'ಪ್ರತಿಪಕ್ಷಗಳ ಒಗ್ಗಟ್ಟಿನ ಆಧಾರ ಸ್ತಂಭವೇ ಪ್ರಬಲ ಕಾಂಗ್ರೆಸ್': ಪಕ್ಷದ 2024ರ ಭವಿಷ್ಯ ಕುರಿತು ಜೈರಾಮ್ ರಮೇಶ್

 ಬಲಿಷ್ಠ ಕಾಂಗ್ರೆಸ್ ಪಕ್ಷವು ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಮುಖ ಆಧಾರಸ್ತಂಭವಾಗಿದ್ದು, ಪಕ್ಷವು ದುರ್ಬಲಗೊಳ್ಳಲು ಬಿಡುವುದಿಲ್ಲ ಎಂಬುದನ್ನು ಅದರ ಮಿತ್ರಪಕ್ಷಗಳು ಅರ್ಥಮಾಡಿಕೊಳ್ಳಬೇಕು ಎಂದು ಹಿರಿಯ ನಾಯಕ ಜೈರಾಮ್ ರಮೇಶ್ ಸೋಮವಾರ ಹೇಳಿದ್ದಾರೆ.

                        ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೈರಾಮ್ ರಮೇಶ್

By : Rekha.M
Online Desk

ನವದೆಹಲಿ: ಬಲಿಷ್ಠ ಕಾಂಗ್ರೆಸ್ ಪಕ್ಷವು ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಮುಖ ಆಧಾರಸ್ತಂಭವಾಗಿದ್ದು, ಪಕ್ಷವು ದುರ್ಬಲಗೊಳ್ಳಲು ಬಿಡುವುದಿಲ್ಲ ಎಂಬುದನ್ನು ಅದರ ಮಿತ್ರಪಕ್ಷಗಳು ಅರ್ಥಮಾಡಿಕೊಳ್ಳಬೇಕು ಎಂದು ಹಿರಿಯ ನಾಯಕ ಜೈರಾಮ್ ರಮೇಶ್ ಸೋಮವಾರ ಹೇಳಿದ್ದಾರೆ.

ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಭಾರತ್ ಜೋಡೋ ಯಾತ್ರೆ’ ಪಕ್ಷ ಸಂಘಟನೆಯಲ್ಲಿ ಹೊಸ ಚೈತನ್ಯವನ್ನು ತುಂಬಿದೆ ಮತ್ತು ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆಯು ಬಿಜೆಪಿಯನ್ನು ದಂಗುಬಡಿಸಿದೆ. ಪ್ರತಿಪಕ್ಷಗಳ ಒಗ್ಗಟ್ಟಿಗೆ ಪ್ರಮುಖವಾಗಿರುವ ಕಾಂಗ್ರೆಸ್ ಅನ್ನು ಬಲಪಡಿಸುವ ಉದ್ದೇಶದಿಂದ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

'ಭಾರತ್ ಜೋಡೋ ಯಾತ್ರೆಯ ನಂತರ ಪಕ್ಷವು ಜಾಗೃತಗೊಂಡಿದೆ, ಮುಂದೆ ಸಾಗುತ್ತಿದೆ ಮತ್ತು ಕಾಂಗ್ರೆಸ್ ಏನು ಮಾಡುತ್ತಿದೆ ಎಂಬುದನ್ನು ಎಲ್ಲಾ ಪಕ್ಷಗಳು ನೋಡುತ್ತಿರುವುದನ್ನು ಎಲ್ಲರೂ ನೋಡಿರುವುದು ನನಗೆ ಖುಷಿ ತಂದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಮಿತ್ರಪಕ್ಷಗಳಿಂದ ಹೇಳಿಕೆಗಳು ಕೇಳಿಬರುತ್ತಿವೆ. ಆದರೆ, ಕಾಂಗ್ರೆಸ್ ಬಲಿಷ್ಠವಾಗಿದ್ದರೆ ಮಾತ್ರ ಪ್ರತಿಪಕ್ಷಗಳ ಒಗ್ಗಟ್ಟು ಸಾಧ್ಯ' ಎಂದು ಹೇಳಿದರು.

'ವಿಪಕ್ಷಗಳ ಒಗ್ಗಟ್ಟು ಎಂದರೆ ಕಾಂಗ್ರೆಸ್ ಅನ್ನು ದುರ್ಬಲಗೊಳಿಸುವುದು ಎಂದಲ್ಲ, ಪಕ್ಷವು ಮತ್ತಷ್ಟು ದುರ್ಬಲವಾಗಲು ನಾವು ಬಿಡುವುದಿಲ್ಲ ಎಂಬುದನ್ನು ನಮ್ಮ ಮಿತ್ರಪಕ್ಷಗಳು ಸಹ ಅರ್ಥಮಾಡಿಕೊಳ್ಳಬೇಕು. ನಾವು ನಮ್ಮನ್ನು ಬಲಪಡಿಸಿಕೊಳ್ಳುತ್ತೇವೆ, ಬಲಿಷ್ಠ ಕಾಂಗ್ರೆಸ್ ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಮುಖ ಆಧಾರ ಸ್ತಂಭ' ಎಂದು ಅವರು ಹೇಳಿದರು.

