ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ನಿವಾಸಕ್ಕೆ ಕಾಂಗ್ರೆಸ್ ಪಕ್ಷದಿಂದ ದೋಸೆ ಕಳಿಸುವ ಅಭಿಯಾನಕ್ಕೆ ಸಂಸದರು ವ್ಯಂಗ್ಯವಾಡಿದ್ದಾರೆ.
ತೇಜಸ್ವಿ ಸೂರ್ಯ
ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ನಿವಾಸಕ್ಕೆ ಕಾಂಗ್ರೆಸ್ ಪಕ್ಷದಿಂದ ದೋಸೆ ಕಳಿಸುವ ಅಭಿಯಾನಕ್ಕೆ ಸಂಸದರು ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಸಂಸದ ತೇಜಸ್ವಿ ಸೂರ್ಯ, "ನನ್ನ ಮನೆಗೆ ಮಸಾಲೆ ದೋಸೆಯನ್ನು ಕಳಿಸುವುದಾಗಿ ನೆನ್ನೆ ಕಾಂಗ್ರೆಸ್ ಪಕ್ಷ ಘೋಷಿಸಿತ್ತು". ಈ ಘೋಷಣೆಯಾಗಿ 24 ಗಂಟೆಗಳು ಕಳೆದಿವೆ. ಆದರೆ ನನಗಿನ್ನೂ ದೋಸೆ ತಲುಪಿಲ್ಲ. ಕಾಂಗ್ರೆಸ್ ನವರು ಇದರಲ್ಲೂ ಹಗರಣ ನಡೆಸಿದ್ದಾರೆ. ದೋಸೆಯನ್ನು ಸರಿಯಾಗಿ ತಲುಪಿಸಲು ಸಾಧ್ಯವಾಗದವರು, ಒಳ್ಳೆಯ ಆಡಳಿತವನ್ನು ಜನರಿಗೆ ತಲುಪಿಸುವ ಹಗಲುಗನಸು ಕಾಣುತ್ತಿದ್ದಾರೆ" ಎಂದು ತೇಜಸ್ವಿ ಸೂರ್ಯ ಕಾಂಗ್ರೆಸ್ ಅಭಿಯಾನದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದು ಹಲವು ಪ್ರದೇಶಗಳು ಜಲಾವೃತಗೊಂಡಿದ್ದ ವೇಳೆ ಸಂಸದ ತೇಜಸ್ವಿ ಸೂರ್ಯ ಪದ್ಮನಾಭನಗರದ ಹೋಟೆಲ್‌ನಲ್ಲಿ ಮಸಾಲೆ ದೋಸೆ ತಿನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಜನರು ಸಂಕಷ್ಟ ಎದುರಿಸುತ್ತಿರಬೇಕಾದರೆ, ಸಂಸದರು ಈ ರೀತಿ ಹೋಟೆಲ್ ನಲ್ಲಿ ದೋಸೆ ತಿನ್ನುತ್ತಿರುವ ವಿಡಿಯೋವನ್ನು ಖಂಡಿಸಿದ್ದ ಕಾಂಗ್ರೆಸ್ ಪಕ್ಷ, ಸಂಸದರ ಮನೆಗೆ ದೋಸೆ ಕಳಿಸುವ ಮೂಲಕ ಪ್ರತಿಭಟನೆ ಮಾಡಿತ್ತು.
Post a Comment