಿಸಿದ ಮಾಹಿತಿಯ ಜೊತೆಗೆ ಪಕ್ಷದ ಯಾವ ಘಟಕವು ಈ ಮೊತ್ತವನ್ನು ಸ್ವೀಕರಿಸಿದದೆ ಎಂಬುದನ್ನೂ ಬಹಿರಂಗಪಡಿಸಬೇಕು ಎಂದು ಆಯೋಗವು ಹೇಳಿತ್ತು.
ಚುನಾವಣಾ ಉದ್ದೇಶಕ್ಕಾಗಿ ಪ್ರತಿಯೊಬ್ಬ ಅಭ್ಯರ್ಥಿಯು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯಬೇಕೆಂದು ಚುನಾವಣಾ ಆಯೋಗವು ಶಿಫಾರಸು ಮಾಡಿದೆ. ‘ಒಬ್ಬ ಅಭ್ಯರ್ಥಿ ಮೊದಲು ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ನಂತರ ಸಂಸದನಾಗಿ ಸ್ಪರ್ಧಿಸಲು ನಿರ್ಧರಿಸಿದರೆ, ಎರಡು ಪ್ರತ್ಯೇಕ ಖಾತೆಗಳನ್ನು ತೆರೆಯಬೇಕಾಗುತ್ತದೆ.
ಸ್ಪರ್ಧಿಸುವ ಪ್ರತಿ ಚುನಾವಣೆಗೆ, ಅಭ್ಯರ್ಥಿಯು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯಬೇಕು. ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಕಣ್ಣಿರಿಸಲು ಹಾಗೂ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಆಯೋಗಕ್ಕೆ ಈ ಕ್ರಮವು ಸಹಕಾರಿಯಾಗುತ್ತದೆ ಎಂಬ ಅಭಿಪ್ರಾಯಕ್ಕೆ ಅಧಿಕಾರಿಗಳು ಬಂದಿದ್ದಾರೆ.
Post a Comment