ಭಾರತ್ ಜೋಡೋ ಯಾತ್ರೆಯು ಪ್ರತಿಪಕ್ಷಗಳ ಒಗ್ಗಟ್ಟಿಗಾಗಿ ಅಲ್ಲ, ಇದು ಕಾಂಗ್ರೆಸ್ ಅನ್ನು ಬಲಪಡಿಸಲು. ಪ್ರತಿಪಕ್ಷಗಳ ಒಗ್ಗಟ್ಟಿಗೆ ಕಾರಣವಾದರೆ ಅದು ಒಳ್ಳೆಯದು ಮತ್ತು ನಾವು ಅದನ್ನು ಸ್ವಾಗತಿಸುತ್ತೇವೆ. ಆದರೆ, ಪಕ್ಷದ ಸಂಘಟನೆಯನ್ನು ಬಲಪಡಿಸುವುದು ಮತ್ತು ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವುದು ನಮ್ಮ ಆದ್ಯತೆಯಾಗಿದೆ' ಎಂದು ತಿಳಿಸಿದರು.

ಕನ್ಯಾಕುಮಾರಿಯಿಂದ ಕಾಶ್ಮೀರ ಯಾತ್ರೆಯ ಐದನೇ ದಿನದಂದು ಒಟ್ಟು 102 ಕಿ.ಮೀ ಇಂದು ಸಂಜೆಯೊಳಗೆ ಪೂರ್ಣಗೊಳ್ಳಲಿದೆ. 'ಭಾರತ್ ಜೋಡೋ ಯಾತ್ರೆಯು ಮನ್ ಕಿ ಬಾತ್ ಅಲ್ಲ. ಇದು ಜನರ ಕಾಳಜಿ ಬಗ್ಗೆ. ಆದರೆ, ಇದು ಬಿಜೆಪಿಗೆ ಕಳವಳವಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಅವರು ಗಲಿಬಿಲಿಗೊಂಡಿದ್ದಾರೆ. ಯಾತ್ರೆಗೆ ಜನರ ಪ್ರತಿಕ್ರಿಯೆಯನ್ನು ಕಂಡು ಬಿಜೆಪಿಗೆ ಚಡಪಡಿಕೆ ಶುರುವಾಗಿದೆ' ಎಂದು ಹೇಳಿದರು.

'ಕ್ಯಾಬಿನೆಟ್ ಮಂತ್ರಿಗಳು ಸತ್ಯವನ್ನೇ ಮಾತನಾಡುತ್ತಾರೆ ಎಂದು ನಾವು ನಿರೀಕ್ಷಿಸುವುದಿಲ್ಲ. ನಾನು ಅವರ ಮಟ್ಟಕ್ಕೆ ಇಳಿಯುವುದಿಲ್ಲ. ಗೃಹ ಸಚಿವರು (ಅಮಿತ್ ಶಾ) ಮತ್ತು ಇತರ ಕೆಲವು ಸಚಿವರ ಮಟ್ಟಕ್ಕೆ ನಾನು ಇಳಿಯುವುದಿಲ್ಲ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಟೀ-ಶರ್ಟ್ ವಿಚಾರಕ್ಕೆ ವಾಗ್ದಾಳಿ ನಡೆಸಿದ್ದ ಅಮಿತ್ ಶಾ ಅವರನ್ನು ಉಲ್ಲೇಖಿಸಿದರು.

ನಾವು ನಮ್ಮ ಪಕ್ಷವನ್ನು ಪುನರುಜ್ಜೀವನಗೊಳಿಸಲು ಬಯಸಿದ್ದೇವೆ. ಪಕ್ಷದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವು ಗೋಚರಿಸುತ್ತಿದೆ. ಇದು ಉತ್ತಮ ಆರಂಭವಾಗಿದೆ. ಜನರ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ಇತರ ರಾಜ್ಯಗಳಲ್ಲಿಯೂ ಹೆಚ್ಚಿನ ಉತ್ಸಾಹವಿದೆ ಎಂದರು.

ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ದಾಳಿ ಮತ್ತು ಪ್ರತಿದಾಳಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೇಶ್, ಕಾಂಗ್ರೆಸ್‌ನಿಂದ ಆಕ್ರಮಣಕಾರಿ ಪ್ರತಿಕ್ರಿಯೆಗಳನ್ನು ಎದುರಿಸಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಿದ್ಧವಿಲ್ಲ. ಅವರು ಆಕ್ರಮಣಕಾರಿಯಾಗಿದ್ದರೆ, ನಾವು ಡಬಲ್ ಆಕ್ರಮಣಕಾರಿಯಾಗುತ್ತೇವೆ. ಆದರೆ ಭಾರತ್ ಜೋಡೋ ಯಾತ್ರೆಯು ಜನರನ್ನು ಒಗ್ಗೂಡಿಸುವ' ಸಲುವಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು.





Post a Comment

Previous Post Next Post